‘ಇಂಡಿಯಾ’ ಗೆದ್ದರೆ ಕರ್ನಾಟಕದ ಅನ್ನಭಾಗ್ಯ ದೇಶಾದ್ಯಂತ ವಿಸ್ತರಣೆ

KannadaprabhaNewsNetwork | Updated : May 17 2024, 06:20 AM IST

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಜಾರಿಯಾಗಿರುವ ‘ಅನ್ನಭಾಗ್ಯ’ ಯೋಜನೆಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಕಾಂಗ್ರೆಸ್‌ ಗುರುವಾರ ಘೋಷಣೆ ಮಾಡಿದೆ.

 ನವದೆಹಲಿ : ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಜಾರಿಯಾಗಿರುವ ‘ಅನ್ನಭಾಗ್ಯ’ ಯೋಜನೆಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಕಾಂಗ್ರೆಸ್‌ ಗುರುವಾರ ಘೋಷಣೆ ಮಾಡಿದೆ.

ಇಂಡಿಯಾ ಕೂಟ ಗದ್ದುಗೆಗೆ ಏರಿದರೆ, ಈಗ ನೀಡಲಾಗುತ್ತಿರುವ ಉಚಿತ ಅಕ್ಕಿಯ ಪ್ರಮಾಣವನ್ನು ದ್ವಿಗುಣಗೊಳಿಸಲಾಗುವುದು ಎಂದು ಬುಧವಾರವಷ್ಟೇ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈ ರಾಮ್‌ ರಮೇಶ್‌, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ/ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆಯಡಿ ಪ್ರತಿ ಫಲಾನುಭವಿಗೆ ಎಷ್ಟು ಅಕ್ಕಿ ನೀಡಲಾಗುತ್ತಿದೆಯೋ ಅದನ್ನು ದ್ವಿಗುಣಗೊಳಿಸಲಾಗುವುದು. ಅಂದರೆ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

2023ರ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಜನರು ತಿರಸ್ಕರಿಸಿದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡಿಗರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. 10 ಕೇಜಿ ಉಚಿತ ಅಕ್ಕಿ ನೀಡುವ ಕಾಂಗ್ರೆಸ್‌ ಸರ್ಕಾರದ ಅನ್ನ ಭಾಗ್ಯ ಯೋಜನೆಯನ್ನು ಬುಡಮೇಲು ಮಾಡಲು ಯತ್ನಿಸಿದರು. ಆದರೂ ಕಾಂಗ್ರೆಸ್‌ ಸರ್ಕಾರ ಇದರ ವಿರುದ್ಧ ಸೆಟೆದು ನಿಂತು ಅನ್ನಭಾಗ್ಯ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿನ ಆಹಾರ ವಿತರಣೆ ಬಗ್ಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಸುಳ್ಳುಗಳನ್ನು ಹರಡುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು 2013ರ ಸೆಪ್ಟೆಂಬರ್‌ನಲ್ಲಿ ಅಂಗೀಕರಿಸಿದ್ದು ಮನಮೋಹನ ಸಿಂಗ್‌ ನೇತೃತ್ವದ ಸರ್ಕಾರ. 2011ರ ಜನಗಣತಿ ಆಧರಿಸಿ ಆಗ 80 ಕೋಟಿ ಜನರಿಗೆ ಆಹಾರ ಒದಗಿಸಲಾಗುತ್ತಿತ್ತು. ಆದರೆ ಆ ಯೋಜನೆಯನ್ನು ಲಿಖಿತವಾಗಿ ವಿರೋಧಿಸಿದ ದೇಶದ ಏಕಮಾತ್ರ ಸಿಎಂ ಒಬ್ಬರಿದ್ದರು. ಅವರೇ ಅಂದಿನ ಗುಜರಾತ್‌ ಸಿಎಂ, ಇಂದಿನ ಪ್ರಧಾನಿ ನರೇಂದ್ರ ಮೋದಿ. ಆಹಾರ ಭದ್ರತಾ ಕಾಯ್ದೆ ಜಾರಿಗೆ ಅವರು ಏನನ್ನೂ ಮಾಡಿರಲಿಲ್ಲ. ಕೋವಿಡ್‌ ಸಂದರ್ಭದಲ್ಲಿ ಮೋದಿ ಅವರಿಗೆ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ದಿಢೀರ್‌ ಜ್ಞಾನೋದಯವಾಯಿತು. ಹೀಗಾಗಿ ಆಹಾರ ಭದ್ರತಾ ಕಾಯ್ದೆಯನ್ನು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ ಎಂದು ಮರು ಬ್ರ್ಯಾಂಡ್‌ ಮಾಡಿ ಮಾರ್ಕೆಟ್‌ ಮಾಡಿದರು ಎಂದು ಮೂದಲಿಸಿದ್ದಾರೆ.

Share this article