ಇದಕ್ಕೆ ಉದ್ಯಮಿಗಳು, ಐಟಿ ತಜ್ಞರು ವೈದ್ಯರು ಆಕ್ಷೇಪ
ಹೈದರಾಬಾದ್: ಮಹಿಳೆಯರು ಬೇಗ ಮದುವೆ ಆಗಬಾರದು. ತಮ್ಮ ವೃತ್ತಿ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ನಟ ಚಿರಂಜೀವಿ ಸೊಸೆ ಹಾಗೂ ರಾಮ್ ಚರಣ್ ತೇಜ ಅವರ ಪತ್ನಿ ಉಪಾಸನಾ ಕೊನಿಡೇಲಾ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ. ಜೋಹೋ ಮೇಲ್ ಸಂಸ್ಥಾಪಕ ವೆಂಬು, ಖ್ಯಾತ ವೈದ್ಯರು ಸೇರಿ ಅನೇಕರು ಇದಕ್ಕೆ ಆಕ್ಷೇಪಿಸಿದ್ದು, ಯುವಕರು 20-3ರ ನಡುವಿನ ವಯಸ್ಸಿನಲ್ಲೇ ಮದುವೆ ಆಗಬೇಕು ಎಂದು ಕರೆ ನೀಡಿದ್ದಾರೆ.ಇತ್ತೀಚೆಗೆ ಸಮಾರಂಭವೊಂದರಲ್ಲಿ ಉಪಾಸನಾ ಮಾತನಾಡಿ, ‘ಇಲ್ಲಿನ ಎಷ್ಟು ಪುರುಷರು ಹಾಗೂ ಮಹಿಳೆಯರು ಮದುವೆ ಆಗಿದ್ದೀರಿ?’ ಎಂದು ಪ್ರಶ್ನಿಸಿದಾಗ ಬಹುತೇಕರು ಕೈ ಎತ್ತಿದರು. ಆದರೆ ಕೈ ಎತ್ತಿದ ಮಹಿಳೆಯರ ಸಂಖ್ಯೆ ಕಡಿಮೆ ಇತ್ತು. ಆಗ ಅವರು, ‘ಮಹಿಳೆಯರು ವೃತ್ತಿ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಹೀಗಾಗಿ ಬೇಗ ಮದುವೆ ಆಗಲ್ಲ’ ಎಂದರು. ಇದು ವಿವಾದಕ್ಕೀಡಾಗಿದೆ.
ಇದಕ್ಕೆ ವೆಂಬು, ಕೆಲವು ವೈದ್ಯರು ಸೇರಿ ಅನೇಕರು ಆಕ್ಷೇಪಿಸಿದ್ದು, ‘ಬೇಗ ಮದುವೆ ಆಗುವುದು ಸಾಂಸಾರಿಕ ಜೀವನಕ್ಕೆ ಅತಿ ಅವಶ್ಯ. ವೃತ್ತಿ ಮೇಲೂ ಗಮನ ಕೇಂದ್ರೀಕರಿಸಲು ಅನುಕೂಲವಾಗುತ್ತದೆ. ತಡವಾಗಿ ಮದುವೆ ಆದವರಿಗೆ ಗರ್ಭಧಾರಣೆ ಕಷ್ಟ’ ಎಂದಿದ್ದಾರೆ.==
ಜಿಯೋ ಅನಿಯಮಿತ 5ಜಿ ಬಳಕೆದಾರರಿಗೆ 18 ತಿಂಗಳ ಉಚಿತ ಜೆಮಿನಿ-3 ಸೇವೆಮುಂಬೈ: ಎಐಗೆ ಸಂಬಂಧಿಸಿದಂತೆ ಗೂಗಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಜಿಯೋ, ತನ್ನ ಅನಿಯಮಿತ 5ಜಿ ಬಳಕೆದಾರರಿಗೆ ಜೆಮಿನಿ-3(ಪ್ರೋ) ಸೇವೆಯನ್ನು ಉಚಿತವಾಗಿ ನೀಡಲು ಮುಂದಾಗಿದೆ. ಇದರಡಿಯಲ್ಲಿ, 35100 ರು. ರಿಚಾರ್ಜ್ ಮಾಡಿಸಿಕೊಳ್ಳುವ ಜಿಯೋ ಗ್ರಾಹಕರು 18 ತಿಂಗಳುಗಳ ಕಾಲ ಜೆಮಿನಿಯನ್ನು ಹೆಚ್ಚುವರಿ ಪಾವತಿಸದೆ ಬಳಸಬಹುದಾಗಿದೆ.ಮುಂಚೆ ಈ ಸೌಲಭ್ಯವನ್ನು 18ರಿಂದ 25 ವರ್ಷದ ಇಳಗಿನವರಿಗೆ ಸೀಮಿತವಾಗಿ ಇರಿಸಲಾಗಿತ್ತು. ಆದರೆ ಈಗ ವಯೋಮಿತಿಯನ್ನು ತೆಗೆದುಹಾಕಿ ಎಲ್ಲಾ ಅರ್ಹರಿಗೆ ವಿಸ್ತರಿಸಲಾಗಿದೆ. ಈ ಮೂಲಕ, ಎಐ ತಂತ್ರಜ್ಞಾನವನ್ನು ಪ್ರತಿಯೊಬ್ಬ ಭಾರತೀಯನನ್ನು ತಲುಪಿಸಲು ಜಿಯೋ ಸಜ್ಜಾಗಿದೆ. ನ.19ರಿಂದ ಜಾರಿಗೆ ಬರಲಿರುವ ಈ ಯೋಜನೆಯನ್ನು, ಮೈ ಜಿಯೋ ಆ್ಯಪ್‌ನಲ್ಲಿನ ‘ಕ್ಲೈಮ್ ನೌ’ ಆಯ್ಕೆ ಮೂಲಕ ಪಡೆಯಬಹುದು.
==20 ವರ್ಷಕ್ಕಿಂತ ಹಳೆಯ ವಾಹನ ನವೀಕರಣ ಶುಲ್ಕ ಏರಿಕೆ
ನವದೆಹಲಿ: ಹಳೆಯ ವಾಹನಗಳ ನವೀಕರಣ ಶುಲ್ಕವನ್ನು ಸರ್ಕಾರ ಹೆಚ್ಚಿಸಿದ ಕೆಲವು ತಿಂಗಳುಗಳ ನಂತರ, ಸಾರಿಗೆ ಸಚಿವಾಲಯವು 20 ವರ್ಷಕ್ಕಿಂತ ಹಳೆಯದಾದ ಮೋಟಾರು ವಾಹನಗಳನ್ನು ಇಟ್ಟುಕೊಳ್ಳುವುದನ್ನು ನಿರುತ್ಸಾಹಗೊಳಿಸಲು ಫಿಟ್‌ನೆಸ್ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿದೆ. ಅಧಿಸೂಚನೆಯ ಪ್ರಕಾರ, 20 ವರ್ಷಕ್ಕಿಂತ ಹಳೆಯದಾದ ಲಘು ಮೋಟಾರು ವಾಹನಗಳ (ಎಲ್‌ಎಂವಿ) ನವೀಕರಣ ಶುಲ್ಕವನ್ನು 10,000 ರು.ಗಳಿಂದ 15,000 ರು.ಗಳಿಗೆ ಹೆಚ್ಚಿಸಲಾಗಿದೆ.
==ಗಡೀಪಾರಾದ ಬಿಷ್ಣೋಯಿ ದಿಲ್ಲಿಗೆ ಆಗಮನ, ಬಂಧನ
ಅಮೆರಿಕದಿಂದ ಬಂದ ಕೂಡಲೇ ಗ್ಯಾಂಸ್ಟರ್ ಬಂಧನವಿದೇಶದಲ್ಲಿದ್ದುಕೊಂಡು ಭಾರತದಲ್ಲಿ ಉಗ್ರಕೃತ್ಯ ಆರೋಪ
ಅಮೆರಿಕಕ್ಕೆ ಹೋಗಲು ನಕಲಿ ಪಾಸ್‌ಪೋರ್ಟ್ ಬಸಿದ್ದ
ಪಿಟಿಐ ನವದೆಹಲಿ
ಅಮೆರಿಕದಿಂದ ಮಂಗಳವಾರ ಗಡೀಪಾರಾಗಿದ್ದ ಗ್ಯಾಂಗ್‌ಸ್ಟರ್ ಅನ್ಮೋಲ್ ಬಿಷ್ಣೋಯಿ ಬುಧವಾರ ದೆಹಲಿಗೆ ಬಂದಿಳಿದಿದ್ದಾನೆ. ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಇವನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಬಂಧಿಸಿದ್ದಾರೆ.ಈ ಮೂಲಕ, ಸೆರೆವಾಸದಲ್ಲಿರುವ ಲಾರೆನ್ಸ್ ಬಿಷ್ಣೋಯಿ ಜತೆ ಸೇರಿ ಕುಕೃತ್ಯಗಳಿಗೆ ಸಂಬಂಧಿಸಿದಂತೆ ಇದು 19ನೇ ಬಂಧನವಾಗಿದೆ. ಈತನನ್ನು ಕೋರ್ಟಿಗೆ ಹಾಜರುಪಡಿಸಿದಾಗ 11 ದಿನ ಕೋರ್ಟು, ಎನ್‌ಐಎ ಕಸ್ಟಡಿಗೆ ಒಪ್ಪಿಸಿದೆ.2022ರಿಂದ ತಲೆಮರೆಸಿಕೊಂಡಿರುವ ಈತ, ಸಿದ್ದಿಕಿ ಹತ್ಯೆ, ನಟ ಸಲ್ಮಾನ್ ಖಾನ್ ನಿವಾಸದ ಮೇಲಿನ ದಾಳಿ, ಗಾಯಕ ಸಿಧು ಮೂಸೇವಾಲ ಹತ್ಯೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದ. 2020-23ರ ಅವಧಿಯಲ್ಲಿ ಗೋಲ್ಡೀ ಬ್ರಾರ್, ಲಾರೆನ್ಸ್ ಜತೆ ಸೇರಿ ವಿದೇಶದಲ್ಲಿದ್ದುಕೊಂಡೇ ಭಾರತದಲ್ಲಿ ಉಗ್ರಚಟುವಟಿಕೆಗಳಿಗೆ ನೆರವು ನೀಡಿದ್ದಕ್ಕಾಗಿ ಎನ್‌ಐಎ 2023ರ ಮಾರ್ಚ್‌ನಲ್ಲಿ ಅನ್ಮೋಲ್ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿತ್ತು. ಈತನನ್ನು ಕಳೆದ ವರ್ಷ ನವೆಂಬರ್‌ನಲ್ಲೇ ಅಮೆರಿಕದಲ್ಲಿ ಬಂಧಿಸಲಾಗಿತ್ತು.ನಕಲಿ ಹೆಸರಲ್ಲಿ ಅಮೆರಿಕ ಪ್ರವೇಶ:ಭಾರತದಿಂದ ತಲೆಮರೆಸಿಕೊಂಡು ಅಮೆರಿಕಕ್ಕೆ ಹೋಗಿದ್ದ ಅನ್ಮೋಲ್ ಅದಕ್ಕಾಗಿ ಭಾನುಪ್ರಕಾಶ್ ಹೆಸರಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿಕೊಂಡಿದ್ದ ಎಂದು ತಿಳಿದುಬಂದಿದೆ. 2021ರಲ್ಲಿ ಮಾಡಿಸಲಾಗಿದ್ದ ಈ ಪಾಸ್‌ಪೋರ್ಟ್‌ನಲ್ಲಿ ತಂದೆ-ತಾಯಿ ಹೆಸರನ್ನು ರಾಕೇಶ್ ಮತ್ತು ಸುಮಿತ್ರಾ ದೇವಿ ಎಂದು, ವಿಳಾಸವನ್ನು ಫರೀದಾಬಾದ್ ಎಂದು ಉಲ್ಲೇಖಿಸಲಾಗಿದೆ.
==ಮತ್ತೆ 7 ನಕ್ಸಲರ ಹತ್ಯೆ, 50 ಮಂದಿ ಸೆರೆ
ಹಿದ್ಮಾ ಹತ್ಯೆ ಬೆನ್ನಲ್ಲೇ ಮುಂದುವರೆದ ಆಪರೇಷನ್ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಗುಂಡು, ನಗದು ವಶ
ಕಾರ್ಯಾಚರಣೆ ವೇಳೆ ಓರ್ವ ಪೊಲೀಸ್ ಬಲಿ
ಪಿಟಿಐ ಅಮರಾವತಿ/ರಾಜನಂದ್‌ಗಾವ್(ಛತ್ತೀಸ್‌ಗಢ)
ಭದ್ರತಾಪಡೆಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆ ಮುಂದುವರೆಸಿದ್ದು, ಛತ್ತೀಸಗಢದ ಕುಖ್ಯಾತ ನಕ್ಸಲ್ ಹಿದ್ಮಾ ಸೇರಿ 5 ಜನರ ಎನ್‌ಕೌಟರ್ ಬೆನ್ನಲ್ಲೇ 7 ಮಾವೋವಾದಿಗಳನ್ನು ಬುಧವಾರ ಆಂಧ್ರಪ್ರದೇಶದ ಮರೇದುಮಿಲ್ಲಿಯಲ್ಲಿ ಹತ್ಯೆ ಮಾಡಲಾಗಿದೆ. ಇನ್ನೊಂದೆಡೆ 50 ನಕ್ಸಲರನ್ನು ಬಂಧಿಸಲಾಗಿದೆ.ಹತ್ಯೆಯಾದವರಲ್ಲಿ, ತಾಂತ್ರಿಕ ವಿಷಯ, ಶಸ್ತ್ರಾಸ್ತ್ರ ಉತ್ಪಾದನೆ, ಸಂವಹನದಲ್ಲಿ ಪರಿಣಿತಿ ಹೊಂದಿದ್ದ ಶ್ರೀಕಾಕುಳಂ ಮೂಲದ ನಕ್ಸಲ್ ಮೆಥುರೀ ಜೋಖಾ ರಾವ್ ಕೂಡ ಇದ್ದ ಎಂದು ತಿಳಿದುಬಂದಿದೆ. ಮೃತರಲ್ಲಿ ಮಹಿಳೆಯರೂ ಇದ್ದು, ಅವರೆಲ್ಲರ ಗುರುತು ಪತ್ತೆಯಾಗುವುದು ಬಾಕಿಯಿದೆ.50 ನಕ್ಸಲ್ ಸೆರೆ:ಆಂಧ್ರಪ್ರದೇಶದ ಪೊಲೀಸರು 5 ಜಿಲ್ಲೆಗಳಲ್ಲಿ ಸಂಘಟಿತ ಗುಪ್ತಚರ ಕಾರ್ಯಾಚರಣೆ ನಡೆಸಿದ್ದು, 50 ಮಂದಿ ಮಾವೋವಾದಿಗಳನ್ನು ಬಂಧಿಸಿದ್ದಾರೆ. ಕೃಷ್ಣಾ, ಎಲೂರು, ಎನ್‌ಟಿಆರ್, ಕಾಕಿನಾಡ, ಕೊನಸೀಮಾ ಜಿಲ್ಲೆ ಹಾಗೂ ವಿಜಯವಾಡ ನಗರದಲ್ಲಿ ಊ ಕಾರ್ಯಾಚರಣೆ ನಡೆಸಲಾಯಿತು.ಈ ಬಗ್ಗೆ ಗುಪ್ತಚರ ವಿಭಾಗದ ಎಡಿಜಿಪಿ ಮಹೇಶ್‌ಚಂದ್ರ ಲಡ್ಢಾ ಮಾತನಾಡಿ, ‘ಇದು ಸದ್ಯದಲ್ಲಿ ಕೈಗೊಳ್ಳಲಾಗಿರುವ ವ್ಯಾಪಕ ಕಾರ್ಯಾಚರಣೆಯಾಗಿದೆ. ಸೆರೆ ಸಿಕ್ಕಿರುವ 50 ಮಂದಿ ಮಾವೋವಾದಿ ಸಂಘಟನೆಯಲ್ಲಿ ವಿವಿಧ ರ್‍ಯಾಂಕ್‌ಗಳಲ್ಲಿ ಇರುವವರು. ಅವರಿಂದ 39 ಶಸ್ತ್ರಾಸ್ತ್ರಗಳು, 302 ಸುತ್ತು ಮದ್ದುಗುಂಡು, ಡಿಟೋನೇಟರ್, ಕಾರ್ಟೆಕ್ಸ್ ವೈರ್, ಸಂವಹನ ಸಾಧನ ಹಾಗೂ 13 ಲಕ್ಷ ರು. ನಗದನ್ನು ವಶಪಡಿಸಿಕೊಳ್ಳಲಾಯಿತು’ ಎಂದರು.ಪೊಲೀಸ್ ಸಾವು:ಛತ್ತೀಸ್‌ಗಢ-ಮಧ್ಯಪ್ರದೇಶ ಗಡಿ ಭಾಗದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ, ಛತ್ತೀಸ್‌ಗಢದ ಪೊಲೀಸ್ ಒಬ್ಬರು ಮಾವೋವಾದಿಗಳ ಗುಂಡಿಗೆ ಬಲಿಯಾಗಿದ್ದಾರೆ. ಗಾಯಗೊಂಡಿದ್ದ ಇವರನ್ನು ಏರ್‌ಲಿಫ್ಟ್ ಮಾಡಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಅಸುನೀಗಿದ್ದಾರೆ. ಈ ಭಾಗದಲ್ಲಿ ನಕ್ಸಲ್ ಇರುವಿಕೆ ಬಗ್ಗೆ ಲಭಿಸಿದ್ದ ಗುಪ್ತಚರ ಮಾಹಿತಿ ಆಧಾರದಲ್ಲಿ ಆಪರೇಷನ್ ಕೈಗೊಳ್ಳಲಾಗಿತ್ತು.