ನನ್ನ ಕಷ್ಟ ಕೇಳಲು ಪ್ರಣಬ್‌ ನಕಾರ : ವಿಜಯ್ ಮಲ್ಯ

KannadaprabhaNewsNetwork |  
Published : Jun 07, 2025, 12:07 AM ISTUpdated : Jun 07, 2025, 06:54 AM IST
ವಿಜಯ್ ಮಲ್ಯ | Kannada Prabha

ಸಾರಾಂಶ

ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಸಂಸ್ಥೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ 2008ರಲ್ಲಿ ಅಂದಿನ ಹಣಕಾಸು ಸಚಿವ ಪ್ರಣಬ್‌ ಮುಖರ್ಜಿ ಅವರನ್ನು ಭೇಟಿಯಾಗಿ ಸಂಸ್ಥೆಯ ಗಾತ್ರ ಕಡಿತಗೊಳಿಸುವ ಪ್ರಸ್ತಾಪ ಮುಂದಿಟ್ಟಿದ್ದೆ.  

 ಲಂಡನ್‌: ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಸಂಸ್ಥೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ 2008ರಲ್ಲಿ ಅಂದಿನ ಹಣಕಾಸು ಸಚಿವ ಪ್ರಣಬ್‌ ಮುಖರ್ಜಿ ಅವರನ್ನು ಭೇಟಿಯಾಗಿ ಸಂಸ್ಥೆಯ ಗಾತ್ರ ಕಡಿತಗೊಳಿಸುವ ಪ್ರಸ್ತಾಪ ಮುಂದಿಟ್ಟಿದ್ದೆ. ಈ ಮೂಲಕ ಸಂಸ್ಥೆಯನ್ನು ಉಳಿಸುವ ಉದ್ದೇಶ ಹೊಂದಿದ್ದೆ. ಆದರೆ ನನ್ನ ಈ ಪ್ರಸ್ತಾಪವನ್ನು ತಿರಸ್ಕರಿಸಲಾಯಿತು. ಇದು ಕಂಪನಿ ಪತನಕ್ಕೆ ನಾಂದಿ ಹಾಡಿತು ಎಂದು ಲಂಡನ್‌ಗೆ ಪರಾರಿ ಆಗರುವ ದೇಶಭ್ರಷ್ಟ ಉದ್ಯಮಿ ವಿಜಯ್‌ ಮಲ್ಯ ಹೇಳಿಕೊಂಡಿದ್ದಾರೆ.

ಯೂಟೂಬರ್‌ ರಾಜ್‌ ಶಮಾನಿ ಅವರ ಜತೆಗಿನ ಮಾತುಕತೆ ವೇಳೆ ಮಲ್ಯ ಅವರು ಈ ವಿಚಾರ ಬಹಿರಂಗಪಡಿಸಿದ್ದು, ಕಿಂಗ್‌ಫಿಶರ್‌ ಏರ್‌ಲೈನ್ಸ್ ವಿಮಾನ ಪತನಕ್ಕೆ 2008ರ ಅಂತಾರಾಷ್ಟ್ರೀಯ ಆರ್ಥಿಕ ಬಿಕ್ಕಟ್ಟೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

‘2005ರಲ್ಲಿ ಆರಂಭವಾದ ಕಿಂಗ್‌ ಫಿಶರ್‌ ಏರ್‌ಲೈನ್ಸ್‌ 2008ರ ವರೆಗೆ ಯಾವುದೇ ಸಮಸ್ಯೆ ಇಲ್ಲದೆ ಕಾರ್ಯಾಚರಣೆ ನಡೆಸಿತ್ತು. 2008ರಲ್ಲಿ ಅಂತಾರಾಷ್ಟ್ರೀಯ ಆರ್ಥಿಕ ಬಿಕ್ಕಟ್ಟಿನ ಬಳಿಕ ಪರಿಸ್ಥಿತಿ ಬದಲಾಯಿತು. ಇಂಥ ಪರಿಸ್ಥಿತಿಯಲ್ಲಿ ಅಂದಿನ ವಿತ್ತ ಸಚಿವ ಪ್ರಣಬ್‌ ಮುಖರ್ಜಿ ಅವರನ್ನು ಭೇಟಿಯಾಗಿ, ನಾನು ಸಂಕಷ್ಟದಲ್ಲಿದ್ದೇನೆ. ಕಿಂಗ್‌ಫಿಶರ್‌ ಏರ್‌ಲೈನ್ಸ್‌ನ ವಿಮಾನಗಳ ಸಂಖ್ಯೆ ಕಡಿತ ಮಾಡುವ, ಸಿಬ್ಬಂದಿಯನ್ನು ವಜಾಮಾಡುವ ಅಗತ್ಯವಿದೆ ಎಂದಿದ್ದೆ. ಆದರೆ, ಈ ಪ್ರಸ್ತಾಪ ತಿರಸ್ಕರಿಸಿದರು. ವಿಮಾನಗಳ ಸಂಖ್ಯೆ ಕಡಿಮೆ ಮಾಡಬೇಡಿ, ಬ್ಯಾಂಕುಗಳು ನಿಮಗೆ ಬೆಂಬಲ ನೀಡಲಿವೆ ಎಂದರು. ಅಲ್ಲಿಂದ ಎಲ್ಲವೂ ಶುರುವಾಯಿತು’ ಎಂದು ಮಲ್ಯ ಹೇಳಿಕೊಂಡಿದ್ದಾರೆ.

‘6 ಸಾವಿರ ಕೋಟಿ ರು. ಸಾಲ ಪಡೆಯಲಾಯಿತು. ಬಳಿಕವೂ ಕಿಂಗ್‌ಫಿಶರ್‌ ನಷ್ಟ ಅನುಭವಿಸಿತು. ಮಾಡಿದ ಸಾಲ ಮರುಪಾವತಿ ಉದ್ದೇಶದಿಂದ ಬ್ಯಾಂಕುಗಳ ಮುಂದೆ ಇಟ್ಟಿದ್ದ ನಾಲ್ಕು ಪ್ರಸ್ತಾಪಗಳು ತಿರಸ್ಕರಿಸಲ್ಪಟ್ಟಿತು. 15 ಬಾರಿ ಮನವಿ ಮಾಡಿದ ಹೊರತಾಗಿಯೂ ಬ್ಯಾಂಕುಗಳಿಂದ ಸಾಲದ ಖಾತೆಗಳ ಮಾಹಿತಿ ಸಿಗಲಿಲ್ಲ. ಕೊನೆಗೆ ಒಟ್ಟು ಸಾಲದ ಪ್ರಮಾಣ 14,131 ಕೋಟಿ ರು. ಎಂಬುದು ಹಣಕಾಸು ಸಚಿವರು ಸಂಸತ್ತಿನಲ್ಲಿ ಹೇಳಿಕೆ ಬಿಡುಗಡೆ ಮಾಡಿದಾಗಲೇ ಗೊತ್ತಾಯಿತು. ನಾನು ಮಾಡಿದ್ದ ಸಾಲಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗಿದ್ದರೂ ನನ್ನನ್ನು ಕಳ್ಳ ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದು ಇದೇ ವೇಳೆ ಅವರು ಆರೋಪಿಸಿದರು.

ತಾನು ಪಡೆದಿದ್ದು 6,203 ಕೋಟಿ ರು. ಸಾಲವಾದರೂ 14 ಸಾವಿರ ಕೋಟಿ ರು.ಗಳನ್ನು ಅಕ್ರಮವಾಗಿ ವಸೂಲು ಮಾಡಲಾಗುತ್ತಿದೆ ಎಂದು ಇತ್ತೀಚೆಗೆ ಮಲ್ಯ ಕೋರ್ಟ್‌ ಮೊರೆ ಹೋಗಿದ್ದರು.

ನನ್ನನ್ನು ದೇಶಭ್ರಷ್ಟ ಎನ್ನಿ, ಕಳ್ಳ ಎನ್ನಬೇಡಿ: ಮಲ್ಯ

ಲಂಡನ್‌: ‘ನನ್ನನ್ನು ದೇಶಭ್ರಷ್ಟ ಎನ್ನಿ.. ಪರವಾಗಿಲ್ಲ. ಆದರೆ ಚೋರ್‌ (ಕಳ್ಳ) ಎನ್ನಬೇಡಿ’ ಎಂದು ಉದ್ಯಮಿ ವಿಜಯ ಮಲ್ಯ ಹೇಳಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ‘ನೀವು ನನ್ನನ್ನು ದೇಶಭ್ರಷ್ಟ ಎಂದು ಕರೆಯಲು ಬಯಸಿದರೆ, ಮುಂದುವರಿಯಿರಿ. ಪರವಾಗಿಲ್ಲ. ಆದರೆ ಚೋರ್ (ಕಳ್ಳ) ಎಂಬ ಪದ ಎಲ್ಲಿಂದ ಬರುತ್ತಿದೆ? ನಾನು ಚೋರಿ (ಕಳ್ಳತನ) ಎಲ್ಲಿಂದ ಮಾಡಿದ್ದೇನೆ. ನಾನು ಸಾಲ ಹಿಂದಿರುಗಿಸಲು ಸಿದ್ಧ ಎಂದಿದ್ದೆ. ಔದ್ಯಮಿಕ ಕಾರಣಕ್ಕಷ್ಟೇ ವಿದೇಶಕ್ಕೆ ಹೋಗಿದ್ದೆ. ಆದರೆ ಮರಳಿ ಬಂದರೆ ನನಗೆ ನ್ಯಾಯ ಸಿಗುವ ಭರವಸೆ ಗೋಚರಿಸಲಿಲ್ಲ. ಹೀಗಾಗಿ ಭಾರತಕ್ಕೆ ಮರಳಲಿಲ್ಲ’ ಎಂದಿದ್ದಾರೆ.

ಭಾರತ ಬಿಡುವ ಮುನ್ನ ಜೇಟ್ಲಿಗೆ ಹೇಳಿದ್ದೆ: ಮಲ್ಯ

ಲಂಡನ್‌: ‘2016ರಲ್ಲಿ ಭಾರತ ಬಿಡುವ ಮುನ್ನ ಅಂದಿನ ಬಿಜೆಪಿ ನಾಯಕ ಹಾಗೂ ಕೇಂದ್ರ ವಿತ್ತ ಸಚಿವ ದಿ। ಅರುಣ್‌ ಜೇಟ್ಲಿ ಅವರಿಗೆ ಹೇಳಿದ್ದೆ’ ಎಂದು ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ.ಪೋಡ್‌ಕಾಸ್ಟ್‌ ಒಂದರಲ್ಲಿ ಸಂದರ್ಶನ ನೀಡಿರುವ ಮಲ್ಯ, ‘ನಾನು ಜಿನೇವಾಗೆ ಆರ್ಥಿಕ ಸಭೆಯೊಂದರಲ್ಲಿ ಭಾಗಿ ಆಗಲು ಹೋಗುತ್ತಿದ್ದೇನೆ ಎಂದು ಜೇಟ್ಲಿ ಅವರ ಕಚೇರಿಗೆ ಹೋಗಿ ಅವರನ್ನು ಖುದ್ದು ಭೇಟಿಯಾಗಿ ಚಹಾ ಕುಡಿಯುತ್ತ ಹೇಳಿದ್ದೆ. ಮರಳಿ ಬಂದು ಸಾಲ ತೀರಿಸಲಿದ್ದೇನೆ. ನಾನು ಭಾರತ ಬಿಡುತ್ತಿರುವ ಸುದ್ದಿ ಕೂಡ ಸುಳ್ಳು ಎಂದೂ ಅವರಿಗೆ ತಿಳಿಸಿದ್ದೆ’ ಎಂದು ಮಲ್ಯ ಹೇಳಿದ್ದಾರೆ.

ಜೇಟ್ಲಿ ಮೊದಲು,‘ಮಲ್ಯರನ್ನು ನಾನು ಭೇಟಿಯಾಗಿಲ್ಲ’ ಎಂದು ನಿರಾಕರಿಸಿದ್ದರು. ಆದರೆ ನನ್ನ-ಜೇಟ್ಲಿ ಭೇಟಿಯನ್ನು ಕಾಂಗ್ರೆಸ್‌ ಸಂಸದರೊಬ್ಬರು ನೊಡಿದ್ದರು. ಹೀಗಾಗಿ ನಂತರ ಜೇಟ್ಲಿ ಅವರು ಮಲ್ಯರನ್ನು ಭೇಟಿ ಮಾಡಿದ್ದು ನಿಜ ಎಂದು ಒಪ್ಪಿಕೊಂಡರು’ ಎಂದು ಮಲ್ಯ ಹೇಳಿದ್ದಾರೆ.ಕಾಂಗ್ರೆಸ್‌ ಕಿಡಿ:

ಮಲ್ಯ ಹೇಳಿಕೆ ಮೂಲಕ ಅವರು ದೇಶ ಬಿಟ್ಟು ಹೋಗಲು ಬಿಜೆಪಿ ಸಹಾಯ ಮಾಡಿದೆ ಎಂದು ಸಾಬೀತಾಗಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

PREV
Read more Articles on

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ