ಎಲಾನ್‌ ಮಸ್ಕ್‌ ಒಡೆತನದ ‘ಎಕ್ಸ್‌’ನ ಪ್ರೀಮಿಯಂ + ಸಬ್‌ಸ್ಕ್ರಿಪ್ಷನ್‌ ದರ 40% ಹೆಚ್ಚಳ : ಮಾಸಿಕ ₹1800

KannadaprabhaNewsNetwork | Updated : Dec 26 2024, 04:44 AM IST

ಸಾರಾಂಶ

ಜಗತ್ತಿನ ನಂ.1 ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ಎಕ್ಸ್‌ ಸಾಮಾಜಿಕ ಜಾಲತಾಣದ ಪ್ರೀಮಿಯಂ ಚಂದಾದಾರಿಕೆಯ ದರವನ್ನು ಶೇ.40ರಷ್ಟು ಹೆಚ್ಚಿಸಲಾಗಿದ್ದು, ಮಾಸಿಕ 22$(1878.63 ರು.) ನಿಗದಿಪಡಿಸಲಾಗಿದೆ.

ವಾಷಿಂಗ್ಟನ್‌: ಜಗತ್ತಿನ ನಂ.1 ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ಎಕ್ಸ್‌ ಸಾಮಾಜಿಕ ಜಾಲತಾಣದ ಪ್ರೀಮಿಯಂ+ ಚಂದಾದಾರಿಕೆಯ ದರವನ್ನು ಶೇ.40ರಷ್ಟು ಹೆಚ್ಚಿಸಲಾಗಿದ್ದು, ಮಾಸಿಕ 22$(1878.63 ರು.) ನಿಗದಿಪಡಿಸಲಾಗಿದೆ. ಈ ಮೊದಲು ಇದು 16$(1366.27 ರು.) ಇತ್ತು. ಅಂತೆಯೇ, ವಾರ್ಷಿಕ ಪ್ರೀಮಿಯಂ+ ಚಂದಾದಾರಿಕೆಯನ್ನು $168(14345.87 ರು.) ನಿಂದ $229(19554.78 ರು.)ಗೆ ಹೆಚ್ಚಿಸಲಾಗಿದೆ. ಕೆನಡಾ, ಆಸ್ಟ್ರೇಲಿಯಾ, ನೈಜೀರಿಯಾ ದೇಶಗಳಲ್ಲಿ ಇದು ಇನ್ನೂ ಹೆಚ್ಚಿದೆ. ಡಿ.21ರ ಬಳಿಕ ಚಂದಾದಾರರಾಗುವವರಿಗೆ ಹೊಸ ದರವು ಅನ್ವಯಿಸಲಿದೆ. ಪ್ರಸ್ತುತ ಇರುವ ಪ್ರೀಮಿಯಂ ಚಂದಾದಾರರಿಗೆ ಇದು ಜ.20ರಿಂದ ಅನ್ವಯಿಸಲಿದೆ.

ಮಣಿಪುರದಲ್ಲಿ ಮತ್ತೆ ಹಿಂಸೆ: ಎರಡು ಗುಂಪುಗಳ ನಡುವೆ ಗುಂಡಿನ ಕಾಳಗ: ಸಾವಿಲ್ಲ

ಇಂಫಾಲ್‌: ಕೆಲ ದಿನಗಳಿಂದ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು, ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ.ಮಂಗಳವಾರ ರಾತ್ರಿ ಪೂರ್ವ ಇಂಫಾಲ್‌ನ ಉಯೊಕ್‌ ಚಿಂಗ್‌ ಪ್ರದೇಶದ ತಮ್ನಾಪೋಕ್ಪಿಯಲ್ಲಿ ಉದ್ರಿಕ್ತರ ಗುಂಪು ಭದ್ರತಾ ಪಡೆಗಳ ಮೇಲೆ ಗುಂಡಿನ ಮಳೆಗರೆದಿದೆ. ಇದಕ್ಕೆ ಪ್ರತಿಯಾಗಿ ಪಡೆಗಳು ಸಹ ಪ್ರತಿದಾಳಿ ನಡೆಸಿದೆ. ಬುಧವಾರ ಕಾಂಗ್ಪೋಕ್ಪಿ ಜಿಲ್ಲೆಯ ಸಿನಂ ಕೋಮ್‌ ಪ್ರದೇಶದಲ್ಲಿ ಗುಂಪೊಂದು ಬೆಟ್ಟದ ಮೇಲಿನಿಂದ ಬೆಟ್ಟದ ಕೆಳಗಿದ್ದ ಗ್ರಾಮ ಕಾವಲುಗಾರರ ಮೇಲೆ ಗುಂಡು ಹಾರಿಸಿದೆ. ಇದಕ್ಕೆ ಪ್ರತಿಯಾಗಿ ಕಾವಲುಗಾರರು ಸಹ ಪ್ರತಿದಾಳಿ ನಡೆಸಿದ್ದು, ಈ ಎರಡೂ ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಿಸ್ಮಸ್‌ ದಿನ ಉಕ್ರೇನ್‌ ಮೇಲೆ 70 ಕ್ಷಿಪಣಿ, 100 ಡ್ರೋನ್‌ನಿಂದ ರಷ್ಯಾ ದಾಳಿ

ಕೀವ್‌: ಕ್ರಿಸ್ಮಸ್‌ ಹಬ್ಬವಾದ ಬುಧವಾರದಂದು ಉಕ್ರೇನ್‌ನ ಶಕ್ತಿ ಮೂಲಸೌಕರ್ಯಗಳನ್ನು ಗುರಿಯಾಗಿಸಿ ರಷ್ಯಾ 70 ಕ್ಷಿಪಣಿ ಹಾಗೂ 100 ಡ್ರೋನ್‌ ಬಳಸಿ ದಾಳಿ ಮಾಡಿದೆ. ಇದರಿಂದ ಉಷ್ಣ ವಿದ್ಯುತ್ ಸ್ಥಾವರಕ್ಕೆ ಹಾನಿಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ, ‘ಕ್ರಿಸ್ಮಸ್‌ ದಿನದಂದೇ ಈ ದಾಳಿ ನಡೆಸಲು ಪುಟಿನ್‌ ತೀರ್ಮಾನಿಸಿದರು. ಇದಕ್ಕಿಂತ ಅಮಾನವೀಯವಾದುದು ಇನ್ನೇನಿದೆ?’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಸುಮಾರು 50 ಮಿಸೈಲ್‌ ಹಾಗೂ ಕೆಲ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದ್ದಾರೆ. ಈ ದಾಳಿಯಲ್ಲಿ 3 ಜನ ಸಾವನ್ನಪ್ಪಿದ್ದು, ಉಳಿದವರು ಮೆಟ್ರೋ ನಿಲ್ದಾಣಗಳಲ್ಲಿ ಆಶ್ರಯ ಪಡೆದರು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಸಂಸತ್‌ ಎದುರು ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ ಯತ್ನ: ರಕ್ಷಣೆ

ನವದೆಹಲಿ: ದೆಹಲಿಯ ಹೊಸ ಸಂಸತ್‌ ಭವನದ ಎದುರು ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಅದೃಷ್ಟವಶಾತ್‌ ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯದಿಂದಾಗಿ ವ್ಯಕ್ತಿಯನ್ನು ರಕ್ಷಿಸಿ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ 3.35ರ ಸುಮಾರಿಗೆ ರೈಲ್ ಭವನ ಸಮೀಪ ಸಂಸತ್‌ ಭವನದ ಎದುರು ಘಟನೆ ನಡೆದಿದೆ. ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಪಡೆದು, ಸಂಸತ್‌ ಎದುರು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಮೈಸೂರು ಮೂಲದ ವ್ಯಕ್ತಿ ಸಂಸತ್ ಒಳಗೆ ಹೊಗೆ ಬಾಂಬ್‌ ಸಿಡಿಸಿದ್ದ.

ಬಿಡಾಡಿ ದನಗಳ ರಕ್ಷಣೆಗೆ ರಾಷ್ಟ್ರೀಯ ಹೆದ್ದಾರಿ ಬದಿ ಶೆಡ್‌ ನಿರ್ಮಾಣ: ಕೇಂದ್ರ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಸುಗಳಿಂದ ಆಗುವ ಅಪಘಾತವನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಪ್ರಾಯೋಗಿಕವಾಗಿ ಹೆದ್ದಾರಿಗಳ ಬದಿಯಲ್ಲಿ ಹಸುಗಳಿಗಾಗಿ ಶೆಡ್‌ ನಿರ್ಮಿಸಲು ಮುಂದಾಗಿದೆ. ಈ ಶೆಡ್‌ಗಳನ್ನು ಹೆದ್ದಾರಿ ಗುತ್ತಿಗೆದಾರರು ನಿರ್ವಹಿಸಲಿದ್ದು, ಅವು 0.2- 2.3 ಹೆಕ್ಟೇರ್‌ವರೆಗೆ ಇರಲಿದೆ. ಹಸುವಿಗೆ ಬೇಕಾದ ಮೇವು, ನೀರು, ಔಷಧ, ಆಸರೆಯನ್ನು ಅದರಲ್ಲಿ ಒದಗಿಸಲಾಗುವುದು. ಜೊತೆಗೆ ಹೆದ್ದಾರಿ ಗುತ್ತಿಗೆ ಕಂಪನಿಯು ತನ್ನ ಸಿಎಸ್‌ಆರ್‌ ನಿಧಿನಿಂದ ಪ್ರತಿ 50 ಕಿಲೋಮೀಟರ್‌ಗೆ ಒಂದರಂತೆ ಪಶು ತುರ್ತು ಚಿಕಿತ್ಸಾಕೇಂದ್ರ/ ಆಸ್ಪತ್ರೆ ತೆರೆಯಲಿದೆ. ಜೊತೆಗೆ ಆ್ಯಂಬುಲೆನ್ಸ್‌ಗಳನ್ನು ಸಹ ನಿರ್ವಹಿಸಲಿದೆ. ಇದೆಲ್ಲವೂ ಯಶಸ್ವಿಯಾದರೆ ದೇಶಾದ್ಯಂತ ಜಾರಿ ಮಾಡಲಾಗುವುದು.

Share this article