ಭಾರತದಲ್ಲಿ ಸಮಾನತೆ ಬಂದಾಗ ಮೀಸಲಾತಿ ರದ್ದತಿ : ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ

KannadaprabhaNewsNetwork |  
Published : Sep 11, 2024, 01:05 AM ISTUpdated : Sep 11, 2024, 05:36 AM IST
ರಾಹುಲ್‌ | Kannada Prabha

ಸಾರಾಂಶ

ಭಾರತದಲ್ಲಿ ಸಂಪೂರ್ಣ ನ್ಯಾಯಯುತ ಸ್ಥಳವಾದಾಗ ಮಾತ್ರ ಮೀಸಲಾತಿಯನ್ನು ರದ್ದುಗೊಳಿಸುವ ಬಗ್ಗೆ ಕಾಂಗ್ರೆಸ್ ಪಕ್ಷವು ಯೋಚಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸದ್ಯಕ್ಕೆ ಭಾರತದಲ್ಲಿ ಈ ಪರಿಸ್ಥಿತಿ ಇಲ್ಲ ಎಂದೂ ಅವರು ಅಭಿಪ್ರಾಯಪಟ್ಟರು.

ವಾಷಿಂಗ್ಟನ್‌: ’ಭಾರತದಲ್ಲಿ ಸಂಪೂರ್ಣ ನ್ಯಾಯಯುತ ಸ್ಥಳ ಆದಾಗ (ಸಮಾನತೆ ಬಂದಾಗ) ಮೀಸಲಾತಿಯನ್ನು ರದ್ದುಗೊಳಿಸಲು ಕಾಂಗ್ರೆಸ್ ಪಕ್ಷವು ಯೋಚಿಸುತ್ತದೆ. ಆದರೆ ಸದ್ಯಕ್ಕೆ ಇದು ಸಾಧ್ಯವಿಲ್ಲ’ ಎಂದು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.

ಪ್ರತಿಷ್ಠಿತ ಜಾರ್ಜ್‌ಟೌನ್ ವಿವಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಗಾಂಧಿ ಅವರಿಗೆ ವಿದ್ಯಾರ್ಥಿಯೊಬ್ಬರು ‘ಎಲ್ಲಿಯವರೆಗೆ ಭಾರತದಲ್ಲಿ ಮೀಸಲು ಇರುತ್ತದೆ?’ ಎಂದು ಪ್ರಶ್ನಿಸಿದರು.

ಆಗ ಉತ್ತರಿಸಿದ ರಾಹುಲ್‌, ‘ಭಾರತವು ನ್ಯಾಯಯುತವಾದ ಸ್ಥಳವಾದಾಗ ನಾವು ಮೀಸಲು ರದ್ದುಗೊಳಿಸುವ ಬಗ್ಗೆ ಯೋಚಿಸುತ್ತೇವೆ. ಸದ್ಯಕ್ಕೆ ಭಾರತದಲ್ಲಿ ಈ ಪರಿಸ್ಥಿತಿ ಇಲ್ಲ’ ಎಂದರು.

==

ಮೋದಿಯಲ್ಲ, ಅವರ ಚಿಂತನೆ ವಿರುದ್ಧ ನನ್ನ ದ್ವೇಷ: ರಾಗಾ

ನವದೆಹಲಿ: ‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನೇನು ನಾನು ದ್ವೇಷಿಸುವುದಿಲ್ಲ. ನನ್ನ ದ್ವೇಷ ಏನಿದ್ದರೂ ಅವರ ಚಿಂತನೆಗಳ ಬಗ್ಗೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.ವಾಷಿಂಗ್ಟನ್‌ ಡಿ.ಸಿಯ ಜಾರ್ಜ್‌ಟೌನ್‌ ವಿವಿಯದಲ್ಲಿ ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್‌, ‘ನಿಮಗೆ ಅಚ್ಚರಿ ಆಗಬಹುದು. ನಾನು ವಾಸ್ತವವಾಗಿ ಮಿ.ಮೋದಿ ಅವರನ್ನು ದ್ವೇಷಿಸುವುದಿಲ್ಲ. ಅವರನ್ನು ನಾನು ನನ್ನ ವೈರಿ ಎಂದು ಪರಿಗಣಿಸಿಲ್ಲ. ಅವರು ಬೇರೆಯದ್ದೇ ಆದ ದೃಷ್ಟಿಕೋನ ಹಾಗೂ ಚಿಂತನೆ ಹೊಂದಿದ್ದಾರೆ. ನಾನು ಬೇರೆಯದ್ದೇ ದೃಷ್ಟಿಕೋನ ಹೊಂದಿದ್ದೇನೆ. ಇನ್ನೂ ಹೇಳಬೇಕೆಂದರೆ ಬಹಳಷ್ಟು ಸಮಯದಲ್ಲಿ ನಾನು ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತೇನೆ ಮತ್ತು ಅವರ ಬಗ್ಗೆ ಅನುಕಂಪ ಹೊಂದಿದ್ದೇನೆ. ಏಕೆಂದರೆ ದ್ವೇಷಿಸುವುದಕ್ಕಿಂತ ಸಹಾನುಭೂತಿ ಉತ್ತಮ’ ಎಂದು ಹೇಳಿದ್ದಾರೆ.

==

ಕೆಲ ಧರ್ಮ, ಪ್ರದೇಶ, ಭಾಷೆಗಳ ಬಗ್ಗೆ ಆರ್‌ಎಸ್‌ಎಸ್‌ಗೆ ದ್ವೇಷ: ರಾಹುಲ್‌

ವಾಷಿಂಗ್ಟನ್‌: ಆರೆಸ್ಸೆಸ್‌ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಭಾರತದಲ್ಲಿನ ಕೆಲವೊಂದು ಧರ್ಮ, ಪ್ರದೇಶ ಮತ್ತು ಭಾಷೆಗಳನ್ನು ಆರ್‌ಎಸ್‌ಎಸ್‌ ದ್ವೇಷ ಮಾಡುತ್ತದೆ. ಏಕೆಂದರೆ ಅವು ಇತರೆ ಧರ್ಮ, ಪ್ರದೇಶ ಮತ್ತು ಭಾಷೆಗಳಿಗಿಂತ ಕೀಳು ಎಂಬ ಮನೋಭಾವ ಅದರಲ್ಲಿದೆ’ ಎಂದು ಆರೋಪಿಸಿದ್ದಾರೆ.

ಅಮೆರಿಕದ ಹೆರ್ನ್‌ಡಾನ್‌ನಲ್ಲಿ ಸೋಮವಾರ ಸಭೆಯೊಂದರಲ್ಲಿ ಮಾತನಾಡಿದ ರಾಹುಲ್‌, ‘ಆರ್‌ಎಸ್‌ಎಸ್‌ ನೀತಿಗಳು ಮತ್ತು ಭಾರತದ ಕುರಿತ ಅದರ ನಿಲುವುಗಳು ಸರಿಯಿಲ್ಲ. ದೇಶದ ಕೆಲವೊಂದು ಧರ್ಮ, ಪ್ರದೇಶ, ಭಾಷೆ ಇತರರಿಗಿಂತ ಕೀಳು ಎಂಬುದು ಅವರ ವಾದ. ಉದಾಹರಣೆಗೆ ಬಂಗಾಳ, ತಮಿಳು, ಮರಾಠಿ, ಮಣಿಪುರಿ ಭಾಷೆಗಳು ಇತರೆ ಭಾಷೆಗಳಿಗಿಂತ ಕೀಳು ಎಂಬ ಭಾವನೆ ಅವರಲ್ಲಿದೆ. ಇದರ ವಿರುದ್ಧವೇ ನಾವು ಹೋರಾಟ ನಡೆಸುತ್ತಿರುವುದು. ಈ ವಿಷಯದ ಬಗ್ಗೆಯೇ ಇದೀಗ ಭಾರತದಲ್ಲಿ ಯುದ್ಧ ನಡೆಯುತ್ತಿರುವುದು. ಈ ವಿಷಯಗಳೇ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯ ಮತದಾನದೊಂದಿಗೆ ಅಂತ್ಯವಾಗುತ್ತಿರುವುದು’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾರು ಬುಕ್‌ ಮಾಡುವಾಗಲೇ ಟಿಪ್ಸ್‌ ಕೇಳುವುದಕ್ಕೆ ನಿಷೇಧ!
ರೈಲ್ವೆ ಪರಿಷ್ಕೃತ ದರ ಇಂದಿನಿಂದ ಜಾರಿಗೆ