ನವದೆಹಲಿ: ರಷ್ಯಾದಿಂದ ತೈಲ ಖರೀದಿ ವಿರೋಧಿಸುತ್ತಿರುವ ಅಮೆರಿಕ ಮತ್ತು ಯುರೋಪಿಯನ್ ದೇಶಗಳ ದ್ವಂದ ನಿಲುವನ್ನು ವಿದೇಶಾಂಗ ಸಚಿವ ಜೈಶಂಕರ್ ಕಟುವಾಗಿ ಟೀಕಿಸಿದ್ದಾರೆ. ‘ಭಾರತದಿಂದ ಸಂಸ್ಕರಿಸಿದ ತೈಲವನ್ನು ಖರೀದಿಸಲು ಯಾರೂ ನಿಮ್ಮನ್ನು (ಯುರೋಪ್ ರಾಷ್ಟ್ರಗಳನ್ನು) ಒತ್ತಾಯಿಸಿಲ್ಲ. ನಿಮಗೆ ಇಷ್ಟ ಇಲ್ಲದಿದ್ದರೆ ಖರೀದಿಸಬೇಡಿ. ಒಂದು ಕಡೆ ವ್ಯಾಪಾರವನ್ನು ಉತ್ತೇಜಿಸುವ ಅಮೆರಿಕನ್ನರು, ಮತ್ತೊಂದೆಡೆ ವ್ಯಾಪಾರ ಮಾಡುವವರನ್ನು ತಡೆಯುವುದು ತಮಾಷೆಯೆನಿಸುತ್ತದೆ’ ಎಂದು ‘ಎಕನಾಮಿಕ್ ಟೈಮ್ಸ್’ ವಿಶ್ವ ನಾಯಕರ ವೇದಿಕೆಯಲ್ಲಿ ಹೇಳಿದ್ದಾರೆ.
ನಿರ್ಬಂಧದ ಹಿನ್ನೆಲೆಯಲ್ಲಿ ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿ ಮಾಡಲಾಗದ ಯುರೋಪಿಯನ್ ದೇಶಗಳು, ಅದೇ ತೈಲವನ್ನು ಭಾರತದ ಮೂಲಕ ಮರುಖರೀದಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಜೈಶಂಕರ್ ಭಾರತವನ್ನು ಟೀಕಿಸುತ್ತಿರುವ ಯುರೋಪ್ ಮತ್ತು ಅಮೆರಿಕಕ್ಕೆ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ‘ವ್ಯಾಪಾರ, ರೈತರ ಹಿತಾಸಕ್ತಿ, ವ್ಯೂಹಾತ್ಮಕ ಸ್ವಾಯತ್ತತೆ, ಮಧ್ಯಸ್ಥಿಕೆಗೆ ವಿರೋಧದಂತಹ ವಿಷಯಗಳಲ್ಲಿ ನಮ್ಮ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಇದರೊಂದಿಗೆ ನಿಮ್ಮ ಸಹಮತಿ ಇಲ್ಲದಿದ್ದರೆ ಭಾರತೀಯರಿಗೆ ಹೇಳಿ. ನಮ್ಮ ನಿಲುವಿಗೆ ತಕ್ಕಂತೆ ನಡೆಯಲು ಅವಶ್ಯಕವಾಗಿದ್ದನ್ನು ಮಾಡುವೆವು’ ಎಂದು ಜೈಶಂಕರ್ ಹೇಳಿದ್ದಾರೆ.
ಟ್ರಂಪ್‌ಗೆ ವ್ಯಂಗ್ಯ:
ಇದೇ ವೇಳೆ ಬಾಯಿಗೆ ಬಂದ ಹೇಳಿಕೆ ಕೊಡುತ್ತಾ, ಮನಸೋ ಇಚ್ಛೆ ತೆರಿಗೆ ವಿಧಿಸುತ್ತಿರುವ ಅಮೆರಿಕದ ಅಧ್ಯಕ್ಷ ಟ್ರಂಪ್‌ರ ವಿಧಾನವನ್ನು ಟೀಕಿಸಿರುವ ಜೈಶಂಕರ್, ‘ಪ್ರಸ್ತುತ ಇರುವ ಅಧ್ಯಕ್ಷರಂತೆ ವಿದೇಶಾಂಗ ನೀತಿಯನ್ನು ಬಹಿರಂಗವಾಗಿ ನಿರ್ವಹಿಸುವ ಅಮೆರಿಕದ ಯಾವುದೇ ಅಧ್ಯಕ್ಷರನ್ನು ಜಗತ್ತು ಈವರೆಗೆ ಕಂಡಿರಲಿಲ್ಲ. ಟ್ರಂಪ್‌ರ ರೀತಿಯು ಅಂತಾರಾಷ್ಟ್ರೀಯ ಸಂಬಂಧಗಳನ್ನು ನಿಭಾಯಿಸುವ ರೀತಿಯಿಂದ ಭಿನ್ನವಾಗಿದೆ’ ಎಂದು ಹೇಳಿದ್ದಾರೆ. ಈ ಮೂಲಕ, ಗೌಪ್ಯವಾಗಿ ಅಥವಾ 2 ದೇಶಗಳ ನಡುವಿನ ರಹಸ್ಯ ಸಭೆಗಳಲ್ಲಿ ಚರ್ಚೆಯಾಗಬೇಕಿದ್ದ ವಿಷಯಗಳನ್ನು ಜಗತ್ತಿನೆದುರು ಘೋಷಿಸುತ್ತಿರುವ ಟ್ರಂಪ್ ನಡೆಯನ್ನು ಟೀಕಿಸಿದ್ದಾರೆ.