ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ ತರುವ ವಕ್ಫ್‌ ಬಿಲ್‌ಗೆ ಸಂಸತ್‌ ಅನುಮೋದನೆ ಸನ್ನಿಹಿತ?

KannadaprabhaNewsNetwork | Updated : Apr 04 2025, 04:15 AM IST

ಸಾರಾಂಶ

ವಕ್ಫ್‌ ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ ತರುವ, ಮಂಡಳಿಯಲ್ಲಿ ಎಲ್ಲರಿಗೂ ಅವಕಾಶ ನೀಡುವ, ಅದರ ಸರ್ವಾಧಿಕಾರಕ್ಕೆ ಕತ್ತರಿ ಹಾಕುವ ಬಹುನಿರೀಕ್ಷಿತ ವಕ್ಫ್‌ ತಿದ್ದುಪಡಿ ವಿಧೇಯಕಕ್ಕೆ ಸಂಸತ್ತಿನ ಅನುಮೋದನೆ ಸಿಗುವ ಕ್ಷಣ ಸನ್ನಿಹಿತವಾಗಿದೆ.  

ನವದೆಹಲಿ: ವಕ್ಫ್‌ ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ ತರುವ, ಮಂಡಳಿಯಲ್ಲಿ ಎಲ್ಲರಿಗೂ ಅವಕಾಶ ನೀಡುವ, ಅದರ ಸರ್ವಾಧಿಕಾರಕ್ಕೆ ಕತ್ತರಿ ಹಾಕುವ ಬಹುನಿರೀಕ್ಷಿತ ವಕ್ಫ್‌ ತಿದ್ದುಪಡಿ ವಿಧೇಯಕಕ್ಕೆ ಸಂಸತ್ತಿನ ಅನುಮೋದನೆ ಸಿಗುವ ಕ್ಷಣ ಸನ್ನಿಹಿತವಾಗಿದೆ. 

ಬುಧವಾರ ತಡರಾತ್ರಿವರೆಗೂ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಮಸೂದೆ 288 ಮತ ಪಡೆದು ಬಹುಮತದಿಂದ ಅಂಗೀಕಾರಗೊಂಡಿದೆ. ಇದರ ಬೆನ್ನಲ್ಲೇ ವಿಧೇಯಕವನ್ನು ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದು, ತಡರಾತ್ರಿವರೆಗೂ ಚರ್ಚೆ ನಡೆದಿದೆ ಹಾಗೂ ಅಂಗೀಕಾರ ಸನ್ನಿಹಿತವಾಗಿದೆ.ಲೋಕಸಭೆಯಂತೆ ರಾಜ್ಯಸಭೆಯಲ್ಲೂ ವಿಪಕ್ಷಗಳ ಸದಸ್ಯರು ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಬಲವಾಗಿ ವಿರೋಧಿಸಿದರೆ, ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಬಲವಾಗಿ ಸಮರ್ಥನೆ ಮಾಡಿದ ಕಾರಣ ಗುರುವಾರದ ಕಲಾಪ ಭಾರೀ ಪ್ರಮಾಣದಲ್ಲಿ ಕಾವೇರಿತ್ತು.

ಮಸೂದೆ ಮಂಡನೆ:

ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು , ‘ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೊದಲು ನಾವು ರಾಜ್ಯ ಸರ್ಕಾರಗಳು, ಅಲ್ಪಸಂಖ್ಯಾತ ಆಯೋಗಗಳು ಮತ್ತು ವಕ್ಫ್ ಮಂಡಳಿಗಳೊಂದಿಗೆ ಸಮಾಲೋಚಿಸಿದ್ದೇವೆ. ವ್ಯಾಪಕ ಚರ್ಚೆಗಳ ನಂತರವೇ ಅಂಗೀಕಾರವಾಗಿದೆ. ಇಂದು ದೇಶದಲ್ಲಿ 8.72 ಲಕ್ಷ ವಕ್ಫ್ ಆಸ್ತಿಗಳಿವೆ. 2006ರಲ್ಲಿ, ಸಾಚಾರ್ ಸಮಿತಿಯು 4.9 ಲಕ್ಷ ವಕ್ಫ್ ಆಸ್ತಿಗಳಿಂದ 12,000 ಕೋಟಿ ರು. ಆದಾಯ ಬರುತ್ತದೆ ಎಂದು ಅಂದಾಜಿಸಿದೆ. ಈ ಆಸ್ತಿಗಳಿಂದ ಅಪಾರ ಪ್ರಮಾಣದ ಆದಾಯ ಬರುತ್ತದೆ’ ಎಂದರು.

ಈ ಮಸೂದೆ ಅಸಾಂವಿಧಾನಿಕ, ಅಕ್ರಮ ಮತ್ತು ಮುಸ್ಲಿಮರ ಹಕ್ಕುಗಳನ್ನು ಕಸಿಯುತ್ತದೆ ಎಂದು ಹಲವರು ಆರೋಪ ಮಾಡುತ್ತ ಬಂದಿದ್ದಾರೆ. ಆದರೆ ಈ ಎಲ್ಲ ಆರೋಪಗಳನ್ನು ನಾನು ಅಲ್ಲಗಳೆಯುತ್ತೇನೆ. ಇದು ಮುಸ್ಲಿಂ ಧರ್ಮದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ, ಆದರೆ ಆಸ್ತಿಗಳೊಂದಿಗೆ ಮಾತ್ರ ವ್ಯವಹರಿಸುತ್ತದೆ. ಮುಸ್ಲಿಂ ಮಹಿಳೆಯರನ್ನು ಸಬಲೀಕರಣಗೊಳಿಸಿ, ಎಲ್ಲಾ ಮುಸ್ಲಿಂ ಪಂಗಡಗಳ ಹಕ್ಕುಗಳನ್ನು ರಕ್ಷಿಸುತ್ತದೆ’ ಎಂದು ತಿಳಿಸಿದರು.

ಪ್ರತಿಪಕ್ಷಗಳ ವಿರೋಧ:

ವಿಧೇಯಕವನ್ನು ಬಲವಾಗಿ ವಿರೋಧಿಸಿ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಇದು ವಿಭಜಕ ಮತ್ತು ಅಸಾಂವಿಧಾನಿಕ. ಅಲ್ಪಸಂಖ್ಯಾತರನ್ನು ತುಳಿದು, ಹಿಂಸಿಸಲು ಇದನ್ನು ತರಲಾಗಿದೆ’ ಎಂದು ಟೀಕಿಸಿದ್ದಾರೆ. ಜೊತೆಗೆ ಈ ಮಸೂದೆ ಲೋಕಸಭೆಯಲ್ಲಿ 288 ಮತಗಳನ್ನು ಪಡೆದು ಅಂಗೀಕಾರವಾಗಿದ್ದರೂ, 232 ವೋಟುಗಳು ಇದರ ವಿರುದ್ಧ ಬಿದ್ದಿದ್ದವು. ಆದ್ದರಿಂದ ಇದಕ್ಕೆ ನಿರ್ಣಾಯಕ ಬೆಂಬಲ ಸಿಗಲಿಲ್ಲ. ಜನರ ಹಕ್ಕುಗಳನ್ನು ನಾಶಪಡಿಸುವ ಕೆಲ ನಿಯಮಗಳನ್ನು ಬಿಟ್ಟರೆ, ಇದು 1995ರ ಕಾಯ್ದೆಗಿಂತ ಭಿನ್ನವಾಗಿಲ್ಲ’ ಎಂದು ಖರ್ಗೆ ಹೇಳಿದ್ದಾರೆ. ಜೊತೆಗೆ ‘ಮಸೂದೆಯನ್ನು ಪ್ರತಿಷ್ಠೆಯ ವಿಷಯ ಮಾಡಿಕೊಳ್ಳಬಾರದು’ ಎಂದ ಅವರು, ಅದನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ಮಸೂದೆ ಮುಸ್ಲಿಂ ವಿರೋಧಿಯಾಗಿದ್ದು, ಸಮಾಜದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. ಮುಸ್ಲಿಮರನ್ನು 2ನೇ ದರ್ಜೆಯ ನಾಗರಿಕರಾಗಿ ಕಾಣುವುದು ಈ ಮಸೂದೆಯ ಉದ್ದೇಶ. ಇದು ಸಂಪೂರ್ಣ ಸಂವಿಧಾನಬಾಹಿರ ಎಂದು ಕಾಂಗ್ರೆಸ್‌ ಸಯ್ಯದ್‌ ನಾಸಿರ್‌ ಹುಸೇನ್‌ ಆರೋಪಿಸಿದರು. ಸಮಾಜವಾದಿ ಪಕ್ಷದ ವಕ್ತಾರ ಅಮೀಕ್‌ ಜಮೇಯಿ ಮಾತನಾಡಿ, ‘ಸರ್ಕಾರವು ವಕ್ಫ್ ಕಾಯ್ದೆಯ ಮೂಲಕ ಪ್ರಮುಖ ಆಸ್ತಿಗಳನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ಮಾರಲು ಬಯಸುತ್ತದೆ. ಮಠ ಹಾಗೂ ತೀರ್ಥಕ್ಷೇತ್ರಗಳ ಕೋಟಿಗಟ್ಟಲೆ ಆಸ್ತಿಯ ಮೇಲೆಯೂ ಹೀಗೇ ಕಣ್ಣು ಹಾಕುತ್ತೀರಾ?’ ಎಂದು ಪ್ರಶ್ನಿಸಿದರು. ಆರ್‌ಜೆಡಿ ಸಂಸದ ಮನೋಜ್‌ ಝಾ ಮಾತನಾಡಿ, ‘ಹಳೇ ಮಸೀದಿಗಳಲ್ಲಿ ಶೋಧ, ಪೂಜಾ ಸ್ಥಳಗಳ ಮೇಲೆ ದಾಳಿಗಳು ನಡೆಯುತ್ತಿರುವ ಹೊತ್ತಿನಲ್ಲಿ ಈ ಮಸೂದೆಯ ಉದ್ದೇಶ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ’ ಎಂದರು. ಎಐಎಂಐಎಂ ನಾಯಕ ಇಮ್ತಿಯಾಜ್‌ ಜಲೀಲ್‌ ಮಾತನಾಡಿ ‘ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರರನ್ನು ಸೇರಿಸಿಕೊಂಡಂತೆ ಶಿರಡಿ ಸಾಯಿಬಾಬಾ ಅಥವಾ ಟಿಟಿಡಿಗೆ ನನ್ನನ್ನು ಸೇರಿಸಿಕೊಳ್ಳುತ್ತೀರಾ’ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಸರ್ಕಾರ ತಿರುಗೇಟು:

ವಿಧೇಯಕ ಸಮರ್ಥಿಸಿ ಮಾತನಾಡಿದ ಕೇಂದ್ರ ಸಚಿವ ಜೆ.ಪಿ.ನಡ್ಡಾ, ‘ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರವಿದ್ದಾಗ ಮುಸ್ಲಿಂ ಮಹಿಳೆಯರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡಲಾಗಿತ್ತು. ಆದರೆ ಮೋದಿ ಸರ್ಕಾರ ತ್ರಿವಳಿ ತಲಾಕ್‌ ರದ್ದತಿಯ ಮೂಲಕ ಅವರನ್ನು ಮುಖ್ಯವಾಹಿನಿಗೆ ತಂದಿದೆ. ಇದೀಗ ತಂದ ಸುಧಾರಣೆ ವಕ್ಫ್‌ ಮಂಡಳಿಗೆ ಹೊಸ ಸ್ವರೂಪ ನೀಡಿದೆ’ ಎಂದರು.

ದೇವೇಗೌಡ ಬೆಂಬಲ:

ಮಸೂದೆ ಬೆಂಬಲಿಸಿದ ಮಾತನಾಡಿದ ಮಾಜಿ ಪ್ರಧಾನಿ, ಜೆಡಿಎಸ್‌ ನಾಯಕ ‘ನಡ್ಡಾ ಅವರ ಭಾಷಣ ಕೇಳಿದ ಬಳಿಕ ಹೇಳಲು ಏನೂ ಉಳಿದಿಲ್ಲ. ಈ ಮಸೂದೆಯನ್ನು ತಂದಿದ್ದಕ್ಕಾಗಿ ಮೋದಿ ಸರ್ಕಾರಕ್ಕೆ ಅಭಿನಂದನೆ’ ಎಂದು ಹೇಳಿದರು.

ಲೋಕಸಭೆ ಅನುಮೋದನೆ ಬಳಿಕ ರಾಜ್ಯಸಭೆಯಲ್ಲಿ ಬಿರುಸಿನ ಚರ್ಚೆ

ವಕ್ಫ್‌ ಕಾಯ್ದೆ ಮೂಲಕ ಆಸ್ತಿ ಕಬಳಿಕೆಗೆ ಸರ್ಕಾರ ಸಂಚು: ವಿಪಕ್ಷ ಟೀಕೆ

ಕಾಯ್ದೆಗೂ ಮುಸ್ಲಿಂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ: ಸರ್ಕಾರ

ಮಸೂದೆಗೆ ನಿರ್ಣಾಯಕ ಬೆಂಬಲವಿಲ್ಲಇದು ವಿಭಜಕ ಮತ್ತು ಅಸಾಂವಿಧಾನಿಕ. ಅಲ್ಪಸಂಖ್ಯಾತರನ್ನು ತುಳಿದು, ಹಿಂಸಿಸಲು ಇದನ್ನು ತರಲಾಗಿದೆ. ಈ ಮಸೂದೆ ಲೋಕಸಭೆಯಲ್ಲಿ 288 ಮತ ಪಡೆದು ಅಂಗೀಕಾರವಾಗಿದ್ದರೂ, 232 ಮತ ಇದರ ವಿರುದ್ಧ ಬಿದ್ದಿದ್ದವು. ಆದ್ದರಿಂದ ಇದಕ್ಕೆ ನಿರ್ಣಾಯಕ ಬೆಂಬಲವಿಲ್ಲ.- ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ವಿಪಕ್ಷ ನಾಯಕ

ಮುಖ್ಯವಾಹಿನಿಗೆ ಮುಸ್ಲಿಮರು

ಕಾಂಗ್ರೆಸ್‌ ಅಧಿಕಾರವಿದ್ದಾಗ ಮುಸ್ಲಿಂ ಮಹಿಳೆಯರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡಲಾಗಿತ್ತು. ಮೋದಿ ಸರ್ಕಾರ ತ್ರಿವಳಿ ತಲಾಖ್‌ ರದ್ದು ಮಾಡಿ ಮುಖ್ಯವಾಹಿನಿಗೆ ತಂದಿದೆ. ಇದೀಗ ತಂದ ಸುಧಾರಣೆ ವಕ್ಫ್‌ ಮಂಡಳಿಗೆ ಹೊಸ ಸ್ವರೂಪ ನೀಡಿದೆ.

- ಜೆ.ಪಿ. ನಡ್ಡಾ, ಬಿಜೆಪಿ ಅಧ್ಯಕ್ಷ

ಮಸೂದೆಗೆ ಜೆಡಿಎಸ್ ಬೆಂಬಲ

ವಕ್ಫ್‌ ತಿದ್ದುಪಡಿ ಮಸೂದೆ ಬಗ್ಗೆ ಬಿಜೆಪಿ ಅಧ್ಯಕ್ಷ ಜೆ;ಪಿ. ನಡ್ಡಾ ಅವರ ಭಾಷಣ ಕೇಳಿದ ಬಳಿಕ ಹೇಳಲು ಏನೂ ಉಳಿದಿಲ್ಲ. ಈ ಮಸೂದೆಯನ್ನು ತಂದಿದ್ದಕ್ಕಾಗಿ ನರೇಂದ್ರ ಮೋದಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ವಿಧೇಯಕಕ್ಕೆ ಜೆಡಿಎಸ್‌ ಪಕ್ಷದ ಬೆಂಬಲವಿದೆ.

- ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

ಮುಂದಿನ ಹಾದಿ ಏನು?ಲೋಕಸಭೆಯಲ್ಲಿ ಈಗಾಗಲೇ ಮಸೂದೆಗೆ ಅನುಮೋದನೆ ಸಿಕ್ಕಿದೆ. ರಾಜ್ಯಸಭೆಯ ಅನುಮೋದನೆ ಸಿಗುವುದೂ ಸನ್ನಿಹಿತವಾಗಿದೆ. ಏಕೆಂದರೆ ಬಹುಮತಕ್ಕೆ ಬೇಕಾದ 119 ಸ್ಥಾನಕ್ಕಿಂತ 6 ಸ್ಥಾನ ಹೆಚ್ಚು- ಎಂದರೆ 125 ಸೀಟನ್ನು ಎನ್‌ಡಿಎ ಹೊಂದೊದೆ. ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಗೊಂಡ ಬಳಿಕ ರಾಷ್ಟ್ರಪತಿಗಳಿಗೆ ರವಾನೆ ಆಗಲಿದೆ. ಅದಕ್ಕೆ ರಾಷ್ಟ್ರಪತಿಗಳ ಸಹಿಬಿದ್ದ ಬಳಿಕ ಅಧಿಸೂಚನೆ ಪ್ರಕಟಗೊಳ್ಳಲಿದೆ. ಬಳಿಕ ಅದು ಕಾಯ್ದೆಯ ರೂಪ ಪಡೆದು ಜಾರಿಗೆ ಬರಲಿದೆ,

Share this article