ಬಾಂಗ್ಲಾ ರೀತಿ ಮ್ಯಾನ್ಮಾರ್‌ ಗಡಿಗೂ ಬೇಲಿ: ಅಮಿತ್‌ ಶಾ

KannadaprabhaNewsNetwork | Updated : Jan 21 2024, 08:04 AM IST

ಸಾರಾಂಶ

ಮ್ಯಾನ್ಮಾರ್‌ನಿಂದ ಭಾರತಕ್ಕೆ ಬರುತ್ತಿರುವ ಅಕ್ರಮ ವಲಸಿಗರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಮುಕ್ತ ಸಂಚಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮುಕ್ತಿ ನೀಡುವ ಕ್ರಮಕ್ಕೆ ಬಂದಿದ್ದು, ಬಾಂಗ್ಲಾದೇಶ ರೀತಿ ಮ್ಯಾನ್ಮಾರ್‌ ಗಡಿಗೂ ಬೇಲಿಗಳನ್ನು ಅಳವಡಿಸಲಾಗುವುದು ಎಂದು  ಅಮಿತ್‌ ಶಾ ಹೇಳಿದ್ದಾರೆ.

ಗುವಾಹಟಿ: ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷದ ಬೆನ್ನಲ್ಲೇ ದೇಶದ ಭದ್ರತೆಗಾಗಿ ಅಕ್ರಮ ಪ್ರವೇಶ ತಡೆಯುವುದಕ್ಕಾಗಿ ಮ್ಯಾನ್ಮಾರ್‌ ಹಾಗೂ ಭಾರತದ ಗಡಿಯಲ್ಲಿ ಬೇಲಿ ನಿರ್ಮಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅಸ್ಸಾಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಬಾಂಗ್ಲಾದೇಶದ ಗಡಿಯಲ್ಲಿ ಬೇಲಿ ನಿರ್ಮಾಣ ಮಾಡಿದಂತೆ, ಮ್ಯಾನ್ಮಾರ್‌ ಗಡಿಗೂ ಬೇಲಿ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಿದ್ದಾರೆ. 

ಅಲ್ಲದೇ ಮ್ಯಾನ್ಮಾರ್‌ ಮತ್ತು ಭಾರತದ ನಡುವೆ ಇರುವ ಮುಕ್ತ ಓಡಾಟ ಒಪ್ಪಂದವು ಸಹ ಶೀಘ್ರ ಅಂತ್ಯಗೊಳ್ಳಲಿದೆ’ ಎಂದು ಹೇಳಿದರು.

ಮ್ಯಾನ್ಮಾರ್‌ನಲ್ಲಿ ಆರಂಭವಾಗಿರುವ ಸಂಘರ್ಷದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಭಾರತವನ್ನು ಪ್ರವೇಶಿಸಬಹುದು.

ಇದು ಭದ್ರತಾ ಸಮಸ್ಯೆಗಳನ್ನು ಉಂಟು ಕಾರಣವಾಗಲಿದೆ ಎಂಬ ಮಿಜೋರಂ ಸೇರಿದಂತೆ ಈಶಾನ್ಯ ರಾಜ್ಯಗಳ ಆತಂಕ ಬಳಿಕ ಅಮಿತ್‌ ಶಾ ನಿರ್ಧಾರ ಪ್ರಕಟಿಸಿದ್ದಾರೆ.

ಈಗಿನ ನಿಯಮ ಏನು?
ಮ್ಯಾನ್ಮಾರ್ ಭಾರತದೊಂದಿಗೆ 1643 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದ್ದು, ಮುಕ್ತ ಓಡಾಟ ಒಪ್ಪಂದದ ಪ್ರಕಾರ ಉಭಯ ದೇಶಗಳ ಗಡಿಯಿಂದ 16 ಕಿ.ಮೀ. ದೂರದವರೆಗೆ ವೀಸಾ ಇಲ್ಲದೇ ಪ್ರಯಾಣ ನಡೆಸಬಹುದಿತ್ತು.

Share this article