ನವದೆಹಲಿ : 260 ಜನರ ಬಲಿಪಡೆದ ಜೂ.12ರ ಅಹಮದಾಬಾದ್ ಏರಿಂಡಿಯಾ ವಿಮಾನ ಅಪಘಾತದ ಕುರಿತ ಪ್ರಾಥಮಿಕ ತನಿಖಾ ವರದಿ ಶುಕ್ರವಾರ ತಡರಾತ್ರಿ ಬಹಿರಂಗವಾಗಿದೆ. ಅಪಘಾತಕ್ಕೆ ತುತ್ತಾಗುವ ಕೆಲವೇ ಸೆಕೆಂಡ್‌ಗಳ ಮುನ್ನ ವಿಮಾನದ ಎರಡೂ ಎಂಜಿನ್ನಿಗೆ ಇಂಧನ ಪೂರೈಕೆ ಮಾಡುವ ಸ್ವಿಚ್‌ಗಳನ್ನು ಆಫ್ ಮಾಡಲಾಗಿತ್ತು ಎಂದು ಘಟನೆ ಕುರಿತು ತನಿಖೆ ನಡೆಸಿದ್ದ ವಾಯು ಅಪಘಾತ ತನಿಖಾ ಬ್ಯೂರೋ (ಎಎಐಬಿ) ತನ್ನ ವರದಿಯಲ್ಲಿ ಹೇಳಿದೆ. ಈ ಮೂಲಕ ಪೈಲಟ್‌ಗಳು ಎಸಗಿದ ತಪ್ಪೇ ದುರಂತಕ್ಕೆ ಕಾರಣ ಎಂಬ ಕಡೆಗೆ ವರದಿ ಬೊಟ್ಟು ಮಾಡಿದೆ.
ಇದರ ಬೆನ್ನಲ್ಲೇ ‘ಈ ವರದಿ ಪೈಲಟ್‌ಗಳದ್ದೇ ತಪ್ಪು ಎಂದು ಬಿಂಬಿಸುವಂತಿದೆ’ ಎಂದು ಪೈಲಟ್‌ಗಳ ಸಂಘಟನೆ ಅಸಮಾಧಾನ ಹೊರಹಾಕಿದೆ. ಮತ್ತೊಂದೆಡೆ ಕೆಲವು ದೇಶೀಯ ಮತ್ತು ವಿದೇಶಿ ತಜ್ಞರು ಘಟನೆಗೆ ಪೈಲಟ್‌ಗಳ ಮಾನಸಿಕ ಸ್ಥಿತಿಗತಿ ಕಾರಣವಿರಬಹುದು ಅಥವಾ ದುಷ್ಕೃತ್ಯದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಕೆಲವು ವಿದೇಶಿ ಮಾಧ್ಯಮಗಳು ಘಟನೆಗೆ ಪೂರ್ಣ ಪ್ರಮಾಣದಲ್ಲಿ ಪೈಲಟ್‌ಗಳೇ ಕಾರಣ ಎನ್ನುವ ವರದಿ ಪ್ರಕಟಿಸುವ ಮೂಲಕ ವಿದೇಶಿ ಬೋಯಿಂಗ್ ಕಂಪನಿಯನ್ನು ಹೊಣೆಯಿಂದ ಪಾರು ಮಾಡುವ ಯತ್ನ ಮಾಡಿವೆ.
ಪ್ರಾಥಮಿಕ ವರದಿಯು ಹೀಗೆ ನಾನಾ ಗೊಂದಲಕ್ಕೆ ಕಾರಣವಾಗಿದೆ. ಸ್ವಿಚಾಫ್ ಆಗಿದ್ದರೂ ಅದನ್ನು ಮಾಡಿದ್ಯಾರು ಎಂಬ ಗೊಂದಲವಿದೆ. ಹೀಗಾಗಿ ಪ್ರಾಥಮಿಕ ತನಿಖಾ ವರದಿ ಆಧರಿಸಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರುವುದು ಬೇಡ ಎಂದು ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ. ಹೀಗಾಗಿ ಅಂತಿಮ ವರದಿಯಲ್ಲಿ ಏನು ಬರಬಹುದು ಎಂಬ ಕುತೂಹಲ ಈಗ ಮನೆ ಮಾಡಿದೆ.
ಈ ನಡುವೆ ಇನ್ನೊಂದೆಡೆ ಏರ್ ಇಂಡಿಯಾ ಮತ್ತು ಬೋಯಿಂಗ್ ವಿಮಾನ ಕಂಪನಿಗಳು ತನಿಖೆಗೆ ಎಲ್ಲಾ ರೀತಿಯಲ್ಲಿ ನೆರವು ನೀಡುವುದಾಗಿ ಪುನರುಚ್ಚರಿಸಿವೆ.
ವರದಿ ಹೇಳಿದ್ದೇನು?:
ಜೂ.12ರಂದು ಮಧ್ಯಾಹ್ನ 1.08ಕ್ಕೆ 230 ಪ್ರಯಾಣಿಕರು, 12 ಸಿಬ್ಬಂದಿ ಹೊತ್ತ ವಿಮಾನ ಸಂಚಾರ ಆರಂಭಿಸಿತ್ತು. ಆದರೆ ಹೊರಟ 30 ಸೆಕೆಂಡ್‌ಗಳಲ್ಲೇ ವಿಮಾನದ ಎಂಜಿನ್‌ಗಳಿಗೆ ಇಂಧನ ಪೂರೈಕೆ ಕಡಿತ ಮಾಡುವ ಸ್ವಿಚ್ ಆಫ್ ಮಾಡಲಾಗಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಮತ್ತೆ ಇಂಧನ ಪೂರೈಕೆ ಸ್ವಿಚ್ ಆನ್ ಮಾಡಲಾಗಿದೆ. ಈ ವಿಷಯದ ಬಗ್ಗೆ ಪೈಲಟ್‌ಗಳ ಗೊಂದಲದ ಕುರಿತು ಕ್‌ಪೀಟ್ ವಾಯ್ಸ್ ರೆಕಾರ್ಡ್‌ರ್‌ನಲ್ಲಿ ಮಾಹಿತಿ ಸಂಗ್ರಹವಾಗಿದೆ. ಅದರಲ್ಲಿ ಒಬ್ಬ ಪೈಲಟ್, ಇನ್ನೊಬ್ಬನಿಗೆ ಕಟಾಫ್ ಏಕೆ ಮಾಡಿದೆ ಎಂದು ಕೇಳುತ್ತಾನೆ. ಅದಕ್ಕೆ ಮತ್ತೊಬ್ಬ ನಾನು ಮಾಡಿಲ್ಲ ಎನ್ನುತ್ತಾನೆ ಎಂದು ವರದಿ ಹೇಳಿದೆ.ಇಂಧನ ಪೂರೈಕೆ ಸ್ಥಗಿತಗೊಂಡಿದ್ದರಿಂದ ಆಫ್ ಆಗಿದ್ದ ಎರಡೂ ಎಂಜಿನ್‌ಗಳನ್ನು ಪುನಾರಂಭಿಸುವ ಯತ್ನವನ್ನು ಪೈಲಟ್‌ಗಳೂ ಮಾಡಿದ್ದರಾದರೂ ಅದು ಫಲ ಕೊಟ್ಟಿಲ್ಲ. ಕೂಡಲೇ ಅವರು ಮೇಡೇ ಸಂದೇಶ ರವಾನಿಸಿದ್ದಾರೆ. ಆದರೆ ಇದಕ್ಕೆ ಏರ್‌ಟ್ರಾಫಿಕ್ ಕಂಟ್ರೋಲರ್‌ಗಳು ಪ್ರತಿಕ್ರಿಯಿಸಲು ಮುಂದಾದ ವೇಳೆ ವಿಮಾನದ ಜೊತೆ ಸಂಪರ್ಕ ಸಾಧ್ಯವಾಗಿಲ್ಲ. ಇದಾದ ಕೆಲವೇ ಸೆಕೆಂಡ್‌ಗಳಲ್ಲಿ ವಿಮಾನವು ಬಿಜೆ ಮೆಡಿಕಲ್ ಕಾಲೇಜಿನ ಕಟ್ಟಡದ ಮೇಲೆ ಅಪ್ಪಳಿಸಿದೆ ಎಂದು ವರದಿ ಹೇಳಿದೆ.
ಉಳಿದಂತೆ ಸಣ್ಣ ಪುಟ್ಟ ವಿಷಯಗಳನ್ನು ಹೊರುತಪಡಿಸಿದರೆ ವಿಮಾನವು ಸಂಚಾರಕ್ಕೆ ಎಲ್ಲಾ ಅರ್ಹತೆ ಹೊಂದಿದ್ದ ಸ್ಥಿತಿಯಲ್ಲಿತ್ತು. ವಿಮಾನದ ಎಂಜಿನ್‌ಗೆ ಇಂಧನ ಪೂರೈಸುವ ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಇರಲಿಲ್ಲ. ಈ ಹಿಂದೆ ಕಟಾಫ್ ಸ್ವಿಚ್‌ನ ಕುರಿತು ಯಾವುದೇ ದೋಷ ಕಂಡುಬಂದಿರಲಿಲ್ಲ ಎಂದು ವರದಿ ಹೇಳಿದೆ.ಜೊತೆಗೆ ಬೋಯಿಂಗ್ 737 ವಿಮಾನಗಳಲ್ಲಿ ಫ್ಯೂಯಲ್ ಎಂಜಿನ್ ವ್ಯವಸ್ಥೆಯಲ್ಲಿನ ಲಾಕಿಂಗ್ ಸಿಸ್ಟಮ್ ಇಲ್ಲದೇ ಇರುವುದರ ಬಗ್ಗೆ ಅಮೆರಿಕದ ವಿಮಾನಯಾನ ಕಣ್ಗಾವಲು ಸಂಸ್ಥೆಯಾದ ಎಫ್‌ಎಎ 2018ರಲ್ಲೇ ಎಚ್ಚರಿಸಿತ್ತು. ಆದರೆ ಇದು ಸಲಹಾ ರೂಪದಲ್ಲಿದ್ದ ಕಾರಣ ಅದನ್ನು ಏರ್ ಇಂಡಿಯಾ ಕೂಡಾ ಪರಿಶೀಲಿಸಿರಲಿಲ್ಲ ಎಂದು ವರದಿ ಹೇಳಿದೆ.
ಸ್ವಿಚಾಫ್ ಮಾಡಿದ್ಯಾರು?
- ಪತನಕ್ಕೆ ಕಾರಣವಾದ ಅಂಶಗಳ ಪ್ರಾಥಮಿಕ ತನಿಖಾ ವರದಿ ಸಂಚಲನ
- ಪೈಲಟ್‌ಗಳಿಂದ ಸ್ವಿಚಾಫ್ ಆಗಿದ್ಹೇಗೆ ಎಂದು ಹಲವು ರಕ್ಷಣಾ ತಜ್ಞರ ಶಂಕೆ
- ಇಂಥ ಆರೋಪ ಬೋಯಿಂಗ್ ಪಾರು ಮಾಡುವ ಯತ್ನವೆಂಬ ಗುಮಾನಿ
- ಅಂತಿಮ ವರದಿಗಾಗಿ ಕಾಯಿರಿ: ವಿಶ್ಲೇಷಣೆಗೆ ಕೇಂದ್ರ ಸರ್ಕಾರದ ಸಲಹೆ