ಬಿವೈವಿ ವಿರುದ್ಧ ಅಮಿತ್‌ ಶಾಗೆ ಯತ್ನಾಳ್‌ ಟೀಮ್‌ ಪ್ರತಿದೂರು ದೂರು - ಪಕ್ಷದ ನಿರ್ಧಾರದ ವೇಳೆ ಏಕಪಕ್ಷೀಯ ವರ್ತನೆ

Published : Jan 08, 2025, 07:35 AM IST
BY Vijayendra

ಸಾರಾಂಶ

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಪಕ್ಷದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ.

   ಬೆಂಗಳೂರು : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಪಕ್ಷದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ.

ಮಂಗಳವಾರ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಯತ್ನಾಳ ಬಣದ ಮುಖಂಡರು ವಕ್ಫ್ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಬಳಿಕ ವಿಜಯೇಂದ್ರ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.

ಆದರೆ, ಕುತೂಹಲದ ಸಂಗತಿ ಎಂದರೆ ಯತ್ನಾಳ ಅವರೇ ಈ ಭೇಟಿ ವೇಳೆ ಉಪಸ್ಥಿತರಿರಲಿಲ್ಲ. ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ ಮತ್ತಿತರರು ಇದ್ದರು ಎನ್ನಲಾಗಿದೆ.

ವಿಜಯೇಂದ್ರ ಅವರು ಪಕ್ಷದಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿಲ್ಲ. ತಮ್ಮ ಆಪ್ತರನ್ನು, ಬೆಂಬಲಿಗರನ್ನು ಮಾತ್ರ ಜತೆಗೆ ಕರೆದೊಯ್ಯುತ್ತಾರೆ. ಪಕ್ಷದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಎಲ್ಲ ನಾಯಕರೊಂದಿಗೆ ಚರ್ಚೆ ನಡೆಸುವುದಿಲ್ಲ. ಇದು ಪಕ್ಷದ ಸಂಘಟನೆ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಜತೆಗೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಸರ್ಕಾರದ ವೈಫಲ್ಯಗಳ ವಿರುದ್ಧದ ಹೋರಾಟ ತಾರ್ಕಿಕ ಅಂತ್ಯಕ್ಕೆ ತಲುಪುತ್ತಿಲ್ಲ. ಕೇವಲ ಮಾಧ್ಯಮಗಳ ಹೇಳಿಕೆ, ಪ್ರಸಾರಕ್ಕೆ ಮಾತ್ರ ಸೀಮಿತವಾಗುತ್ತಿದೆ ಎಂದು ಯತ್ನಾಳ ಬಣದ ಮುಖಂಡರು ಅಮಿತ್ ಶಾ ಎದುರು ದೂರಿನ ಸುರಿಮಳೆಗೈದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಕ್ಫ್ ಹೋರಾಟಕ್ಕೆ ಸಚಿವ ಶಾ ಮೆಚ್ಚುಗೆ

ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಯತ್ನಾಳ ಬಣದ ಹೋರಾಟಕ್ಕೆ ಬಿಜೆಪಿಯ ಪ್ರಭಾವಿ ರಾಷ್ಟ್ರೀಯ ನಾಯಕರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೆಚ್ಚುಗೆ ಸೂಚಿಸಿದ್ದಾರೆ ಎನ್ನಲಾಗಿದೆ. ತಾವು ನಡೆಸಿದ ವಕ್ಖ್ ಹೋರಾಟ ಕುರಿತ ಎಲ್ಲ ಮಾಹಿತಿಯನ್ನು ನೀಡಿದ ಯತ್ನಾಣ ಬಣದ ಮುಖಂಡರು ಅದಕ್ಕೆ ಸಂಬಂಧಿಸಿದಂತೆ ಡಿಜಿಟಲ್ ದಾಖಲೆಯನ್ನೂ ನೀಡಿದರು. ಇದನ್ನು ಪರಿಶೀಲಿಸಿದ ಅಮಿತ್ ಶಾ ಅವರು ಈ ಹೋರಾಟವನ್ನು ತಾಲೂಕು ಮಟ್ಟದಲ್ಲೂ ಮುಂದುವರೆಸುವಂತೆ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ