ಶ್ವೇತಭವನದಲ್ಲಿ ಹೈವೋಲ್ಟೇಜ್ ಚರ್ಚೆ । ಜೆಲೆನ್ಸ್‌ಕಿಗೆ ಯುರೋಪ್ ನಾಯಕರ ಸಾಥ್‌ವಾಷಿಂಗ್ಟನ್: ಶತಾಯಗತಾಯ ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಬೇಕು ಎಂದು ಯತ್ನಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿ ಅವರನ್ನು ಸೋಮವಾರ ಶ್ವೇತಭವನದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಹಲವು ಯುರೋಪಿಯನ್ ನಾಯಕರು ಅವರಿಗೆ ಸಾಥ್ ನೀಡಿದ್ದಾರೆ.
ಶುಕ್ರವಾರವಷ್ಟೇ ಟ್ರಂಪ್, ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಭೇಟಿಯಾಗಿ ಸಮರದ ಬಗ್ಗೆ ಮಾತುಕತೆ ನಡೆಸಿದ್ದರು. ಆದರೆ ಅದು ಯುದ್ಧ ಸ್ಥಗಿತ ಸಾಧನೆಯಲ್ಲಿ ವಿಫಲವಾಗಿತ್ತು. ಅದರ ಬೆನ್ನಲ್ಲೇ ಜೆಲೆನ್ಸ್‌ಸ್ಕಿ ಅವರೊಂದಿಗೆ ಟ್ರಂಪ್ ಮಾತುಕತೆಗೆ ಮುಂದಾಗಿದ್ದು, ಆ ವೇಳೆ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾಂಡರ್ ಲೇನ್, ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್, ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಮತ್ತು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಕೂಡ ಉಪಸ್ಥಿತರಿದ್ದರು.ಐರೋಪ್ಯ ದೇಶಗಳ ನಾಯಕರೆಲ್ಲಾ ಸೇರುವುದರ ಹಿಂದೆ ರಷ್ಯಾದ ವಿರುದ್ಧ ಉಕ್ರೇನ್‌ನ ಶಕ್ತಿ ಪ್ರದರ್ಶನ ಒಂದು ಕಾರಣವಾದರೆ, ಫೆಬ್ರವರಿಯಲ್ಲಿ ಟ್ರಂಪ್-ಜೆಲೆನ್ಸ್‌ಕಿ ಮಾತಕತೆ ವೇಳೆ ನಡೆದ ಭೀಕರ ವಾಗ್ವಾದ ಮರುಕಳಿಸದಂತೆ ತಡೆಯುವುದು ಇನ್ನೊಂದು ಪ್ರಮುಖ ಉದ್ದೇಶ ಎಂದು ವಿಶ್ಲೇಷಿಸಲಾಗುತ್ತಿದೆ.
==ಟ್ರಂಪ್ ಸಭೆ ಬಗ್ಗೆ ಮೋದಿಗೆ ಅಧ್ಯಕ್ಷ ಪುಟಿನ್ ಮಾಹಿತಿ
ಶಾಂತಿಯುತ ಪರಿಹಾರಕ್ಕೆ ಮೋದಿ ಕರೆ
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಇತ್ತೀಚೆಗೆ ತಾವು ಅಲಾಸ್ಕದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ನಡೆಸಿದ ಮಾತುಕತೆಯ ವಿವವರ ನೀಡಿದ್ದಾರೆ. ಈ ಮೂಲಕ, ಅಮೆರಿಕದ ತೆರಿಗೆಗೆ ಒಳಪಟ್ಟಿರುವ ಭಾರತ ಎಂದಿದ್ದರೂ ತನ್ನ ಮಿತ್ರರಾಷ್ಟ್ರ ಎಂಬ ಸಂದೇಶ ರವಾನಿಸಿದ್ದಾರೆ.
ಸಂಭಾಷಣೆಯ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ, ‘ಪ್ರಧಾನಿ ಮೋದಿ ಅವರು, ಉಕ್ರೇನ್ ಜತೆಗಿನ ಸಂಘರ್ಷವನ್ನು ಶಾಂತಿಯುತವಾಗಿ, ರಾಜತಾಂತ್ರಿಕ ಮಾರ್ಗ ಮತ್ತು ಮಾತುಕತೆಯ ಮೂಲಕ ಬಗೆಹರಿಸುವಂತೆ ಆಗ್ರಹಿಸಿದ್ದು, ಭಾರತ ಇದಕ್ಕೆ ಎಲ್ಲಾ ವಿಧದಲ್ಲಿ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಉಭಯ ನಾಯಕರು ಭಾರತ ಮತ್ತು ರಷ್ಯಾದ ಬಾಂಧವ್ಯಕ್ಕೆ ಬಲ ತುಂಬುವ ಬಗ್ಗೆಯೂ ಮಾತುಕತೆ ನಡೆಸಿದರು’ ಎಂದು ತಿಳಿಸಿದೆ.ಉಕ್ರೇನ್-ರಷ್ಯಾ ನಡುವೆ ಕನದವಿರಾಮ ಮಾಡಿಸುವ ಉದ್ದೇಶದಿಂದ ಟ್ರಂಪ್ ಅವರು ಪುಟಿನ್‌ರನ್ನು ಭೇಟಿಯಾಗಿ, 3 ತಾಸು ಮಾತುಕತೆ ನಡೆಸಿದ್ದರು. ಆದರೆ ಈ ವೇಳೆ ಅಂದುಕೊಂಡಿದ್ದ ಗುರಿ ಸಾಧನೆ ಸಾಧ್ಯವಾಗಿರಲಿಲ್ಲ.