ನಿಮಗೂ ಸಮಯ ಬರುತ್ತೆ : ನೌಕಾಪಡೆ ಮುಖ್ಯಸ್ಥಗೆ ಮೋದಿ

KannadaprabhaNewsNetwork |  
Published : Aug 11, 2025, 12:30 AM ISTUpdated : Aug 11, 2025, 05:27 AM IST
ಭರವಸೆ | Kannada Prabha

ಸಾರಾಂಶ

  ಮೇ 10ರಂದು ಕದನವಿರಾಮ ಘೋಷಣೆ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ‘ನಿಮಗೂ ಸಮಯ ಬರುತ್ತೆ’ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರಿಗೆ ಹೇಳಿದ್ದರು ಎಂಬ ಕುತೂಹಲಕರ ಸಂಗತಿ ಬಯಲಾಗಿದೆ.

ನವದೆಹಲಿ: ಆಪರೇಷನ್‌ ಸಿಂದೂರದ ವೇಳೆ ಪಾಕ್ ಮೇಲೆ ಭಾರತದ ವಾಯುಪಡೆ ಹಾಗೂ ಸೇನೆ ದಾಳಿ ಮಾಡಿದ್ದವು. ನೌಕಾಪಡೆ ತಟಸ್ಥವಾಗಿತ್ತು. ಈ ಬಗ್ಗೆ ಮೇ 10ರಂದು ಕದನವಿರಾಮ ಘೋಷಣೆ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ‘ನಿಮಗೂ ಸಮಯ ಬರುತ್ತೆ’ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರಿಗೆ ಹೇಳಿದ್ದರು ಎಂಬ ಕುತೂಹಲಕರ ಸಂಗತಿ ಬಯಲಾಗಿದೆ.

‘ಸಿಂದೂರದ ಬಳಿಕ ಮೋದಿ ಅವರು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು. ನಂತರ ಅವರು ಅಡ್ಮಿರಲ್‌ ತ್ರಿಪಾಠಿಯತ್ತ ತಿರುಗಿ ‘ನಿಮ್ಮ ಸರದಿಯೂ ಬರಲಿದೆ’ ಎಂದರು’ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ನಾವು ಅಣಸ್ತ್ರ ದಾಳಿ ಮಾಡಿದ್ರೆ ಅರ್ಧ ಪ್ರಪಂಚ ನಾಶ: ಆಸೀಂ

ವಾಷಿಂಗ್ಟನ್: ಭಾರತದ ಆಪರೇಷನ್‌ ಸಿಂದೂರದ ಬಳಿಕ 2 ತಿಂಗಳಲ್ಲಿ 2ನೇ ಬಾರಿ ಅಮೆರಿಕಕ್ಕೆ ಹೋಗಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್‌, ಅಲ್ಲಿಂದಲೇ ಅಣು ದಾಳಿಯ ಬೆದರಿಕೆ ಹಾಕಿದ್ದಾರೆ.ಸಮಾರಂಭವೊಂದರಲ್ಲಿ ಅವರು ಮಾತನಾಡಿ, ‘ನಾವು ಪರಮಾಣು ರಾಷ್ಟ್ರ, ನಾವು ಪತನಗೊಳ್ಳುವ ಸ್ಥಿತಿ ಬಂದರೆ, ನಮ್ಮೊಂದಿಗೆ ಅರ್ಧದಷ್ಟು ಪ್ರಪಂಚವನ್ನೂ ನಾಶಪಡಿಸುತ್ತೇವೆ’ ಎಂದಿದ್ದಾರೆ,

ಪಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತ ಸಿಂಧು ಒಪ್ಪಂದವನ್ನು ಸ್ಥಗಿತಗೊಳಿಸಿರುವುದನ್ನು ಸ್ಮರಿಸಿದ ಮುನೀರ್‌, ‘ಭಾರತ ಅಲ್ಲಿ ಅಣೆಕಟ್ಟು ನಿರ್ಮಾಣ ಮಾಡುವ ತನಕ ಕಾಯುತ್ತೇವೆ. ಅದು ಪೂರ್ಣಗೊಳ್ಳುತ್ತಿದ್ದಂತೆ 10 ಕ್ಷಿಪಣಿ ಬಳಸಿ ಉಡಾಯಿಸುತ್ತೇವೆ’ ಎಂದಿದ್ದಾರೆ.ಇದೇ ವೇಳೆ, ಅಮೆರಿಕದ ವಿವಿಧ ಸೇನಾ ಮುಖ್ಯಸ್ಥರನ್ನು ಅವರು ಭೇಟಿಯಾಗಿದ್ದಾರೆ.

ಆಪರೇಷನ್ ಸಿಂದೂರ ಚೆಸ್‌ ಆಡಿದಂತಿತ್ತು: ಜ. ದ್ವಿವೇದಿ 

  ಚೆನ್ನೈ :   ‘ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂದೂರ ಚೆಸ್‌ ಆಟ ಆಡಿದಂತಿತ್ತು. ಎದುರಾಳಿಯ ಮುಂದಿನ ಹೆಜ್ಜೆ ಯಾವುದು ಎಂಬುದು ನಮಗೆ ತಿಳಿಯುತ್ತಿರಲಿಲ್ಲ. ನಾವು ಮುಂದೆ ಏನು ಮಾಡಲಿದ್ದೇವೆ ಎಂಬುದೂ ತಿಳಿಯುತ್ತಿರಲಿಲ್ಲ’ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜ. ಉಪೇಂದ್ರ ದ್ವಿವೇದಿ ಹೇಳಿದ್ದಾರೆ.ಐಐಟಿ ಮದ್ರಾಸ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಆ.4ರಂದು ಮಾತನಾಡಿದ ಅವರು, ವೈರಿರಾಷ್ಟ್ರ ಪಾಕಿಸ್ತಾನದ ವಿರುದ್ಧ ನಡೆದ ಆಪರೇಷನ್ ಸಿಂದೂರವನ್ನು ಚೆಸ್‌ ಆಟಕ್ಕೆ ಹೋಲಿಸಿದರು.

‘ಕಾರ್ಯಾಚರಣೆ ವೇಳೆ ನಾವು ಆಡಿದ್ದು ಚೆಸ್‌ ಆಟವಷ್ಟೆ. ಏನು ಇದರರ್ಥ? ಅಂದರೆ, ಎದುರಾಳಿ ಮುಂದೆ ಯಾವ ನಡೆ ತೆಗೆದುಕೊಳ್ಳಲಿದ್ದಾನೆ? ನಾವು ಏನು ಮಾಡಲಿದ್ದೇವೆ? ಯಾವುದೂ ಗೊತ್ತಿರಲಿಲ್ಲ. ಇದನ್ನು ನಾವು ಬೂದು ವಲಯ (ಗ್ರೇ ಝೋನ್) ಎಂದು ಕರೆಯುತ್ತೇವೆ. ಸಾಂಪ್ರದಾಯಿಕ ಕಾರ್ಯಾಚರಣೆಗಳಿಗೆ ಹೋಗದೆ, ಯುದ್ಧಕ್ಕೆ ಬೇಕಾದ ಎಲ್ಲ ತಂತ್ರಗಳನ್ನು ಬಳಸುವುದನ್ನೂ ಬೂದು ವಲಯ ಎನ್ನುತ್ತೇವೆ. ಇದು ಬೂದು ವಲಯ ಎಂಬುದನ್ನು ಆಪರೇಷನ್ ಸಿಂದೂರ ನಮಗೆ ತೋರಿಸಿಕೊಟ್ಟಿತು’ ಎಂದರು.

ಇದಲ್ಲದೆ, ’ಇದು ಟೆಸ್ಟ್‌ ಕ್ರಿಕೆಟ್ ಪಂದ್ಯದಂತೆ ಇತ್ತು. ಆದರೆ ಪಂದ್ಯವು ನಾಲ್ಕನೇ ದಿನದಲ್ಲಿ ನಿಂತುಹೋಯಿತು, ಅದು 14 ದಿನಗಳು, 140 ದಿನಗಳು, 1400 ದಿನಗಳು ಸಹ ಹೋಗಬಹುದಿತ್ತು, ನಮಗೆ ಯಾವುದೇ ಸುಳಿವಿರಲಿಲ್ಲ. ಎಲ್ಲದಕ್ಕೂ ನಾವು ಸಿದ್ಧರಾಗಿರಬೇಕು’ ಎಂದರು.

PREV
Read more Articles on

Recommended Stories

ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! : ಯುಎಸ್ ಆರ್ಥಿಕ ತಜ್ಞ ಪ್ರೊ. ಜೆಫ್ರಿ ಸ್ಯಾಕ್ಸ್‌
ಪಾಕ್‌ನ ಭಾರತ ದೂತರಿಗೆಪತ್ರಿಕೆ, ಗ್ಯಾಸ್‌, ನೀರು ಕಟ್‌ - ಮತ್ತೆ ರಾಜತಾಂತ್ರಿಕ ಸಮರ