ವಕ್ಫ್‌ ಪಾಲಾಗಿರುವ ಆಸ್ತಿ ಅಪ್‌ಡೇಟ್‌ ಮಾಡದ ಕಾರಣ ರಾಜ್ಯಾದ್ಯಂತ ಸಾವಿರಾರು ರೈತರು ಸಂಕಷ್ಟಕ್ಕೆ

KannadaprabhaNewsNetwork | Updated : Oct 28 2024, 04:45 AM IST

ಸಾರಾಂಶ

ಯಾವುದಾದರೂ ಕೆಲಸ ಮಾಡುವಾಗ ನಾಲ್ಕಾಣೆ ತಪ್ಪಿದರೆ ಮುಂದಿನ ಬಾರಾಣೆ ತಪ್ಪುತ್ತದೆ ಎಂದು ಗ್ರಾಮೀಣ ಭಾಷೆಯಲ್ಲಿ ಗಾದೆಯ ಮಾತೊಂದಿದೆ.

ಶಿಕಾಂತ ಮೆಂಡೆಗಾರ

 ವಿಜಯಪುರ : ಯಾವುದಾದರೂ ಕೆಲಸ ಮಾಡುವಾಗ ನಾಲ್ಕಾಣೆ ತಪ್ಪಿದರೆ ಮುಂದಿನ ಬಾರಾಣೆ ತಪ್ಪುತ್ತದೆ ಎಂದು ಗ್ರಾಮೀಣ ಭಾಷೆಯಲ್ಲಿ ಗಾದೆಯ ಮಾತೊಂದಿದೆ. ಆ ಮಾತು ಇದೀಗ ರಾಜ್ಯ ವಕ್ಫ್‌ ಬೋರ್ಡ್‌ಗೆ ಸೂಕ್ತವಾಗಿ ಅನ್ವಯಿಸುತ್ತದೆ. ಏಕೆಂದರೆ, ಇನಾಮ್‌ ಆ್ಯಕ್ಟ್ (ಆಸ್ತಿದಾನ) ಹಾಗೂ ಭೂ ಸುಧಾರಣೆ ಆ್ಯಕ್ಟ್‌ನಲ್ಲಿ ವಕ್ಫ್‌ ಪಾಲಾಗಿರುವ ಆಸ್ತಿಗಳನ್ನು ಇಂದೀಕರಣ (ಅಪ್‌ಡೇಟ್‌) ಮಾಡದ ಕಾರಣ ಇಂದು ರಾಜ್ಯಾದ್ಯಂತ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ 50 ವರ್ಷಗಳ ಹಿಂದೆಯೇ ಆಗಿದ್ದ ವಕ್ಫ್‌ ಗೆಜೆಟ್‌ನಂತೆ ವಕ್ಫ್‌ಗೆ ಸೇರಿದ ಆಸ್ತಿಗಳನ್ನು ಅಂದೇ ಇಂದೀಕರಣ ಮಾಡಿಕೊಂಡಿದ್ದರೆ ಈದೀಗ ರಾಜ್ಯಾದ್ಯಂತ ಸಾವಿರಾರು ಹಿಂದೂ ರೈತರು ಸೇರಿ ಯಾರಿಗೂ ಅನ್ಯಾಯವಾಗುತ್ತಿರಲಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ವಕ್ಫ್‌ನಿಂದ ಆದ ಯಡವಟ್ಟು:

ವಕ್ಫ್‌ಗೆ ಸೇರಿದ ಆಸ್ತಿಗಳನ್ನೆಲ್ಲ ಸರ್ವೇ ಮಾಡಿ ಮೊದಲ ಬಾರಿಗೆ 1974ರಲ್ಲಿ ವಕ್ಫ್‌ ಟ್ರಿಬ್ಯೂನಲ್‌ನಿಂದ ಗೆಜೆಟ್ ಪಾಸ್‌ ಮಾಡಲಾಯಿತು. ಬಳಿಕ 1978ರಲ್ಲಿ ಹಾಗೂ 2016ರಲ್ಲಿ ಹೀಗೆ ಮೂರು ಬಾರಿ ವಕ್ಫ್‌ ಆಸ್ತಿಗಳ ಅಧಿಸೂಚನೆ ವಕ್ಫ್‌ ಟ್ರಿಬ್ಯೂನಲ್‌ನಿಂದ ಹೊರಬಿದ್ದಿದೆ. ಆದರೆ ವಿಜಯಪುರ ಜಿಲ್ಲಾದ್ಯಂತ ಇರುವ ಬಹುತೇಕ ವಕ್ಫ್‌ ಆಸ್ತಿಗಳೆಲ್ಲವನ್ನೂ 1974ರ ಅಧಿಸೂಚನೆಯಲ್ಲಿಯೇ ವಕ್ಫ್‌ ಆಸ್ತಿಗಳೆಂದು ಮಾಡಲಾಗಿದೆ. ಆದರೆ, ಅಂದಿನಿಂದ ಇಂದಿನವರೆಗೂ ಆ ಆಸ್ತಿಗಳ ದಾಖಲೆಗಳಲ್ಲಿ, ಪಹಣಿಗಳಲ್ಲಿ ವಕ್ಫ್‌ ಎಂದು ಇಂದೀಕರಣವನ್ನೇ ಮಾಡಿಲ್ಲ.

ಕಳೆದ 50 ವರ್ಷಗಳ ಹಿಂದೆ ವಕ್ಫ್‌ ಆಸ್ತಿಗಳನ್ನೆಲ್ಲ ಗುರುತಿಸಿ ಗೆಜೆಟ್ ಪಾಸ್ ಮಾಡಿದ್ದರೂ ಅವು ಕಾರ್ಯಗತಗೊಂಡಿಲ್ಲ. ಇದೀಗ ಆ ಆಸ್ತಿಗಳೆಲ್ಲ ಒಬ್ಬರಿಂದ ಒಬ್ಬರಿಗೆ ಎಂಬಂತೆ ಹಲವಾರು ರೈತರು ಬೇರೆ ಬೇರೆಯವರಿಗೆ ಮಾರಾಟವಾಗಿ ಬಿಟ್ಟಿವೆ. ಗೆಜೆಟ್ ಆದಾಗಲೇ ರಾಜ್ಯಾದ್ಯಂತ ಇಂದೀಕರಣ ಮಾಡುವ ಕೆಲಸವನ್ನು ಕಾರ್ಯಗತಗೊಳಿಸದೆ ಕಣ್ಮುಚ್ಚಿ ಕುಳಿತಿದ್ದ ವಕ್ಫ್‌ ಬೋರ್ಡ್ ಹಾಗೂ ಕಂದಾಯ ಇಲಾಖೆ ಈಗ ಆ ಕಾರ್ಯಕ್ಕೆ ಮುಂದಾಗಿರುವುದೇ ಸಮಸ್ಯೆಯ ಮೂಲ ಕಾರಣವಾಗಿದೆ. ಹೀಗಾಗಿ, ವಿಜಯಪುರ ಜಿಲ್ಲೆ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿರುವ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಕಳೆದ 50 ವರ್ಷಗಳಲ್ಲಿ ಅನೇಕ ಮುಸ್ಲಿಂ ಸಮುದಾಯದ ರೈತರು ಹಿಂದೂ ರೈತರಿಗೆ ಭೂಮಿ ಮಾರಾಟ ಮಾಡಿದ್ದಾರೆ. ಮುಸ್ಲಿಮರಿಂದ ಖರೀದಿ ಮಾಡಿದ ಜಮೀನುಗಳಲ್ಲೇ ತಲೆತಲೆಮಾರುಗಳಿಂದ ಹಿಂದೂ ರೈತರು ಉಳುಮೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ದಾಖಲೆಗಳಲ್ಲಿ ಇಂದಿಗೂ ಮುಸ್ಲಿಂ ರೈತರ ಹೆಸರುಗಳೇ ಇರುವುದರಿಂದ ಇವರ್‍ಯಾರಿಗೂ ಅಸಲಿಗೆ ಇದು ವಕ್ಫ್‌ ಭೂಮಿ ಎಂಬುದೇ ಗೊತ್ತಿಲ್ಲ. ಹೀಗಾಗಿ, ಅತ್ತ ಹಣವೂ ಹೋಯ್ತು, ಇತ್ತ ಆಸ್ತಿಯೂ ಹೋಗುತ್ತಿದೆ ಎಂದು ಮುಸ್ಲಿಮರಿಂದ ಜಮೀನು ಖರೀದಿ ಮಾಡಿದ ಹಿಂದೂ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ವಕ್ಫ್‌ಗೆ ಒಳಪಡುವ ಆಸ್ತಿಗಳು:

ಜಿಲ್ಲೆಯಲ್ಲಿ ವಕ್ಫ್‌ ಆಸ್ತಿ ಖರೀದಿಸಿದ ಒಟ್ಟು 433 ರೈತರಿದ್ದು, ಇದುವರೆಗೂ 124 ರೈತರಿಗೆ ನೋಟಿಸ್‌ ನೀಡಲಾಗಿದೆ. ವಕ್ಫ್‌ಗೆ ಒಳಪಡುವ ಒಟ್ಟು ಆಸ್ತಿ 14,201 ಎಕರೆಗಳು. ಅದರಲ್ಲಿ 11,835 ಎಕರೆ ಆಸ್ತಿ ಇಂದೀಕರಣ ಆಗದೆ ಉಳಿದುಕೊಂಡಿದೆ. ಇದೀಗ ಅವುಗಳ ದಾಖಲೆಗಳನ್ನು ಜಿಲ್ಲಾಡಳಿತದಿಂದಲೇ ಪರಿಶೀಲನೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ವಿಜಯಪುರ 7, ಬಬಲೇಶ್ವರ 17, ಕೊಲ್ಹಾರ 10, ನಿಡಗುಂದಿ 5, ಮುದ್ದೇಬಿಹಾಳ 5, ತಾಳಿಕೋಟೆ 22, ಇಂಡಿ 29, ಸಿಂದಗಿ 15, ದೇವರಹಿಪ್ಪರಗಿ 14 ಸೇರಿದಂತೆ 433 ರೈತರಿಗೆ 124 ತಿಳಿವಳಿಕೆಯ ನೋಟಿಸ್‌ ನೀಡಲಾಗಿದೆ.

ವಕ್ಫ್‌ ತಪ್ಪಿನಿಂದ ಜನರಿಗೆ ಸಮಸ್ಯೆ

1974ರಲ್ಲಿ ಗೆಜೆಟ್ ಆದ ಮೇಲೆ ವಕ್ಫ್‌ನವರು ಇಂದೀಕರಣ ಮಾಡಿಕೊಂಡಿದ್ದರೆ ಇಂದು ಈ ಸಮಸ್ಯೆ ಆಗುತ್ತಿರಲಿಲ್ಲ. ಇದರಲ್ಲಿ ವಕ್ಫ್ ಅವರದ್ದು ತಪ್ಪಿದೆ. ವಕ್ಫ್‌ ಆಸ್ತಿ ಎಂಬುದು ಗೊತ್ತಿಲ್ಲದೆ ಮುಸ್ಲಿಂ ಆಸ್ತಿಗಳನ್ನು ಖರೀದಿಸಿದ ಹಿಂದೂ ರೈತರ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.- ಎಂ.ಬಿ.ಪಾಟೀಲ್, ಉಸ್ತುವಾರಿ ಸಚಿವ

ವಿಜಯಪುರ ರೈತರಿಂದ ಈ ಸಲ ದೀಪಾವಳಿ ಆಚರಣೆ ಇಲ್ಲವಿಜಯಪುರ: ಜಿಲ್ಲೆಯ ಕೆಲ ರೈತರ ಜಮೀನಿನ ಉತಾರೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿ, ಅವರಿಗೆ ನೋಟಿಸ್‌ ನೀಡಿರುವುದನ್ನು ಖಂಡಿಸಿ ಜಿಲ್ಲೆಯ ರೈತರು ಈ ಬಾರಿ ದೀಪಾವಳಿ ಸಂಭ್ರಮಾಚರಣೆ ಮಾಡದಿರಲು ನಿರ್ಧರಿಸಿದ್ದಾರೆ. ಅ.29ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಅಲ್ಲಿಯೇ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಲು ಮುಂದಾಗಿದ್ದು, ಅಲ್ಲಿಯೇ ದೀಪ ಬೆಳಗಿಸಿ, ಅಡುಗೆ ಮಾಡಿ ಊಟ ಮಾಡಿ ಅನಿರ್ದಿಷ್ಟ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ತಂದೆ, ಅಜ್ಜನ ಕಾಲದಿಂದಲೂ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರಿಗೆ ಇದೀಗ ವಕ್ಫ್‌ ಕಾಯ್ದೆ ನುಂಗಲಾರದ ತುತ್ತಾಗಿದೆ. ಇದ್ದಕ್ಕಿದ್ದಂತೆ ಬಂದು ವಕ್ಫ್‌ನವರು ಇದು ನಮ್ಮ ಆಸ್ತಿ ಎನ್ನುತ್ತಿದ್ದಾರೆ. ಇತ್ತ ಕಂದಾಯ ಇಲಾಖೆಯಿಂದ ಬರುತ್ತಿರುವ ನೋಟಿಸ್‌ಗಳಿಂದಾಗಿ ದೀಪಾವಳಿಯ ಬೆಳಕಿನಲ್ಲಿ ಖುಷಿಯಾಗಿರಬೇಕಿದ್ದ ಅನ್ನದಾತರ ಮನೆಗಳಲ್ಲಿ ಕತ್ತಲೆ ಕವಿದಂತಾಗಿದೆ.

- ಬಾಳಪ್ಪ ತೇರದಾಳ, ನೋಟಿಸ್ ಸ್ವೀಕರಿಸಿದ ರೈತ.

ಏನಿದು ಸಮಸ್ಯೆ?- ವಿಜಯಪುರದಲ್ಲಿ 124 ರೈತರಿಗೆ ನಿಮ್ಮ ಜಮೀನು ವಕ್ಫ್‌ ಮಂಡಳಿಗೆ ಸೇರಿದ್ದು ಎಂದು ವಕ್ಫ್‌ ಮಂಡಳಿಯಿಂದ ನೋಟಿಸ್‌- ಹಲವು ತಲೆಮಾರುಗಳ ಹಿಂದೆ ಮುಸ್ಲಿಮರಿಂದ ಜಮೀನು ಖರೀದಿಸಿ ಹಿಂದುಗಳಿಗೆ ಈ ಸಮಸ್ಯೆ- ವಕ್ಫ್‌ ಆಸ್ತಿಯನ್ನೇ ಹಿಂದುಗಳಿಗೆ ಮಾರಿದ್ದ ಮುಸ್ಲಿಂ ಕುಟುಂಬಗಳು- ಹೀಗೆ ಆಸ್ತಿ ಖರೀದಿಸಿದ 433 ರೈತರು ವಿಜಯಪುರ ಜಿಲ್ಲೆಯಲ್ಲಿದ್ದಾರೆ- ಒಟ್ಟು 11,835 ಎಕರೆಯಷ್ಟು ಕೃಷಿ ಭೂಮಿ ಕೈತಪ್ಪಿಹೋಗುವ ಆತಂಕ ರೈತರಲ್ಲಿದೆ- ವಕ್ಫ್‌ ಮಂಡಳಿ 1974ರಲ್ಲೇ ದಾಖಲೆ ಅಪ್‌ಡೇಟ್‌ ಮಾಡಿಕೊಂಡಿದ್ದರೆ ರೈತರಿಗೆ ಇಂದು ಸಮಸ್ಯೆ ಆಗುತ್ತಿರಲಿಲ್ಲ?

Share this article