ಪಾಕಿಸ್ತಾನ ತನ್ನ ಮೇಲೇನಾದರೂ ದಾಳಿ ನಡೆಸಿದರೆ ಅಥವಾ ನೀರಿನ ಹರಿವು ತಡೆದರೆ ಅಣ್ವಸ್ತ್ರ ಸೇರಿ ಎಲ್ಲಾ ರೀತಿಯ ಅಸ್ತ್ರ ಬಳಸಿ ಭಾರತದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ.
ನವದೆಹಲಿ: ಒಂದು ಕಡೆ ಭಾರತದ ದಾಳಿ ತಡೆಯುವಂತೆ ಪಾಶ್ಚಿಮಾತ್ಯ ದೇಶಗಳ ಕೈಕಾಲು ಹಿಡಿಯುತ್ತಿರುವ ಪಾಕಿಸ್ತಾನ, ಇನ್ನೊಂದು ಕಡೆ ಭಾರತಕ್ಕೆ ಮತ್ತೆ ಅಣ್ವಸ್ತ್ರಗಳ ಧಮ್ಕಿ ಹಾಕಿದೆ. ತನ್ನ ಮೇಲೇನಾದರೂ ದಾಳಿ ನಡೆಸಿದರೆ ಅಥವಾ ನೀರಿನ ಹರಿವು ತಡೆದರೆ ಅಣ್ವಸ್ತ್ರಗಳೂ ಸೇರಿ ಎಲ್ಲಾ ರೀತಿಯ ಅಸ್ತ್ರಗಳನ್ನು ಬಳಸಿಕೊಂಡು ಭಾರತದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ.
ರಷ್ಯಾದ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಸ್ಕೋದಲ್ಲಿರುವ ಪಾಕಿಸ್ತಾನದ ಹಿರಿಯ ರಾಯಭಾರಿ ಮುಮ್ಮದ್ ಖಾಲಿದ್ ಜಮಾಲಿ, ‘ಭಾರತದ ದಾಳಿ ಕುರಿತು ನಮ್ಮ ಬಳಿ ವಿಶ್ವಾಸಾರ್ಹ ಮಾಹಿತಿ ಇದೆ. ಭಾರತವು ಪಾಕಿಸ್ತಾನದ ನಿರ್ದಿಷ್ಟ ಪ್ರದೇಶಗಳನ್ನು ಗುರಿ ಮಾಡಿಕೊಂಡು ದಾಳಿ ನಡೆಸುವುದು ಸ್ಪಷ್ಟ. ಭಾರತದಿಂದ ಸೋರಿಕೆಯಾದ ಮಾಹಿತಿಗಳಿಂದ ಇದು ಸ್ಪಷ್ಟವಾಗಿದೆ. ಭಾರತವೇನಾದರೂ ದಾಳಿ ನಡೆಸಿದರೆ ನಾವು ಸಾಂಪ್ರದಾಯಿಕ ಹಾಗೂ ಅಣ್ವಸ್ತ್ರ ಎರಡೂ ಅಸ್ತ್ರಗಳನ್ನು ಬಳಸಿಕೊಂಡು ಪ್ರತಿ ದಾಳಿ ನಡೆಸುತ್ತೇವೆ’ ಎಂದರು.
ಪಾಕಿಸ್ತಾನದ ಉನ್ನತಾಧಿಕಾರಿಗಳು ಈ ರೀತಿ ಅಣ್ವಸ್ತ್ರದ ಬೆದರಿಕೆ ಹಾಕುವುದು ಇದೇ ಮೊದಲಲ್ಲ. ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಪ್ರತೀಕಾರದ ದಾಳಿ ನಡೆಸಬಹುದು ಎಂಬ ಭೀತಿಯಿಂದ ಪಾಕಿಸ್ತಾನದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಹಲವು ಬಾರಿ ಈಗಾಗಲೇ ಅಣ್ವಸ್ತ್ರ ದಾಳಿಯ ಬೆದರಿಕೆಯೊಡ್ಡಿದ್ದಾರೆ. ಈ ಮೂಲಕ ಭಾರತವನ್ನು ಕೆರಳಿಸುವ ಪ್ರಯತ್ನ ನಡೆಸುತ್ತಲೇ ಇದ್ದಾರೆ.
ಪಾಕ್ ಪ್ರತೀಕಾರ: ಭಾರತದ ಹಡಗುಗಳಿಗೆ ನಿರ್ಬಂಧ
ಇಸ್ಲಾಮಾಬಾದ್/ನವದೆಹಲಿ: ಭಾರತವು ಪಾಕಿಸ್ತಾನದ ಹಡಗುಗಳಿಗೆ ತನ್ನ ಬಂದರು ಪ್ರವೇಶಿಸಲು ನಿರ್ಬಂಧ ಹೇರಿದ ಬೆನ್ನಲ್ಲೇ ಇದೀಗ ಪಾಕ್ ಕೂಡ ಪ್ರತೀಕಾರದ ಕ್ರಮಕ್ಕೆ ಮುಂದಾಗಿದೆ. ಭಾರತದ ಹಡಗುಗಳಿಗೆ ತನ್ನ ಬಂದರು ಪ್ರವೇಶ ನಿಷೇಧಿಸಿ ಪಾಕಿಸ್ತಾನ ಆದೇಶ ಹೊರಡಿಸಿದೆ.‘ಪ್ರಸಕ್ತ ಸ್ಥಿತಿಯ ಹಿನ್ನೆಲೆಯಲ್ಲಿ ಭಾರತದ ಧ್ವಜ ಹೊಂದಿರುವ ಹಡಗುಗಳು ನಮ್ಮ ಬಂದರು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಅಲ್ಲದೆ, ಯಾವುದೇ ಪಾಕಿಸ್ತಾನಿ ಹಡಗುಗಳು ಭಾರತದ ಬಂದರಿನಲ್ಲಿ ಲಂಗರು ಹಾಕಕೂಡದು’ ಎಂದು ಪಾಕಿಸ್ತಾನ ಹಡಗು ಸಚಿವಾಲಯ ಹೇಳಿದೆ.
ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ಶನಿವಾರವಷ್ಟೇ ಪಾಕಿಸ್ತಾನದ ವಿರುದ್ಧ ಮತ್ತಷ್ಟು ಆರ್ಥಿಕ ನಿರ್ಬಂಧಗಳನ್ನು ಹೇರಿ ಆದೇಶ ಹೊರಡಿಸಿತ್ತು. ಪಾಕಿಸ್ತಾನದ ವಸ್ತುಗಳ ನೇರ ಮತ್ತು ಪರೋಕ್ಷ ಆಮದು, ಅಂಚೆ ಮತ್ತು ಕೊರಿಯರ್ ಸೇವೆಗೆ ನಿರ್ಬಂಧ ಹಾಗೂ ಪಾಕ್ ಹಡಗುಗಳಿಗೆ ಭಾರತದ ಬಂದರು ಪ್ರವೇಶಕ್ಕೆ ನಿರ್ಬಂಧಿಸಿ ಆದೇಶ ಹೊರಡಿಸಿತ್ತು.
ಯುದ್ಧ ನಡೆದರೆ ಇಂಗ್ಲೆಂಡ್‌ಗೆ ಹೋಗುವೆ: ಪಾಕ್ ಸಂಸದ!
ಇಸ್ಲಾಮಾಬಾದ್: ಪಹಲ್ಗಾಂ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಭೀತಿ ಸೃಷ್ಟಿಯಾಗಿರುವ ನಡುವೆಯೇ ‘ಭಾರತದೊಂದಿಗೆ ನಡುವೆ ಯುದ್ಧ ಆರಂಭವಾದರೆ ಇಂಗ್ಲೆಂಡ್‌ಗೆ ಹೋಗಿಬಿಡುವೆ’ ಎಂದು ಪಾಕಿಸ್ತಾನದ ಸಂಸದ ಶೇರ್ ಅಫ್ಜಲ್ ಖಾನ್ ಮರ್ವಾತ್ ಹೇಳಿದ್ದಾರೆ. ಇದು ಭಾರೀ ಟೀಕೆಗೆ ಕಾರಣವಾಗಿದೆ.
ಅಫ್ಜಲ್‌ಗೆ ವರದಿಗಾರರೊಬ್ಬರು ‘ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆದರೆ ಬಂದೂಕಿನೊಂದಿಗೆ ಗಡಿಗೆ ಹೋಗುತ್ತೀರಾ?’ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮರ್ವಾತ್, ‘ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಇಂಗ್ಲೆಂಡ್‌ಗೆ ಹೋಗಿಬಿಡುವೆ’ ಎಂದರು.
ಬಳಿಕ ವರದಿಗಾರರು, ‘ಭಾರತದ ಪ್ರಧಾನಿ ಯುದ್ಧದಿಂದ ಹಿಂದೆ ಸರಿಯುತ್ತಾರೆ ಎಂದು ನೀವು ಭಾವಿಸುವಿರಾ?’ ಎಂದು ಕೇಳಿದಾಗ ‘ನಾನು ಹೇಳಿದಂತೆ ಹಿಂದೆ ಸರಿಯಲು ಮೋದಿ ನನ್ನ ಚಿಕ್ಕಮ್ಮನ ಮಗನಾ?’ ಎಂದು ಮರುಪ್ರಶ್ನೆ ಹಾಕಿದರು. ಈ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಪಾಕಿಸ್ತಾನಿ ನಾಯಕರು ದೇಶದ ಸೇನೆಯನ್ನೇ ನಂಬಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.