ಮೃತರ ಕುಟುಂಬಕ್ಕೆ ಟಾಟಾ ಕಡೆಯಿಂದ ₹1 ಕೋಟಿ ಪರಿಹಾರ

KannadaprabhaNewsNetwork |  
Published : Jun 13, 2025, 03:25 AM IST
ಟಾಟಾ  | Kannada Prabha

ಸಾರಾಂಶ

ಏರ್‌ ಇಂಡಿಯಾ 171 ವಿಮಾನ ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರ ಸಂಬಂಧಿಕರಿಗೆ ಏರ್‌ ಇಂಡಿಯಾ ಮಾತೃಸಂಸ್ಥೆ ಟಾಟಾ ಕಂಪನಿಯು 1 ಕೋಟಿ ರು. ಪರಿಹಾರವನ್ನು ಘೋಷಿಸಿದೆ.

- ಬಿಜೆ ಆಸ್ಪತ್ರೆ ಮರುನಿರ್ಮಾಣಕ್ಕೆ ಟಾಟಾ ಗ್ರೂಪ್‌ ಸಹಾಯ

ಅಹಮದಾಬಾದ್‌: ಏರ್‌ ಇಂಡಿಯಾ 171 ವಿಮಾನ ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರ ಸಂಬಂಧಿಕರಿಗೆ ಏರ್‌ ಇಂಡಿಯಾ ಮಾತೃಸಂಸ್ಥೆ ಟಾಟಾ ಕಂಪನಿಯು 1 ಕೋಟಿ ರು. ಪರಿಹಾರವನ್ನು ಘೋಷಿಸಿದೆ.ಈ ಬಗ್ಗೆ ಟಾಟಾ ಸನ್ಸ್‌ ಚೇರ್‌ಮನ್‌ ಎನ್‌.ಚಂದ್ರಶೇಖರನ್‌ ಹೇಳಿಕೆ ಬಿಡುಗಡೆ ಮಾಡಿದ್ದು, ಏರ್ ಇಂಡಿಯಾ 171ರ ದುರಂತದಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ. ಈ ಕ್ಷಣದಲ್ಲಿ ನಾವು ಅನುಭವಿಸುತ್ತಿರುವ ದುಃಖವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳು ಮತ್ತು ಗಾಯಗೊಂಡವರೊಂದಿಗೆ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಇವೆ. ದುರಂತದಲ್ಲಿ ಮಡಿದವರ ಪ್ರತಿಯೊಬ್ಬರ ಕುಟುಂಬಕ್ಕೆ ತಲಾ 1 ಕೋಟಿ ರು. ಪರಿಹಾರವನ್ನು ಟಾಟಾ ಗ್ರೂಪ್‌ ನೀಡುತ್ತದೆ. ಜೊತೆಗೆ ಗಾಯಗೊಂಡವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸುವುದಷ್ಟೇ ಅಲ್ಲದೇ ಎಲ್ಲಾ ನೆರವು ಒದಗಿಸುವುದನ್ನು ನೋಡಿಕೊಳ್ಳಲಿದ್ದೇವೆ. ಇದರೊಂದಿಗೆ ಬಿಜೆ ಮೆಡಿಕಲ್‌ ಆಸ್ಪತ್ರೆ ಕಟ್ಟಡ ಮರುನಿರ್ಮಾಣಕ್ಕೆ ಸಹಾಯ ಮಾಡಲಿದ್ದೇವೆ’ ಎಂದು ಘೋಷಿಸಿದ್ದಾರೆ.

ಈ 2011ರಲ್ಲಿ ಮಂಗಳೂರಿನಲ್ಲಿ ಸಂಭವಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ 75 ಲಕ್ಷ ರು. ಪರಿಹಾರವನ್ನು ಘೋಷಿಸಲಾಗಿತ್ತು.

ಅಪಘಾತಕ್ಕೂ ಮುನ್ನ ಎಟಿಸಿಗೆ

‘ಮೇ ಡೇ’ ಸಂದೇಶ ರವಾನೆ

ಅಹಮದಾಬಾದ್‌: ಅಪಘಾತಕ್ಕೊಳಗಾದ ವಿಮಾನವು ಟೇಕ್‌ ಆಫ್‌ ಆದ ಕೆಲ ಹೊತ್ತಿನಲ್ಲೇ ಅದರ ಪೈಲಟ್‌ಗಳು ಅಹಮದಾಬಾದ್‌ನ ವಾಯು ಸಂಚಾರ ನಿಯಂತ್ರಣ (ಎಟಿಸಿ)ಗೆ ಅಪಾಯದ ವೇಳೆ ನೀಡುವ ಮೇ ಡೇ ಸಂದೇಶ ರವಾನಿಸಿದ್ದರು. ಆದರೆ ಬಳಿಕ ಎಟಿಸಿ ಮಾಡಿದ ಕರೆಗಳಿಗೆ ವಿಮಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ತಿಳಿಸಿದೆ.ಮೇ ಡೇ ಎಂದರೆ, ವಿಮಾನ ಪ್ರಯಾಣದ ವೇಳೆ ತುರ್ತು ಸಂದರ್ಭದ ಎದುರಾದಾಗ ಪೈಲಟ್‌ಗಳು ನೀಡುವ ವಿಪತ್ತು ಕರೆ. ಇದು ಫ್ರೆಂಚ್‌ ಪದವಾದ ‘ಮೈಡರ್‌’ನಿಂದ ಬಂದಿದ್ದು, ಇದರರ್ಥ ‘ಸಹಾಯ ಮಾಡಿ’ ಎಂದು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ