ನವದೆಹಲಿ: ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ, ಬಿಜೆಪಿ ನಾಯಕ ಪರ್ವೇಶ್ ವರ್ಮಾ ₹100 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಮಾನಹಾನಿ ನೋಟಿಸ್ ನೀಡಿದ್ದು 48 ತಾಸಿನಲ್ಲಿ ಕ್ಷಮೆ ಕೇಳಲು ಗಡುವು ವಿಧಿಸಿದ್ದಾರೆ.
‘ನನ್ನ ವಿರುದ್ಧ ಕೇಜ್ರಿವಾಲ್ ಸುಳ್ಳು ಹಾಗೂ ಮಾನಹಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆ’ ಎಂದು ಆರೋಪಿಸಿರುವ ಅವರು ದಾವೆ ಹೂಡುವ ಘೋಷಣೆ ಮಾಡಿದ್ದಾರೆ. ವರ್ಮಾ ದೆಹಲಿ ವಿಧಾನಸಭೆ ಚುನಾವಣೆಗೆ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
‘ಪಂಜಾಬಿಗಳಿಂದ ದೇಶಕ್ಕೆಬೆದರಿಕೆ ಇದೆ ಎಂದು ಪರ್ವೇಶ್ ಹೇಳಿಕೆ ನೀಡಿದ್ದಾರೆ’ ಎಂದು ಕೇಜ್ರಿವಾಲ್ ಇತ್ತೀಚೆಗೆ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವರ್ಮಾ, ‘ನಾನು ಮತ್ತು ನನ್ನ ಕುಟುಂಬ ಸಿಖ್ ಸಮುದಾಯಕ್ಕೆ ಏನು ಮಾಡಿದ್ದೇವೆ ಎಂಬುದನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿಲ್ಲ’ ಎಂದಿದ್ದಾರೆ. ಒಂದು ವೇಳೆ ಪ್ರಕರಣಗಳಲ್ಲಿ ತಾವು ಜಯ ಸಾಧಿಸಿದರೆ ಆ ಹಣವನ್ನು ದೆಹಲಿ ಅಭಿವೃದ್ಧಿಗೆ ನೀಡುವುದಾಗಿ ಹೇಳಿದ್ದಾರೆ.
ಕೇರಳದಲ್ಲೂ ಪಿಪಿಇ ಕಿಟ್ ಹಗರಣ ಸದ್ದು
ತಿರುವನಂತಪುರ: ಕೆಲವು ರಾಜ್ಯಗಳಂತೆ ಕೇರಳದಲ್ಲಿಯೂ ಪಿಪಿಇ ಕಿಟ್ ಖರೀದಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ‘ಕಿಟ್ ಖರೀದಿಗೆ ರಾಜ್ಯ ಸರ್ಕಾರ ಶೇ.300ರಷ್ಟು ಹೆಚ್ಚು ಬೆಲೆ ತೆತ್ತಿದೆ’ ಎಂದು ಮಹಾಲೇಖಪಾಲಕರ (ಸಿಎಜಿ) ವರದಿ ಹೇಳಿದೆ.
ಮಂಗಳವಾರ ಕೇರಳ ವಿಧಾನಸಭೆಯಲ್ಲಿ ವರದಿ ಮಂಡಿಸಲಾಯಿತು. ಅದರಲ್ಲಿ, ’2020ರ ಮಾರ್ಚ್ ಮತ್ತು ಏಪ್ರಿಲ್ ನಡುವೆ ಅಕ್ರಮ ನಡೆದಿದೆ 1 ಪಿಪಿಇ ಕಿಟ್‌ಗೆ ಸರ್ಕಾರ ನಿಗದಿಪಡಿಸಿದ್ದ 545 ರು. ಬೆಲೆಗೆ ಅತಿ ಹತ್ತಿರವಾದ 550 ರು.ಗೆ ನೀಡಲು ಕಂಪನಿಯೊಂದು ಮುಂದಾಗಿತ್ತು. ಆದರೆ ಪಿಣರಾಯಿ ವಿಜಯನ್ ಸರ್ಕಾರ ಅನ್ಯ ಕಂಪನಿಗಳಿಂದ 1 ಕಿಟ್‌ಗೆ 800 ರು.ನಿಂದ 1500 ರು.ವರೆಗೆ ಪಾವತಿಸಿ ಖರೀದಿ ಮಾಡಿತ್ತು. ಇದರಿಂದ 10.23 ಕೋಟಿ ಹೆಚ್ಚುವರಿ ಪಾವತಿಸಬೇಕಾಯಿತು. ಇದು ಶೇ.300ಕ್ಕಿಂತ ಅಧಿಕವಾಗಿತ್ತು’ ಎಂದು ಸಿಎಜಿ ಹೇಳಿದೆ.
ಅಕ್ರಮ ಸಮರ್ಥನೆ:
ಈ ಹಿಂದೆಯೇ ಕೋವಿಡ್ ಕಿಟ್‌ನಲ್ಲಿ ಅಕ್ರಮ ನಡೆದಿದೆ ಎಂದು ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಾಗ ಪಿಣರಾಯಿ ಸರ್ಕಾರ ಅಕ್ರಮವನ್ನು ಸಮರ್ಥಿಸಿಕೊಂಡಿತ್ತು. ಕೋವಿಡ್‌ನಲ್ಲಿ ತುರ್ತು ಸ್ಥಿತಿ ಇದ್ದ ಕಾರಣ ಹೆಚ್ಚುವರಿ ಹಣ ಕೊಟ್ಟು ಖರೀದಿ ಮಾಡಿದ್ದೆವು ಎಂದು ಹೇಳಿ ಅಕ್ರಮ ಸಮರ್ಥಿಸಿಕೊಂಡಿತ್ತು.
ವೈದ್ಯೆ ರೇಪಿಸ್ಟ್‌ಗೆ ಗಲ್ಲು: ಹೈಕೋರ್ಟ್‌ಗೆ ಸಿಬಿಐ ಮೇಲ್ಮನವಿ
ಕೋಲ್ಕತಾ/ನವದೆಹಲಿಕೋಲ್ಕತಾದ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ವೈದ್ಯೆ ರೇಪ್ ಆರೋಪಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿರುವುದರ ವಿರುದ್ಧ ಸಿಬಿಐ ಕೋಲ್ಕತಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ ಹಾಗೂ ಗಲ್ಲು ಶಿಕ್ಷೆ ವಿಧಿಸಲು ಕೋರಿದೆ.
ಇದು ಅಪರೂಪದಲ್ಲಿಯೇ ಅಪರೂಪ ಪ್ರಕರಣ ಅಲ್ಲ ಎನ್ನುವ ಕಾರಣ ನೀಡಿ ನ್ಯಾಯಾಲಯ ಮರಣದಂಡನೆ ನಿರಾಕರಿಸಿತ್ತು. ಈ ತೀರ್ಪಿನ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ ಕಾನೂನು ಸಲಹೆಗಳನ್ನು ಪಡೆದು, ದೋಷಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಿದೆ.
ಬಂಗಾಳ ಅರ್ಜಿಗೆ ವಿರೋಧ:ಇದಕ್ಕೂ ಮುನ್ನ ರಾಯ್‌ಗೆ ಜೀವಾವಧಿ ಶಿಕ್ಷೆ ಪ್ರಕರಣದಲ್ಲಿ ಬಂಗಾಳ ಸರ್ಕಾರದ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವ ನಿರ್ಧಾರಕ್ಕೆ ಸಿಬಿಐ ಕೋರ್ಟ್‌ನಲ್ಲಿ ಆಕ್ಷೇಪಿಸಿತ್ತು. ‘ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಸಂಸ್ಥೆಯಿಂದ ನಡೆಸುವ ತನಿಖೆ ಪ್ರಕರಣಗಳಲ್ಲಿ ಮೇಲ್ಮನವಿಯನ್ನು ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ. ರಾಜ್ಯಕ್ಕೆ ಅಧಿಕಾರ ನೀಡಲಾಗುವುದಿಲ್ಲ’ ಎಂದು ವಾದಿಸಿತ್ತು.
ಕೋಟಾದಲ್ಲಿ ಒಂದೇ ದಿನ 2 ವಿದ್ಯಾರ್ಥಿಗಳ ಆತ್ಮಹತ್ಯೆ
ಜೈಪುರ: ಕೋಚಿಂಗ್ ಹಬ್ ಅಂತಲೇ ಖ್ಯಾತಿ ಗಳಿಸಿರುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, 24 ಗಂಟೆಯಲ್ಲೇ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಈ ತಿಂಗಳೊಂದರಲ್ಲೇ ನಡೆದ 6ನೇ ಘಟನೆಯಾಗಿದೆ.
ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಗುಜರಾತಿನ ಅಹಮದಾಬಾದ್ ಮೂಲದ ಅಫ್ಶಾ ಶೇಖ್ ಎನ್ನುವ ಯುವತಿ ಜವಾಹರ್ ನಗರದ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದಾದ ಕೆಲವೇ ಗಂಟೆಯಲ್ಲಿ ಅಸ್ಸಾಂನ ನಾಗನ್‌ನ ಪರಾಗ್ ಎಂಬ ವಿದ್ಯಾರ್ಥಿ ಇಲ್ಲಿನ ಮಹಾವೀರ ನಗರ ಪ್ರದೇಶದಲ್ಲಿನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಇದು ಕೋಟಾದಲ್ಲಿ 2025ರಲ್ಲಿ ನಡೆದ 6 ನೇ ಆತ್ಮಹತ್ಯೆ ಪ್ರಕರಣವಾಗಿದೆ. ಕಳೆದ ವರ್ಷ 17 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.
==
ಭಾರತದ ಮತದಾರರ ಸಂಖ್ಯೆ 99 ಕೋಟಿಗೆ ಏರಿಕೆ
ನವದೆಹಲಿ: ಕಳೆದ ವರ್ಷ ಲೋಕಸಭಾ ಚುನಾವಣೆ ವೇಳೆ 96.88 ಕೋಟಿಯಿದ್ದ ಭಾರತದ ಮತದಾರರ ಸಂಖ್ಯೆ ಈಗ 99.1 ಕೋಟಿಗೆ ಏರಿಕೆಯಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.ರಾಷ್ಟ್ರೀಯ ಮತದಾರರ ದಿನಾಚರಣೆ ಹಿನ್ನೆಲೆ ನೀಡಿದ ಹೇಳಿಕೆಯಲ್ಲಿ, ‘ಮತದಾರರ ಪಟ್ಟಿಯು 18-29 ವಯಸ್ಸಿನ 21.7 ಕೋಟಿ ಯುವ ಮತದಾರರನ್ನು ಹೊಂದುವ ಮೂಲಕ ಯುವ ಮತ್ತು ಲಿಂಗ-ಸಮತೋಲನವನ್ನು ಹೊಂದಿದೆ. ಚುನಾವಣಾ ಲಿಂಗ ಅನುಪಾತದಲ್ಲಿ 6 ಅಂಶಗಳ ಹೆಚ್ಚಳವಾಗಿದೆ (2024ರಲ್ಲಿ 948 - 2025ರಲ್ಲಿ 954)’ ಎಂದು ಹೇಳಿದೆ.