ವಾಟ್ಸಾಪ್‌ನಲ್ಲೇ ಫ್ಯಾಕ್ಟ್‌ಚೆಕ್‌ಗೆ ಅವಕಾಶ

KannadaprabhaNewsNetwork |  
Published : Sep 24, 2025, 01:04 AM IST
ವಟ್ಸಾಪ್ | Kannada Prabha

ಸಾರಾಂಶ

ಐಫೋನ್‌ ಬಳಕೆದಾರರಿಗೆಂದೇ ವಾಟ್ಸ್‌ಆ್ಯಪ್ ಇದೀಗ ಆಸ್ಕ್‌ ಮೆಟಾ ಎಐ ಎಂಬ ಶಾರ್ಟ್‌ಕಟ್‌ ಅನ್ನು ಪರಿಚಯಿಸಲು ಮುಂದಾಗಿದೆ. ಈ ಮೂಲಕ ವಾಟ್ಸಪ್‌ ಬಳಕೆದಾರರು ಚಾಟ್‌ ನಡೆಸುತ್ತಿರುವಾಗಲೇ ಮೆಟಾ ಎಐಗೆ ನಿರ್ದಿಷ್ಟ ಮೆಸೇಜ್‌ಗಳ ಕುರಿತು ನೇರವಾಗಿ ಪ್ರಶ್ನೆಗಳನ್ನು, ಸ್ಪಷ್ಟನೆಗಳನ್ನು ಕೇಳಲು, ಫ್ಯಾಕ್ಟ್‌ಚೆಕ್‌ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.

- ಆಸ್ಕ್‌ ಮೆಟಾ ಎಐ ಸೌಲಭ್ಯ ಪರಿಚಯ

- ಚಾಟ್‌ ಮಾಡುತ್ತಿರುವಾಗಲೇ ಫ್ಯಾಕ್ಟ್‌ಚೆಕ್‌ಗೆ ಅವಕಾಶ

- ಸಂದೇಶದ ವಿವರಣೆ, ಸ್ಪಷ್ಟನೆ ಕೇಳಲೂ ಸಿಗಲಿದೆ ಛಾನ್ಸ್‌

- ಸದ್ಯಕ್ಕೆ ಐಫೋನ್‌ ಬಳಕೆದಾರರಿಗೆ ಅನ್ವಯ

ನವದೆಹಲಿ: ಐಫೋನ್‌ ಬಳಕೆದಾರರಿಗೆಂದೇ ವಾಟ್ಸ್‌ಆ್ಯಪ್ ಇದೀಗ ಆಸ್ಕ್‌ ಮೆಟಾ ಎಐ ಎಂಬ ಶಾರ್ಟ್‌ಕಟ್‌ ಅನ್ನು ಪರಿಚಯಿಸಲು ಮುಂದಾಗಿದೆ. ಈ ಮೂಲಕ ವಾಟ್ಸಪ್‌ ಬಳಕೆದಾರರು ಚಾಟ್‌ ನಡೆಸುತ್ತಿರುವಾಗಲೇ ಮೆಟಾ ಎಐಗೆ ನಿರ್ದಿಷ್ಟ ಮೆಸೇಜ್‌ಗಳ ಕುರಿತು ನೇರವಾಗಿ ಪ್ರಶ್ನೆಗಳನ್ನು, ಸ್ಪಷ್ಟನೆಗಳನ್ನು ಕೇಳಲು, ಫ್ಯಾಕ್ಟ್‌ಚೆಕ್‌ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.

ಈ ಕುರಿತು ಐಒಎಸ್‌ನ 25.26.10.71ನೇ ಆವತ್ತಿಯ ವಾಟ್ಸ್‌ಆ್ಯಪ್‌ ಬೆಟಾಗೆ ಟೆಸ್ಟಿಂಗ್‌ ಕೂಡ ಆರಂಭವಾಗಿದೆ.

ಐಫೋನ್‌ ಬಳಕೆದಾರರಲ್ಲಿ ಸದ್ಯ ಕೆಲವರಿಗಷ್ಟೇ ಈ ಹೊಸ ಸೌಲಭ್ಯ ಪ್ರಯೋಗಾರ್ಥವಾಗಿ ಲಭ್ಯವಾಗಲಿದೆ. ವಿಶೇಷವೆಂದರೆ ಎಐ ಶಾರ್ಟ್‌ಕಟ್‌ ಅನ್ನು ತೆರೆದ ಕೂಡಲೇ ಎಲ್ಲಾ ಮೆಸೇಜ್‌ ಎಐಗೆ ಹೋಗುವುದಿಲ್ಲ. ಬಳಕೆದಾರರು ನಿರ್ದಿಷ್ಟ ಮೆಸೇಜ್‌ ಅನ್ನು ಆಯ್ಕೆ ಮಾಡಬೇಕು ಮತ್ತು ತಾವು ಏನು ಕೇಳಲು ಬಯಸುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಮೂಲಕ ಬಳಕೆದಾರರ ಖಾಸಗಿತನ ಮತ್ತು ಪ್ಲಾಟ್‌ಫಾರ್ಮ್‌ ಮೇಲಿನ ನಂಬಿಕೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುತ್ತದೆ.

ಹೇಗೆ ಕಾರ್ಯನಿರ್ವಹಣೆ?:

ವಾಟ್ಸ್‌ಆ್ಯಪ್‌ ತೆರೆದು ಯಾವುದೇ ಸಂದೇಶದ ಮೇಲೆ ದೀರ್ಘವಾಗಿ ಪ್ರೆಸ್‌ ಮಾಡಿದರೆ ಮೇಲ್ಭಾಗದಲ್ಲಿ ಫಾರ್ವರ್ಡ್‌, ರಿಪ್ಲೈ, ಸ್ಟಾರ್‌, ಅಪ್ಡೇಟ್‌ನಂಥ ಆಪ್ಷನ್‌ ಕಾಣುತ್ತದೆ. ಇದೀಗ ಅದರ ಜತೆಗೆ ‘ಆಸ್ಕ್‌ ಮೆಟಾ ಎಐ’ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ. ಇದನ್ನು ಆಯ್ಕೆ ಮಾಡಿದರೆ ಪ್ರತ್ಯೇಕ ಎಐ ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಆಯ್ಕೆ ಮಾಡಿದ ಸಂದೇಶ ಕಾಣಸಿಗುತ್ತದೆ. ಬಳಕೆದಾರರು ಕೇಳುವ ಪ್ರಶ್ನೆಗೆ ಅನುಗುಣವಾಗಿ ಎಐ ಫಲಿತಾಂಶವನ್ನು ಪ್ರದರ್ಶಿಸುತ್ತದೆ.

==

ಅಯೋಧ್ಯೆ ಮಸೀದಿ ನಿರ್ಮಾಣ ಯೋಜನೆಗೆ ಸಿಗದ ಎಡಿಎ ಅನುಮತಿ

- ಸರ್ಕಾರದ ವಿವಿಧ ಇಲಾಖೆಯಿಂದ ಸಿಗದ ಎನ್‌ಒಸಿ

- ಬಾಬ್ರಿ ಮಸೀದಿ ವಿವಾದ ಇತ್ಯರ್ಥ ವೇಳೆ ನೀಡಿದ್ದ ಭೂಮಿ

ಅಯೋಧ್ಯೆ: ಧ್ವಂಸಗೊಂಡ ಬಾಬ್ರಿ ಮಸೀದಿಗೆ ಪರಿಹಾರಾರ್ಥವಾಗಿ ಸುಪ್ರೀಂ ಕೋರ್ಟ್‌ ಆದೇಶದಂತೆ ಅಯೋಧ್ಯೆಯ ಧನ್ನೀಪುರ ಗ್ರಾಮದಲ್ಲಿ ಬೃಹತ್‌ ಮಸೀದಿ ನಿರ್ಮಿಸುವ ಯೋಜನೆಗೆ ವಿಘ್ನ ಎದುರಾಗಿದೆ. ಸರ್ಕಾರದ ವಿವಿಧ ಇಲಾಖೆಗಳು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡದ ಕಾರಣ, ಮಸೀದಿ ನಿರ್ಮಾಣ ಯೋಜನೆಗೆ ಅನುಮತಿ ನೀಡಲು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ನಿರಾಕರಿಸಿದೆ.

ಅಯೋಧ್ಯೆ ರಾಮಮಂದಿರ-ಬಾಬ್ರಿ ಮಸೀದಿ ವಿವಾದ ಇತ್ಯರ್ಥ ವೇಳೆ ಮಸೀದಿ ನಿರ್ಮಾಣಕ್ಕೆಂದೇ ಸುನ್ನಿ ವಕ್ಫ್‌ ಬೋರ್ಡ್‌ಗೆ 5 ಎಕ್ರೆ ಭೂಮಿ ನೀಡುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನ.9, 2019ರಂದು ನಿರ್ದೇಶನ ನೀಡಿತ್ತು. ಅದರಂತೆ ಆ.3, 2020ರಂದು ಜಿಲ್ಲಾಧಿಕಾರಿ ಅನುಜ್‌ ಕುಮಾರ್‌ ಝಾ ಅವರು ಅಯೋಧ್ಯೆಯಿಂದ 25 ಕಿ.ಮೀ. ದೂರದ ಧನ್ನೀಪುರ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕೆಂದು ಜಾಗ ನೀಡಿದ್ದರು.ಜೂ.23, 2021ರಲ್ಲಿ ಮಸೀದಿ, ಆಸ್ಪತ್ರೆ ನಿರ್ಮಾಣ ಸಂಬಂಧ ಟ್ರಸ್ಟ್‌ ಅರ್ಜಿ ಸಲ್ಲಿಸಿದ್ದು, ಆ ಅರ್ಜಿಯನ್ನು ಸೆ.16ರಂದು ಎಡಿಎ ತಿರಸ್ಕರಿಸಿದೆ. ಲೋಕೋಪಯೋಗಿ ಇಲಾಖೆ, ಪರಿಸರ ನಿಯಂತ್ರಣ ಹಾಗೂ ನಾಗರಿಕ ವಿಮಾನಯಾನ, ನೀರಾವರಿ, ಕಂದಾಯ ಇಲಾಖೆ, ಮುನ್ಸಿಪಲ್‌ ಕಾರ್ಪೊರೇಷನ್‌, ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಸ್ಟ್‌ಗೆ ಬರೆದ ಪತ್ರದಲ್ಲಿ ಎಡಿಎ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಸೀದಿ ಟ್ರಸ್ಟ್‌ನ ಕಾರ್ಯದರ್ಶಿ ಅತಾರ್‌ ಹುಸೇನ್‌ ಅವರು, ‘ಸುಪ್ರೀಂ ಕೋರ್ಟ್‌ ಮಸೀದಿ ನಿರ್ಮಾಣಕ್ಕೆ ಜಾಗ ಕೊಡಿಸಿದೆ. ಇದೀಗ ಸರ್ಕಾರ ಯಾವ ಕಾರಣಕ್ಕೆ ನಿರಕ್ಷೇಪಣಾ ಪತ್ರ ನೀಡಿಲ್ಲ, ಮಸೀದಿ ನಿರ್ಮಾಣ ಯೋಜನೆಯನ್ನು ಯಾಕೆ ಪ್ರಾಧಿಕಾರ ತಿರಸ್ಕರಿಸಿದೆ ಎಂಬುದು ತಿಳಿಯುತ್ತಿಲ್ಲ’ ಎಂದು ಹೇಳಿದ್ದಾರೆ.

PREV

Recommended Stories

ಬಿಬಿಎಲ್‌: ಸಿಡ್ನಿ ಥಂಡರ್‌ಪರ ಆಡಲಿರುವ ಅಶ್ವಿನ್‌!
ಕೇರಳ: 2 ನಟರ ಕಾರು ಸೇರಿ 36 ಸ್ಮಗ್ಲಿಂಗ್‌ ಕಾರು ವಶ