ನವದೆಹಲಿ: ಸುಪ್ರೀಂ ಕೋರ್ಟ್‌ಗೆ ಸಾಂವಿಧಾನಿಕತೆಯನ್ನು ಪರಿಶೀಲಿಸುವ ಅಧಿಕಾರ ಇದೆ ನಿಜ. ಹಾಗಂತ ಸಂಸತ್ತು ಅಂಗೀಕರಿಸಿದ ಕಾನೂನಿಗೆ ತಡೆ ನೀಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿದೆ.
ವಕ್ಫ್ ತಿದ್ದುಪಡಿ ವಿಧೇಯಕ ವಿರೋಧಿಸಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ವೇಳೆ ಈ ಹಿಂದೆ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿತ್ತು. ಅದರಂತೆ ಶುಕ್ರವಾರ 1,332 ಪುಟಗಳ ಪ್ರಾಥಮಿಕ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, ಕಾಯ್ದೆ ಕುರಿತು ಮಾಡಲಾದ ಆರೋಪಗಳಿಗೆ ತಿರುಗೇಟು ನೀಡಿದೆ. ಜತೆಗೆ, ವಕ್ಫ್ ತಿದ್ದುಪಡಿ ಕಾಯ್ದೆಯ ಮಾನ್ಯತೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಜಾ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ಈ ವಿಧೇಯಕದಿಂದ ಯಾವುದೇ ರೀತಿಯಲ್ಲೂ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ. ಕಾಯ್ದೆಯ ಯಾವುದೇ ನಿಬಂಧನೆಗಳಿಗೆ ನ್ಯಾಯಾಲಯ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮಧ್ಯಂತರ ತಡೆ ನೀಡಬಾರದು. ಬದಲಾಗಿ ಇಡೀ ವಿಚಾರಣೆ ಪೂರ್ಣಗೊಳಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದೆ.
ಸ್ವಾತಂತ್ರ್ಯಾನಂತರದಲ್ಲಿ ವಕ್ಫ್‌ನಡಿ ಇಡೀ ಭಾರತದಲ್ಲಿ ಇದ್ದದ್ದು 18.29 ಲಕ್ಷ ಎಕರೆ. ಆದರೆ 2013ರ ಬಳಿಕ ಆಘಾತಕಾರಿ ರೀತಿಯಲ್ಲಿ 20 ಲಕ್ಷ ಹೆಕ್ಟೇರ್‌ಗಿಂತೂ ಹೆಚ್ಚುವರಿ ಜಾಗ ವಕ್ಫ್ ಬೋರ್ಡ್ ವ್ಯಾಪ್ತಿಗೆ ಬಂದಿದೆ. ಅಂದರೆ 2013ರಿಂದ ವಕ್ಫ್ ಆಸ್ತಿಯಲ್ಲಿ ಶೇ.116ರಷ್ಟು ಹೆಚ್ಚಳ ಆಗಿದೆ. ಕಾನೂನು ತಿದ್ದುಪಡಿಗಿಂತಲೂ ಹಿಂದಿನ ನಿಬಂಧನೆ ದುರುಪಯೋಗಪಡಿಸಿಕೊಂಡು ಖಾಸಗಿ, ಸರ್ಕಾರಿ ಆಸ್ತಿ ಆಕ್ರಮಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಮುಸ್ಲಿಮರ ಸಂಖ್ಯೆ ಕಡಿಮೆಯಾಗಲ್ಲ:
ಕಾನೂನು ತಿದ್ದುಪಡಿಯಿಂದ ಕೇಂದ್ರ ಮತ್ತು ರಾಜ್ಯ ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಮರೇ ಅಲ್ಪಸಂಖ್ಯಾತರಾಗುತ್ತಾರೆಂಬ ಆರೋಪವನ್ನೂ ಸರ್ಕಾರ ತಳ್ಳಿಹಾಕಿದೆ. ಕೇಂದ್ರ ವಕ್ಫ್ ಬೋರ್ಡ್‌ನ 22 ಮಂದಿಯಲ್ಲಿ ಕೇವಲ 4 ಮಂದಿ, ರಾಜ್ಯವಕ್ಫ್ ಬೋರ್ಡ್‌ನ 11 ಮಂದಿಯಲ್ಲಿ ಗರಿಷ್ಠ ಮೂರು ಮಂದಿಯಷ್ಟೇ ಮುಸ್ಲಿಮರೇತರರು ಇರುತ್ತಾರೆ ಎಂದು ಸ್ಪಷ್ಟಪಡಿಸಿದೆ.
ಈ ನಡುವೆ, ಕಾನೂನು ಬದಲಾವಣೆಯು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬ ಆರೋಪಕ್ಕೂ ತಿರುಗೇಟು ನೀಡಿದ ಸರ್ಕಾರ, ವಕ್ಫ್ ತಿದ್ದುಪಡಿ ಕಾನೂನನ್ನು ಮುಸ್ಲಿಂ ಸಮಾಜದ ಉದ್ದಾರ ಮತ್ತು ಆಡಳಿತದಲ್ಲಿನ ಪಾರದರ್ಶಕತೆಗಾಗಿ ಜಾರಿಗೆ ತರಲಾಗಿದೆ. ಕಾನೂನು ತಿದ್ದುಪಡಿ ವೇಳೆ ನಂಬಿಕೆ ಮತ್ತು ಆರಾಧನೆಯ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸಿಲ್ಲ. ಈ ಮೂಲಕ ಮುಸ್ಲಿಂ ಸಮುದಾಯದ ಮೂಲಧಾರ್ಮಿಕ ಆಚರಣೆಗಳಿಗೆ ಗೌರವ ನೀಡಲಾಗಿದೆ. ವಕ್ಫ್ ನಿರ್ವಹಣೆಯಲ್ಲಿನ ಜಾತ್ಯತೀತ, ಆಡಳಿತಾತ್ಮಕ ಅಂಶಗಳಲ್ಲಷ್ಟೇ ಬದಲಾವಣೆ ಮಾಡಿದೆ ಎಂದಿದೆ.