ವರೂರು ಪ್ರವಾಸೋದ್ಯಮ ಅಭಿವೃದ್ಧಿಗೆ ₹ 2 ಕೋಟಿ ಅನುದಾನ: ಸಚಿವ ಎಚ್‌.ಕೆ. ಪಾಟೀಲ

KannadaprabhaNewsNetwork | Published : Jan 23, 2025 12:48 AM

ಸಾರಾಂಶ

ಕರ್ನಾಟಕದಲ್ಲಿ ನೂರಾರು ವರ್ಷಗಳ ಹಿಂದೆ ಹೊಯ್ಸಳ, ಚಾಲುಕ್ಯ, ರಾಷ್ಟ್ರಕೂಟ ಅರಸುಗಳ ಕಾಲದಲ್ಲಿ ನಿರ್ಮಾಣಗೊಂಡ 4 ಸಾವಿರ ಜೈನ ಬಸದಿ, ಮಂದಿರಗಳಿವೆ. ಹಲವು ಅತ್ಯಂತ ಶೋಚನೀಯ ಸ್ಥಿತಿಯಲ್ಲಿವೆ.

ಹುಬ್ಬಳ್ಳಿ:

ಇಡೀ ಭಾರತದಲ್ಲಿಯೇ ಮಹತ್ವದ ಧಾರ್ಮಿಕ ಯಾತ್ರಾ ಸ್ಥಳವಾಗಿ ಪ್ರಸಿದ್ಧಿಯಾಗಿರುವ ವರೂರಿನ ನವಗ್ರಹ ತೀರ್ಥಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿಗೆ ₹ 2 ಕೋಟಿ ಅನುದಾನ ಮಂಜೂರು ಮಾಡುವುದಾಗಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ತಾಲೂಕಿನ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ನಿರ್ಮಿಸಿರುವ ಸುಮೇರು ಪರ್ವತದ ಪಂಚಲೋಹ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ವರ್ಷ ಮತ್ತು ಮುಂದಿನ ವರ್ಷದ ಸಾಲಿನ ತಲಾ ₹ 1 ಕೋಟಿ ಸೇರಿ ಒಟ್ಟು ₹ 2 ಕೋಟಿ ಕ್ಷೇತ್ರಾಭಿವೃದ್ಧಿಗೆ ಬಿಡುಗಡೆ ಮಾಡಲಾಗುವುದು ಎಂದರು.

ಕರ್ನಾಟಕದಲ್ಲಿ ನೂರಾರು ವರ್ಷಗಳ ಹಿಂದೆ ಹೊಯ್ಸಳ, ಚಾಲುಕ್ಯ, ರಾಷ್ಟ್ರಕೂಟ ಅರಸುಗಳ ಕಾಲದಲ್ಲಿ ನಿರ್ಮಾಣಗೊಂಡ 4 ಸಾವಿರ ಜೈನ ಬಸದಿ, ಮಂದಿರಗಳಿವೆ. ಹಲವು ಅತ್ಯಂತ ಶೋಚನೀಯ ಸ್ಥಿತಿಯಲ್ಲಿವೆ. ನಮ್ಮ ವಿನಂತಿ ಮೇರೆಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಲಕ್ಕುಂಡಿಯ 8 ಜೈನ ಬಸದಿಗಳನ್ನು ಪುನರ್‌ ನಿರ್ಮಿಸಿದ್ದಾರೆ. ಇನ್ನೂ ಉಳಿದಿರುವ ಇತರೆ ಬಸದಿ, ವಿಹಾರಗಳನ್ನು ಪುನರ್‌ ನಿರ್ಮಾಣ ಮಾಡಲು ಇಲ್ಲಿ ಉಪಸ್ಥಿತರಿರುವ ಜೈನ ಆಚಾರ್ಯರು ಮತ್ತು ಜೈನ ಸಮಾಜದ ದಾನಿಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಗಾಂಧೀಜಿ ಮೊದಲು ಬರೀ ಮೋಹನದಾಸರಾಗಿದ್ದರು. ಜೈನಗುರು ರಾಜಚಂದ್ರರ ಉಪದೇಶಗಳಿಂದ ಪ್ರೇರಣೆ ಪಡೆದು ತಮ್ಮ ಉಪವಾಸ, ಹೋರಾಟಗಳಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಂತರ ಮಹಾತ್ಮ ಎನಿಸಿದರು. ಜೈನರ ವ್ರತ, ತಪಸ್ಸು ಮತ್ತು ಜೀವನ ಶೈಲಿಗಳನ್ನು ಉಳಿದವರೂ ನೋಡಿ ಕಲಿಯುವುದು ಬಹಳಷ್ಟಿದೆ ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಆರ್‌ಎಸ್‌ಎಸ್‌ನ ರಾಷ್ಟ್ರ ಸಂಚಾಲಕ ಮಂಗೇಶ ಭೇಂಡೆ ಮಾತನಾಡಿ, ಭಾರತವು ಶಕ್ತಿಯುತವಾಗಬೇಕು. ಆಗಲೇ ಜಗತ್ತು ಅದರ ಮಾತು ಕೇಳುವುದು. ದುರ್ಬಲ ರಾಷ್ಟ್ರಕ್ಕೆ ಪ್ರಪಂಚದಲ್ಲಿ ಬೆಲೆಯಿಲ್ಲ ಎಂದರು.

ಮಾಜಿ ಸಚಿವ ವೀರಕುಮಾರ ಪಾಟೀಲ, ಸುರೇಂದ್ರ ಹೆಗ್ಗಡೆ, ನಾವಳ್ಳಿ, ರಾಜೇಂದ್ರ ಬೀಳಗಿ, ಸುಭಾಸಸಿಂಗ್ ಜಮಾದಾರ, ತೋಟಪ್ಪ ನಿಡಗುಂದಿ, ವಿದ್ಯಾಧರ ಪಾಟೀಲ, ಬ್ರಹ್ಮಕುಮಾರ ಬೀಳಗಿ, ಅಶೋಕ ಬಾಗಮಾರ, ಮನೋಜ ಬಾಫಣಾ, ಉತ್ತಮ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

Share this article