ಶಿವಾನಂದ ಗೊಂಬಿ
ಹುಬ್ಬಳ್ಳಿ:ಬೆಣ್ಣಿಹಳ್ಳದ ಪ್ರವಾಹ ತಡೆಯಲು ಹಾಗೂ ಬರಪೀಡಿತ ಎಂಬ ಹಣೆಪಟ್ಟಿ ಕಳಚಲು ಕುಂದಗೋಳ ಹಾಗೂ ನವಲಗುಂದ ತಾಲೂಕಿನ 25 ಕೆರೆಗಳನ್ನು ಭರ್ತಿ ಮಾಡುವ ಯೋಜನೆ ಸಿದ್ಧಗೊಂಡಿದೆ. ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಗುವುದು ಬಾಕಿಯಿದ್ದು, ಈ ಬೇಸಿಗೆಯೊಳಗೆ ಕಾಮಗಾರಿ ಪ್ರಾರಂಭವಾಗುವ ನಿರೀಕ್ಷೆ ಇದೆ.
ಬೇಸಿಗೆಯಲ್ಲಿ ಆಟದ ಮೈದಾನದಂತಾಗುವ ಬೆಣ್ಣಿಹಳ್ಳ-ತುಪರಿಹಳ್ಳಗಳು ಮಳೆಗಾಲದಲ್ಲಿ ಉಗ್ರಾವತಾರ ತಾಳುತ್ತವೆ. ಇವಕ್ಕೆ ಏಳೆಂಟು ಉಪ ಹಳ್ಳಗಳು ಸೇರುವುದರಿಂದ ಪ್ರವಾಹ ಸೃಷ್ಟಿಯಾಗಿ ಮನೆಗಳಿಗೆ ನೀರು ನುಗ್ಗುತ್ತದೆ. ಇದರಿಂದ ನಾಲ್ಕೈದು ದಿನ ಕಾಳಜಿ ಕೇಂದ್ರದಲ್ಲಿ ಜನರು ರಾತ್ರಿ ಕಳೆಯುತ್ತಾರೆ. ಹೀಗಾಗಿ ಈ ಹಳ್ಳದಲ್ಲಿ ಉಂಟಾಗುವ ಪ್ರವಾಹ ತಗ್ಗಿಸಬೇಕೆಂದರೆ ಉಪ ಹಳ್ಳದ ನೀರು ತಗ್ಗಿಸಬೇಕಿದೆ. ಬೆಣ್ಣಿಹಳ್ಳದ ಉಪಹಳ್ಳ ಎನಿಸಿರುವ ದೊಡ್ಡಹಳ್ಳದ ಪ್ರತಾಪ ಹೆಸರಿನಷ್ಟೇ ದೊಡ್ಡದಿದೆ. ಲಕ್ಷ್ಮೇಶ್ವರದಲ್ಲಿ ಉಗಮವಾಗುವ ಈ ಹಳ್ಳ ಹರಿದು ಬೆಣ್ಣಿಹಳ್ಳ ಸೇರುತ್ತದೆ.ಹೊಸ ಯೋಜನೆ:
ಅತ್ತ ಪ್ರವಾಹಕ್ಕೂ ತಡೆ ಬೀಳಬೇಕು. ಇತ್ತ ಬರಪೀಡಿತದಿಂದ ಸಾಧ್ಯವಾದಷ್ಟು ಹಳ್ಳಿಗಳನ್ನು ರಕ್ಷಿಸಬೇಕೆಂಬ ಉದ್ದೇಶದಿಂದ ಕರ್ನಾಟಕ ನೀರಾವರಿ ನಿಗಮವೂ 25 ಹಳ್ಳಿಗಳ ಕೆರೆ ತುಂಬಿಸುವ ಯೋಜನೆ ಸಿದ್ಧಪಡಿಸಿದೆ. ಬೆಣ್ಣಿಹಳ್ಳದ ಉಪಹಳ್ಳವಾಗಿರುವ ದೊಡ್ಡಹಳ್ಳದ ನೀರನ್ನು ಕುಂದಗೋಳ ತಾಲೂಕಿನ ಉಮಚಗಿ ಹಾಗೂ ರೊಟ್ಟಿಗವಾಡ ಬಳಿ ಬ್ಯಾರೇಜ್ ನಿರ್ಮಿಸಿ ತಡೆಯುವುದು. 100 ಎಂಸಿಎಫ್‌ಟಿ (0.1 ಟಿಎಂಸಿ) ನೀರನ್ನು ತಡೆ ಹಿಡಿಯುವುದು, ಈ ನೀರನ್ನು ನವಲಗುಂದ ತಾಲೂಕಿನ 7 ಹಳ್ಳಿಗಳ ಕೆರೆ, ಕುಂದಗೋಳ ತಾಲೂಕಿನ 18 ಹಳ್ಳಿಗಳ ಕೆರೆಗಳನ್ನು ಭರ್ತಿ ಮಾಡುವ ಯೋಜನೆ ಇದಾಗಿದೆ. ಇದರಿಂದ ಬೆಣ್ಣಿಹಳ್ಳ ಸೇರುವ ಮುನ್ನವೇ ದೊಡ್ಡಹಳ್ಳದಿಂದ ನೀರನ್ನು ತಡೆಯುವುದರಿಂದ ಪ್ರವಾಹದ ಪ್ರಮಾಣ ತಗ್ಗುತ್ತದೆ. ಜತೆಗೆ 25 ಕೆರೆಗಳು ಭರ್ತಿಯಾಗುವುದರಿಂದ ಆ ಹಳ್ಳಿಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಅಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಹೀಗಾಗಿ ಅವು ಬರಪೀಡಿತದಿಂದ ಮುಕ್ತವಾಗುತ್ತವೆ.ಯಾವ ಹಂತಕ್ಕಿದೆ?
₹ 236 ಕೋಟಿ ಯೋಜನೆ ಇದಾಗಿದ್ದು ಕರ್ನಾಟಕ ನೀರಾವರಿ ನಿಗಮದ ಮಂಡಳಿ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದೆ. ಇದೀಗ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಸಿಗುವುದು ಬಾಕಿಯುಳಿದಿದೆ. ಅನುಮೋದನೆ ಸಿಗುತ್ತಿದ್ದಂತೆ ಮೊದಲ ಹಂತದ ₹ 70 ಕೋಟಿ ಬಿಡುಗಡೆಯಾಗುತ್ತದೆ. ಆ ಬಳಿಕ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿ ಕೆಲಸ ಶುರುವಾಗಲಿದೆ ಎಂದು ಮೂಲಗಳು ತಿಳಿಸುತ್ತವೆ.ಒಟ್ಟಿನಲ್ಲಿ ಕುಂದಗೋಳ ಹಾಗೂ ನವಲಗುಂದ ತಾಲೂಕುಗಳ ಹಳ್ಳಿಗಳ ಕೆರೆ ನೀರು ತುಂಬಿಸುವ ಯೋಜನೆಗೆ ನಿಗಮದಿಂದ ಹಸಿರು ನಿಶಾನೆಯೆನೋ ಸಿಕ್ಕಿದೆ. ಸರ್ಕಾರ ಆದಷ್ಟು ಬೇಗನೆ ಆಡಳಿತಾತ್ಮಕ ಅನುಮೋದನೆ ನೀಡಿ ಕೆಲಸ ಶುರು ಹಚ್ಚಿಕೊಳ್ಳಬೇಕು ಎಂಬುದು ಜನರ ಒಕ್ಕೊರಲಿನ ಆಗ್ರಹ.ಯಾವ್ಯಾವ ಗ್ರಾಮಗಳು?
ರೊಟ್ಟಿಗವಾಡ, ಬರದ್ವಾಡ, ಚಾಕಲಬ್ಬಿ, ಕೊಡ್ಲಿವಾಡ, ಹಿರೇಗುಂಜಾಳ, ಚಿಕ್ಕಗುಂಜಾಳ, ಯರಗುಪ್ಪಿ, ಅಲ್ಲಿಪುರ, ಬಸಾಪುರ, ಹಿರೇನರ್ತಿ, ಚಿಕ್ಕನರ್ತಿ, ನಲವಡಿ, ಭದ್ರಾಪುರ, ಕೋಳಿವಾಡ, ಶಿರಗುಪ್ಪಿ, ಉಮಚಗಿ, ಮಜ್ಜಿಗುಡ್ಡ, ಮಲ್ಲಿಗವಾಡ ಸೇರಿದಂತೆ ಒಟ್ಟು 25 ಗ್ರಾಮಗಳ ಕೆರೆಗಳನ್ನು ಭರ್ತಿ ಮಾಡುವ ಯೋಜನೆಯಿದು.ನವಲಗುಂದ ತಾಲೂಕಿನ 7, ಕುಂದಗೋಳ ತಾಲೂಕಿನ 18 ಗ್ರಾಮಗಳ ಕೆರೆಗಳನ್ನು ಭರ್ತಿ ಮಾಡುವ ಯೋಜನೆ ಸಿದ್ಧಪಡಿಸಲಾಗಿದೆ. ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಗುವುದು ಬಾಕಿಯಿದೆ. ಅದು ಸಿಕ್ಕ ಬಳಿಕ ಟೆಂಡರ್ ಪ್ರಕ್ರಿಯೆ ಶುರುವಾಗಲಿದೆ.ರಾಘವೇಂದ್ರ ಜಾಲಗಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಕರ್ನಾಟಕ ನೀರಾವರಿ ನಿಗಮ