330 ದಾಟಿದ ಕೇರಳ ವಯನಾಡಿನಲ್ಲಿ ಭಾರೀ ಗುಡ್ಡ ಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ : 300 ಜನರು ನಾಪತ್ತೆ

KannadaprabhaNewsNetwork |  
Published : Aug 03, 2024, 12:36 AM ISTUpdated : Aug 03, 2024, 05:33 AM IST
ಕೇರಳ | Kannada Prabha

ಸಾರಾಂಶ

ಕೇರಳದ ವಯನಾಡಿನಲ್ಲಿ ಭಾರೀ ಗುಡ್ಡ ಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 330 ದಾಟಿದೆ. ಇನ್ನೂ 300 ಜನರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಮಣ್ಣಿನ ಅವಶೇಷಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆದಿದೆ.

 ವಯನಾಡ್‌ : ಕೇರಳದ ವಯನಾಡಿನಲ್ಲಿ ಭಾರೀ ಗುಡ್ಡ ಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 330 ದಾಟಿದೆ. ಇನ್ನೂ 300 ಜನರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಮಣ್ಣಿನ ಅವಶೇಷಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆದಿದೆ.

ಗುಡ್ಡ ಕುಸಿತದ ಜಾಗದಲ್ಲಿ ಹತ್ತಾರು ಅಡಿ ಎತ್ತರದಷ್ಟು ಮಣ್ಣು ಇರುವುದರಿಂದ ಅವುಗಳಡಿ ಸಿಲುಕಿರಬಹುದಾದ ಸಂತ್ರಸ್ತರನ್ನು ಪತ್ತೆಹಚ್ಚುವುದು ರಕ್ಷಣಾ ತಂಡಗಳಿಗೆ ದುಸ್ಸಾಧ್ಯವಾಗಿದೆ. ಹೀಗಾಗಿ ಜಿಪಿಎಸ್‌ ಕೋಆರ್ಡಿನೇಟ್ಸ್‌, ಡ್ರೋನ್‌ಗಳನ್ನು ಹಾರಿಸಿ ತೆಗೆದ ಚಿತ್ರಗಳು ಹಾಗೂ ಸಂತ್ರಸ್ತರ ಬಳಿ ಇದ್ದ ಮೊಬೈಲ್‌ ಫೋನ್‌ಗಳ ಕೊನೆಯ ಲೊಕೇಶನ್‌ ಸುಳಿವುಗಳನ್ನು ಆಧರಿಸಿ ಹುಡುಕಾಟ ನಡೆಸಲಾಗುತ್ತಿದೆ ಎಂದು ವಯನಾಡಿನ ಜಿಲ್ಲಾಧಿಕಾರಿ, ಕನ್ನಡತಿ ಮೇಘಶ್ರೀ ಡಿ.ಆರ್‌. ಮಾಹಿತಿ ನೀಡಿದ್ದಾರೆ.

ಒಂದೇ ಮನೆಯಲ್ಲಿ 4 ಜನ ಪತ್ತೆ:

ರಕ್ಷಣಾ ಕಾರ್ಯಾಚರಣೆಯ ನಾಲ್ಕನೇ ದಿನವಾದ ಶುಕ್ರವಾರ ಗುಡ್ಡ ಕುಸಿತದ ವ್ಯಾಪ್ತಿಯಲ್ಲಿ ಸಿಲುಕಿದ್ದ ಪದವೆಟ್ಟಿ ಕುನ್ನು ಎಂಬಲ್ಲಿಂದ ಒಂದೇ ಮನೆಯ ನಾಲ್ವರನ್ನು ರಕ್ಷಿಸಲಾಗಿದೆ. ಇದೇ ರೀತಿ ಅಲ್ಲಲ್ಲಿ ಜೀವ ಉಳಿಸಿಕೊಂಡವರು ಇನ್ನೂ ಪತ್ತೆಯಾಗಬಹುದು ಎಂಬ ಆಶಾಭಾವನೆಯನ್ನು ಈ ಘಟನೆ ಮೂಡಿಸಿದೆ.

ಆದರೂ, ನಾಪತ್ತೆಯಾಗಿರುವ 300 ಜನರಲ್ಲಿ ಮೃತಪಟ್ಟವರ ಸಂಖ್ಯೆ ಕೂಡ ದೊಡ್ಡ ಪ್ರಮಾಣದಲ್ಲೇ ಇರುವ ಸಾಧ್ಯತೆಯಿದ್ದು, ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗಬಹುದು ಎಂದು ಹೇಳಲಾಗಿದೆ.

ಸೇನೆಯ ಬ್ರಿಜ್‌ನಿಂದ ವರದಾನ:

ಮುಂಡಕ್ಕೈ ಮತ್ತು ಚೂರಲ್‌ಮಲೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವಂತೆ ಸೇನಾಪಡೆಯುವರು 190 ಅಡಿ ಉದ್ದದ ತಾತ್ಕಾಲಿಕ ಸೇತುವೆ ನಿರ್ಮಿಸಿರುವುದರಿಂದ ಆ ಜಾಗಗಳಿಗೆ ಬುಲ್ಡೋಜರ್‌ ಸೇರಿದಂತೆ ದೊಡ್ಡ ದೊಡ್ಡ ಯಂತ್ರಗಳನ್ನು ಕೊಂಡೊಯ್ಯಲು ಶುಕ್ರವಾರ ಬೆಳಗ್ಗೆಯಿಂದ ಸಾಧ್ಯವಾಗುತ್ತಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ಚುರುಕಾಗಬಹುದು ಎಂದು ಮೂಲಗಳು ತಿಳಿಸಿವೆ. ಪತ್ತೆಯಾದ ಮೃತ ದೇಹಗಳ ಗುರುತು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

6 ವಿಭಾಗ ಮಾಡಿಕೊಂಡು ಶೋಧ:

ಗುಡ್ಡ ಕುಸಿತ ಸಂಭವಿಸಿದ ಪ್ರದೇಶವನ್ನು ಅಟ್ಟಮಲೆ ಮತ್ತು ಅರಣಮಲೆ, ಮುಂಡಕ್ಕೈ, ಪುಣಚಿರಿಮಟ್ಟಂ, ವೆಲ್ಲರಿಮಲೆ, ಜಿವಿಎಚ್‌ಎಸ್‌ಎಸ್‌ ವೆಲ್ಲರಿಮಲೆ ಹಾಗೂ ನದಿಯ ದಡ ಎಂಬ ಆರು ವಿಭಾಗಗಳನ್ನಾಗಿ ಮಾಡಿಕೊಂಡು, ಒಟ್ಟು 40 ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಸೇನಾಪಡೆ, ನೌಕಾಪಡೆ, ಕೋಸ್ಟ್‌ ಗಾರ್ಡ್‌, ಎನ್‌ಡಿಆರ್‌ಎಫ್‌, ಡಿಎಸ್‌ಜಿ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

ಸಮೀಪದಲ್ಲಿರುವ ಚಲಿಯರ್‌ ನದಿಯಲ್ಲೂ ಶವಗಳಿಗಾಗಿ ಹುಡುಕಾಟ ಆರಂಭವಾಗಿದೆ. ನದಿಯ 40 ಕಿ.ಮೀ. ಗುಂಟ ಇರುವ ಎಂಟು ಪೊಲೀಸ್‌ ಠಾಣೆಗಳ ಸಿಬ್ಬಂದಿ ಸ್ಥಳೀಯ ಈಜುಗಾರರ ಜೊತೆ ಸೇರಿ ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸ್‌ ಹೆಲಿಕಾಪ್ಟರ್‌ ಕೂಡ ಬಳಸಿ ಶೋಧ ನಡೆದಿದೆ.

ಕಾಂಗ್ರೆಸ್‌ನಿಂದ 100 ಎನ್‌ಎಸ್ಎಸ್‌ನಿಂದ 150 ಮನೆ ನಿರ್ಮಾಣ

ವಯನಾಡು: ಭೂಕುಸಿತದಿಂದ ನೊಂದವರಿಗೆ 250 ಮನೆಗಳನ್ನು ಉಚಿತವಾಗಿ ಕಟ್ಟಿಕೊಡುವ ಭರವಸೆ ಶುಕ್ರವಾರ ವ್ಯಕ್ತವಾಗಿದೆ. ಕಾಂಗ್ರೆಸ್‌ ಜಿಲ್ಲೆಯಲ್ಲಿ 100 ಮನೆಗಳನ್ನು ನಿರ್ಮಿಸಿ ಸಂತ್ರಸ್ಥರಿಗೆ ನೀಡಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಕಟಿಸಿದ್ದಾರೆ. ಇನ್ನೊಂದೆಡೆ ರಾಷ್ಟ್ರೀಯ ಸೇವಾ ಯೋಜನೆಯಡಿ ಸರ್ಕಾರದಿಂದ ಸಂತ್ರಸ್ತ 150 ಕುಟುಂಬಗಳಿಗೆ ಮನೆ ನಿರ್ಮಿಸಲಾಗುವುದು ಎಂದು ಕೇರಳ ಉನ್ನತ ಶಿಕ್ಷಣ ಸಚಿವೆ ಆರ್‌.ಬಿಂದು ಶುಕ್ರವಾರ ಮಾಹಿತಿ ನೀಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ