ತೆರಿಗೆ ಶಾಕ್‌: ಆಗರ್ಭ ಸಿರಿವಂತ ಮಿತ್ತಲ್ ಬ್ರಿಟನ್‌ಗೆ ಗುಡ್‌ಬೈ

KannadaprabhaNewsNetwork |  
Published : Nov 25, 2025, 03:15 AM ISTUpdated : Nov 25, 2025, 04:18 AM IST
lakshmi mittal

ಸಾರಾಂಶ

ಭಾರತ ಮೂಲದ ಶ್ರೀಮಂತ ಉದ್ಯಮಿ, ಆರ್ಸೆಲರ್‌ಮಿತ್ತಲ್‌ ಉಕ್ಕು ಕಂಪನಿಯ ಮಾಲೀಕ ಲಕ್ಷ್ಮೀ ನಿವಾಸ್‌ ಮಿತ್ತಲ್‌ 30 ವರ್ಷಗಳ ಬಳಿಕ ಲಂಡನ್‌ ತೊರೆದು, ದುಬೈನಲ್ಲಿ ನೆಲೆಸಲು ಮುಂದಾಗಿದ್ದಾರೆ.

 ಲಂಡನ್‌: ಭಾರತ ಮೂಲದ ಶ್ರೀಮಂತ ಉದ್ಯಮಿ, ಆರ್ಸೆಲರ್‌ಮಿತ್ತಲ್‌ ಉಕ್ಕು ಕಂಪನಿಯ ಮಾಲೀಕ ಲಕ್ಷ್ಮೀ ನಿವಾಸ್‌ ಮಿತ್ತಲ್‌ 30 ವರ್ಷಗಳ ಬಳಿಕ ಲಂಡನ್‌ ತೊರೆದು, ದುಬೈನಲ್ಲಿ ನೆಲೆಸಲು ಮುಂದಾಗಿದ್ದಾರೆ. ಕೆಲ ತಿಂಗಳುಗಳಿಂದ ಹಲವು ಉದ್ಯಮಿಗಳು ಬ್ರಿಟನ್‌ ತೊರೆದು, ದುಬೈ, ಸಿಂಗಪುರ, ಸ್ವಿಜರ್‌ಲೆಂಡ್‌ನಂಥ ದೇಶಗಳಿಗೆ ತೆರಳಿದ್ದಾರೆ. ಕೋಟ್ಯಧಿಪತಿಗಳನ್ನು ಗುರಿಯಾಗಿಸಿಕೊಂಡು ಬ್ರಿಟನ್‌ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಹೊಸ ತೆರಿಗೆ ನೀತಿಯೇ ಉದ್ಯಮಿಗಳು ಲಂಡನ್‌ ತೊರೆಯಲು ಕಾರಣ ಎನ್ನಲಾಗಿದೆ.

ಬ್ರಿಟನ್‌ ತೊರೆಯುತ್ತಿರುವುದೇಕೆ?:

ಇದುವರೆಗೆ ಬ್ರಿಟನ್‌ನಲ್ಲಿ ಗಳಿಸಿದ ಆದಾಯಕ್ಕೆ ಮಾತ್ರ ತೆರಿಗೆ ವಿಧಿಸಲಾಗುತ್ತಿತ್ತು. ಬ್ರಿಟನ್‌ ಹೊರತಾಗಿ ಜಗತ್ತಿನ ಬೇರೆಡೆಯಿಂದ ಬರುವ ಆದಾಯಕ್ಕೆ ಯಾವುದೇ ರೀತಿಯ ತೆರಿಗೆಯಿರಲಿಲ್ಲ. ಆದರೆ ಸರ್ಕಾರದ ಹೊಸ ನೀತಿಯ ಪ್ರಕಾರ, ವಿಶ್ವದ ಎಲ್ಲಿಂದ ಆದಾಯ ಬಂದರೂ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ. ವಿದೇಶಗಳಲ್ಲಿರುವ ಆಸ್ತಿಗೂ ತೆರಿಗೆ ಬೀಳುತ್ತದೆ. ಇಂಥದ್ದೊಂದು ನೀತಿಯನ್ನು ನ.26ರ ಬಜೆಟ್‌ನಲ್ಲಿ ಸರ್ಕಾರ ಮಂಡಿಸಲಿದೆ ಎನ್ನಲಾಗಿದೆ. ಇದು ಜಾರಿಗೆ ಬಂದರೆ ವಿಶ್ವಾದ್ಯಂತ ಉದ್ಯಮಗಳನ್ನು ಸ್ಥಾಪಿಸಿರುವ ಮಿತ್ತಲ್‌ರಂಥ ಉದ್ಯಮಿಗಳಿಗೆ ಅಪಾರ ತೆರಿಗೆ ಹೊರೆ ಬೀಳಲಿದೆ.

ವಾರಸುದಾರಿಕೆ ತೆರಿಗೆ ಹೊಡೆತ:

ವಾರಸುದಾರಿಕೆ ತೆರಿಗೆ ಎಂದರೆ ಒಬ್ಬ ವ್ಯಕ್ತಿ ಸತ್ತ ನಂತರ ಅವನು ಬಿಟ್ಟುಹೋಗುವ ಎಲ್ಲ ಆಸ್ತಿ (ಹಣ, ಮನೆ, ಕಾರ್ಖಾನೆ, ಷೇರುಗಳು, ವಿದೇಶದಲ್ಲಿರುವ ಆಸ್ತಿ) ಮಕ್ಕಳಿಗೆ ಅಥವಾ ವಾರಸುದಾರರಿಗೆ ಬರುವಾಗ ಸರ್ಕಾರ ಅದರ ಮೇಲೆ ಹಾಕುವ ತೆರಿಗೆ. ಬ್ರಿಟನ್‌ಗೆ ದೊಡ್ಡ ಆದಾಯ ಈ ತೆರಿಗೆಯಿಂದ ಬರುತ್ತದೆ. ಸುಮಾರು 3.5 ಕೋಟಿ ರು.ಗಿಂತ ಕಡಿಮೆ ಆಸ್ತಿ ಇದ್ದರೆ ಈ ತೆರಿಗೆ ಅನ್ವಯವಾಗುವುದಿಲ್ಲ. ಅದಕ್ಕಿಂತ ಹೆಚ್ಚು ಆಸ್ತಿ ಇದ್ದರೆ ಶೇ.40ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಬ್ರಿಟನ್‌ನಲ್ಲಿ ದೀರ್ಘಕಾಲ ವಾಸಿಸುತ್ತಿದ್ದರೆ ಜಗತ್ತಿನ ಎಲ್ಲೆಡೆಯ ಆಸ್ತಿಗೂ ಈ ತೆರಿಗೆ ಅನ್ವಯವಾಗುತ್ತದೆ. ವಿದೇಶಗಳಲ್ಲೂ ಸಾವಿರಾರು ಕೋಟಿ ರು. ಆಸ್ತಿ ಹೊಂದಿರುವ ಮಿತ್ತಲ್‌ರಂತಹ ಉದ್ಯಮಿಗಳನ್ನು ಇದು ಚಿಂತೆಗೀಡುಮಾಡಿದೆ.

ಲಕ್ಷ್ಮೀ ಮಿತ್ತಲ್ ಯಾರು?

ಲಕ್ಷ್ಮೀ ಮಿತ್ತಲ್ ಜಗತ್ತಿನ 2ನೇ ದೊಡ್ಡ ಉಕ್ಕು ಕಂಪನಿ ಆರ್ಸೆಲರ್‌ಮಿತ್ತಲ್‌ನ ಮಾಲೀಕ. ಸುಮಾರು 1.75 ಲಕ್ಷ ಕೋಟಿ ರು. ಆಸ್ತಿಯ ಒಡೆಯ. 1995ರಿಂದ ಲಂಡನ್‌ನಲ್ಲಿ ವಾಸ ಮಾಡುತ್ತಿದ್ದು, ಅಲ್ಲಿಯೇ ತಮ್ಮ ಬೃಹತ್‌ ಉದ್ಯಮವನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಕಂಪನಿ ವಾರ್ಷಿಕ 5 ಲಕ್ಷ ಕೋಟಿ ರು.ಗೂ ಅಧಿಕ ಆದಾಯ ಹೊಂದಿದೆ. ವಿಶ್ವಾದ್ಯಂತ 1.25 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಭಾರತದ ಶ್ರೀಮಂತರ ಪಟ್ಟಿಯಲ್ಲಿ 12ನೇ ಮತ್ತು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 104ನೇ ಸ್ಥಾನ ಪಡೆದಿದ್ದಾರೆ.

PREV
Read more Articles on

Recommended Stories

ರೈತರಿಂದಲೇ ಉತ್ಪನ್ನ ಖರೀದಿಸಿ : ಹೋಟೆಲ್‌ಗಳಿಗೆ ಸರ್ಕಾರ ಸಲಹೆ
ರಾಮಮಂದಿರದಲ್ಲಿಂದು ಮೋದಿ ಕೇಸರಿ ಧ್ವಜಾರೋಹಣ