ನವದೆಹಲಿ: ದೆಹಲಿ ಹೈಕೋರ್ಟ್‌ನ ಹಿರಿಯ ನ್ಯಾಯಾಧೀಶ ಯಶವಂತ್ ವರ್ಮಾ ಮನೆಯಲ್ಲಿ ಸಂಭವಿಸಿದ್ದ ಅಗ್ನಿ ನಂದಿಸಲು ಹೋಗಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಅಲ್ಲಿ ಭಾರೀ ಪ್ರಮಾಣದ ನೋಟಿನ ರಾಶಿ ಕಂಡುಬಂದಿತ್ತು ಎಂಬ ವದಂತಿಯೊಂದು ಹಬ್ಬಿದೆ.
ಇಂಥದ್ದೊಂದು ವದಂತಿ ಬೆನ್ನಲ್ಲೇ ನ್ಯಾ.ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ. ಜೊತೆಗೆ ಕೊಲಿಜಿಯಂ ಕೂಡಾ ಪ್ರಕರಣದ ಕುರಿತಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಂದ ವರದಿ ಕೇಳಿದೆ.
ಈ ನಡುವೆ ನ್ಯಾಯಾಧೀಶರ ಮನೆಯಲ್ಲಿ ನಗದು ಪತ್ತೆ ವದಂತಿ ಭಾರೀ ಚರ್ಚೆಗೆ ನಾಂದಿ ಹಾಡಿದ ಬೆನ್ನಲ್ಲೇ, ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಸುಪ್ರೀಂಕೋರ್ಟ್, ದೆಹಲಿ ಹೈಕೋರ್ಟ್ ನ್ಯಾಯಾಧೀಶರ ಬಗ್ಗೆ ಸಾಕಷ್ಟು ವದಂತಿ ಹಬ್ಬಿಸಲಾಗುತ್ತಿದೆ. ಆದರೆ ಅವರ ವರ್ಗಾವಣೆಗೂ ಹಾಗೂ ಅವರ ಕುರಿತು ನಡೆಯುತ್ತಿರುವ ಆಂತರಿಕ ತನಿಖೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಇನ್ನೊಂದೆಡೆ ಬೆಂಕಿ ನಂದಿಸಲು ತಮ್ಮ ಸಿಬ್ಬಂದಿ ಹೋಗಿದ್ದ ವೇಳೆ ನ್ಯಾಯಾಧೀಶರ ಮನೆಯಲ್ಲಿ ಭಾರೀ ಹಣ ಪತ್ತೆಯಾಗಿಲ್ಲ ಎಂದು ದೆಹಲಿ ಅಗ್ನಿಶಾಮಕ ಇಲಾಖೆಯ ಮುಖ್ಯಸ್ಥರು ಹೇಳಿರುವುದು ಹೈಡ್ರಾಮಾಕ್ಕೆ ಕಾರಣವಾಗಿದೆ.ಭಾರೀ ನಗದು ಪತ್ತೆ:ಮಾ.14ರಂದು ಬೆಳಗ್ಗೆ ನ್ಯಾ. ವರ್ಮಾ ದೆಹಲಿ ಮನೆಯಲ್ಲಿ ಅಗ್ನಿ ಅವಘಢ ಸಂಭವಿಸಿತ್ತು. ಈ ವೇಳೆ ನ್ಯಾ. ವರ್ಮಾ ಮನೆಯಲ್ಲಿ ಇರಲಿಲ್ಲ. ಆಗ ಕುಟುಂಬ ಸದಸ್ಯರು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದಾರೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸಿದ್ದಾರೆ.
ಹೀಗೆ ಬೆಂಕಿ ಆರಿಸುವ ವೇಳೆ ನ್ಯಾಯಾಧೀಶರ ಮನೆಯಲ್ಲಿ ಕಂತೆಕಂತೆ ನೋಟು ಪತ್ತೆಯಾಗಿತ್ತು. ಕೂಡಲೇ ಅವರು ತಮ್ಮ ಹಿರಿಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಹಿರಿಯ ಸಿಬ್ಬಂದಿಗಳು ವಿಷಯವನ್ನು ದೆಹಲಿ ಹೈಕೋರ್ಟ್ ಸಿಜೆಗೆ ಮತ್ತು ಸಿಜೆ, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ವಿಷಯ ತಂದಿದ್ದಾರೆ ಎಂದು ವರದಿಗಳು ತಿಳಿಸಿವೆ.ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಕೊಲಿಜಿಯಂ ಘಟನೆ ಕುರಿತು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ವರದಿ ಕೇಳಿದ್ದೂ ಅಲ್ಲದೆ, ನ್ಯಾ. ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.