ನವದೆಹಲಿ: ದೆಹಲಿ ವಿಧಾನಸಭೆಯ 70 ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಲಿದೆ. ಸತತ 10 ವರ್ಷಗಳಿಂದ ಅಧಿಕಾರದಲ್ಲಿರುವ ಆಮ್‌ಆದ್ಮಿ ಪಕ್ಷ ಹ್ಯಾಟ್ರಿಕ್ ಕನಸಿನಲ್ಲಿದ್ದರೆ 27 ವರ್ಷಗಳ ಬಳಿಕ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿ ಬಿಜೆಪಿ ಮತ್ತು 10 ವರ್ಷಗಳ ಬಳಿಕ ಅಧಿಕಾರದ ಗುರಿಯಲ್ಲಿ ಕಾಂಗ್ರೆಸ್ ಇದೆ.
ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಲಿದ್ದು, ದೆಹಲಿಯ ಮುಂದಿನ ಚುಕ್ಕಾಣಿ ಯಾರ ಕೈಗೆ ಸಿಗಲಿದೆ ಎಂಬುದರ ಕುರಿತು ಅವು ಸುಳಿವು ನೀಡುವ ಸಾಧ್ಯತೆ ಇದೆ.
ಪ್ರಮುಖ ಅಭ್ಯರ್ಥಿಗಳು:ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ದ ಬಿಜೆಪಿಯಿಂದ ಪರ್ವೇಶ್ ಶರ್ಮಾ, ಹಾಲಿ ಸಿಎಂ ಆತಿಷಿ ವಿರುದ್ಧ ಬಿಜೆಪಿಯಿಂದ ರಮೇಶ್ ಬಿಧೂರಿ, ಕಾಂಗ್ರೆಸ್‌ನಿಂದ ಅಲ್ಕಾ ಲಂಬಾ ಕಣಕ್ಕೆ ಉಳಿದಿದ್ದಾರೆ. ಉಳಿದಂತೆ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ, ಮಾಜಿ ಸಚಿವ ಸತ್ಯೇಂದ್ರ ಜೈನ್, ಸೋಮನಾಥ್ ಭಾರ್ತಿ, ಮೊದಲಾದವರು ಕಣದಲ್ಲಿದ್ದಾರೆ.
ಉಚಿತಗಳ ಸುರಿಮಳೆ:ಗ್ಯಾರಂಟಿ: ದೇಶದಲ್ಲೇ ಮೊದಲ ಬಾರಿಗೆ ಉಚಿತ ವಿದ್ಯುತ್, ಉಚಿತ ಕುಡಿಯುವ ನೀರು ಯೋಜನೆ ಘೋಷಿಸಿ, ಇತರೆ ಪಕ್ಷಗಳಿಗೆ ದಾರಿ ತೋರಿಸಿದ್ದ ಆಮ್‌ಆದ್ಮಿ ಪಕ್ಷ ಈ ವರ್ಷದ ಹಳೆಯ ಗ್ಯಾರಂಟಿ ಜೊತೆಗೆ ಇನ್ನಷ್ಟು ಉಚಿತಗಳ ಘೋಷಣೆ ಮಾಡಿದೆ. ಹೀಗಾಗಿ ಅನ್ಯದಾರಿ ಇಲ್ಲದೇ ಬಿಜೆಪಿ ಮತ್ತು ಕಾಂಗ್ರೆಸ್ ಕೂಡಾ ನಾನಾ ರೀತಿಯ ಗ್ಯಾರಂಟಿ ಘೋಷಿಸಿವೆ. ಬಹುತೇಕ ಮೂರೂ ಪಕ್ಷಗಳು ಕರ್ನಾಟಕ ಮಾದರಿ ಗೃಹಲಕ್ಷ್ಮೀ, ಉಚಿತ ವಿದ್ಯುತ್, ಉಚಿತ ನೀರು, ನಿರುದ್ಯೋಗಿಗಳಿಗೆ ಭತ್ಯೆ, ಉಚಿತ ಬಸ್ ಪ್ರಯಾಣದ ಭರವಸೆ ನೀಡಿವೆ.
ತುರುತಿನ ಹೋರಾಟ:ರಾಜ್ಯಗಳ ಪುನರ್ ವಿಂಗಡನೆ ಬಳಿಕ 1993ರಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. 3 ವರ್ಷಗಳ ಅವಧಿಯಲ್ಲಿ ಪಕ್ಷವು ಮದನ್‌ಲಾಲ್ ಖುರಾನಾ, ಸಾಹೀಬ್ ಸಿಂಗ್ ವರ್ಮಾ ಮತ್ತು ಸುಷ್ಮಾ ಸ್ವರಾಜ್ ಅವರನ್ನು ಮುಖ್ಯಮಂತ್ರಿಗಳಾಗಿ ನೇಮಿಸಿ ಕಸರತ್ತು ನಡೆಸಿತ್ತು.
ಬಳಿಕ 1998, 2003 ಮತ್ತು 2008ರ ಚುನಾವಣೆಯಲ್ಲಿ ಶೀಲಾ ದೀಕ್ಷಿತ್ ಪಕ್ಷಕ್ಕೆ ಹ್ಯಾಟ್ರಿಕ್ ಗೆಲುವು ತಂದುಕೊಟ್ಟು 3 ಬಾರಿ ಮುಖ್ಯಮಂತ್ರಿಯಾಗಿದ್ದರು.2013ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದ ಕಾರಣ ಕಾಂಗ್ರೆಸ್ ಬೆಂಬಲದೊಂದಿಗೆ ಆಪ್ ಸರ್ಕಾರ ರಚಿಸಿತ್ತು. ಆದರೆ ಕೇವಲ 49 ದಿನಗಳ ಬಳಿಕ ಕೇಜ್ರಿವಾಲ್ ರಾಜೀನಾಮೆ ಸಲ್ಲಿಸಿದರು. ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.
2015ರ ಬಳಿಕ ಆಪ್ ಸತತ 2 ಬಾರಿ ಅಧಿಕಾರಕ್ಕೆ ಬಂದಿದೆ. 2 ಬಾರಿ ಅರವಿಂದ್ ಕೇಜ್ರಿವಾಲ್ ಮತ್ತು ಹಾಲಿ ಆತಿಷಿ ದೆಹಲಿ ಸಿಎಂ ಆಗಿದ್ದಾರೆ.ಛತ್ತೀಸ್‌ಗಢದಲ್ಲಿ ಟಿಕೆಟ್ ವಂಚಿತ ಆಕ್ಷಾಂಕ್ಷಿಗಳ ನೊಂದ ಆತ್ಮ ಪಕ್ಷ
ರಾಯ್ಪುರ: ಛತ್ತೀಸ್‌ಗಢದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಟಿಕೆಟ್ ವಂಚಿತ ಅಭ್ಯರ್ಥಿಗಳು ಹಾಗೂ ಪಕ್ಷಾಂತರಿಗಳು ತಮ್ಮ ಪಕ್ಷಗಳಿಗೆ ರಾಜೀನಾಮೆ ನೀಡಿದ್ದು, ಎಲ್ಲರೂ ಒಟ್ಟಾಗಿ ‘ನೊಂದ ಆತ್ಮ ಪಕ್ಷ’ ಕಟ್ಟಿಕೊಂಡಿದ್ದಾರೆ. ಜೊತೆಗೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ಹಳೆದ ಪಕ್ಷಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.‘ಪಕ್ಷಕ್ಕಾಗಿ ಎಷ್ಟೇ ಶ್ರಮಿಸಿದರೂ, ಹೊಸಬರಿಗೆ ಆದ್ಯತೆ ನೀಡುವ ಸಲುವಾಗಿ ತಮ್ಮನ್ನು ಕಡೆಗಣಿಸಲಾಗಿದೆ’ ಎಂದು ಆರೋಪಿಸಿರುವ ಇವರು, ಹಿರಿಯ ಸ್ಥಳೀಯ ರಾಜಕಾರಣಿ ಸುರೇಶ್ ಸಿಹೋರ್ ಅವರನ್ನು ‘ನೊಂದ ಆತ್ಮ ಪಕ್ಷ’ದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಈ ಪಕ್ಷವು, ಫೆ.11ರಂದು ನಡೆಯಲಿರುವ ಚುನಾವಣೆಗೆ ಬೆಮೆತರಾ ಜಿಲ್ಲೆಯ ದೇವ್ಕರ್ ನಗರ ಪಂಚಾಯಿತಿಯ ಎಲ್ಲಾ 15 ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅದಕ್ಕಾಗಿ ಸಭೆಗಳನ್ನು ನಡೆಸುತ್ತಿದ್ದು, ಜನಬೆಂಬಲ ಗಳಿಸಲು ಅಭಿಯಾನವನ್ನೂ ಮಾಡುತ್ತಿದೆ. ಆದರೆ ಪಕ್ಷಕ್ಕಿನ್ನೂ ಅಧಿಕೃತ ಚಿಹ್ನೆ ಲಭಿಸಿಲ್ಲ.ಕಾಂಗ್ರೆಸ್‌ನಿಂದ 2014- 2019 ಅವಧಿಯಲ್ಲಿ ಕಾರ್ಪೊರೇಟರ್ ಆಗಿದ್ದ, ಈಗ ನೊಂದ ಆತ್ಮ ಪಕ್ಷ ಸೇರಿರುವ ವಿಮಲೇಶ್ ದ್ವಿವೇದಿ ಮಾತನಾಡಿ, ‘ದೇವ್ಕರ್ ನಗರ ಪಂಚಾಯಿತಿಯ ಕಾರ್ಪೊರೇಟರ್ ಹಾಗೂ ಅಧ್ಯಕ್ಷ ಹುದ್ದೆಗೆ ಪಕ್ಷ ಸ್ಪರ್ಧಿಸುತ್ತಿದೆ. ನಾನು ವಾರ್ಡ್ 6ರಿಂದ ಕಣಕ್ಕಿಳಿದಿದ್ದೇನೆ. ಇದು ನಗರ ಪ್ರದೇಶದಲ್ಲಿ ಸಂಚಲನ ಸೃಷ್ಟಿಸಲಿದೆ’ ಎಂದರು.