ಭಾವನೆಗಳ ಗುಚ್ಚ: ರಜನಿಯವರ ನೂರು ಕವನಗಳ ಸಂಕಲನ

KannadaprabhaNewsNetwork | Published : Dec 5, 2024 12:34 AM

ಸಾರಾಂಶ

ಇಲ್ಲಿ ನನ್ನೊಲುವೆ, ಜನುಮದಿನ, ಬಾ ನಲ್ಲೆ.., ರವಿಯ ಕಾಂತಿ, ಮನಸು ಕನಸು, ಮಿನುಗುತಾರೆ, ನಲ್ಲನ ನಲ್ಲೆ ಸೇರಿದಂತೆ ಹೆಚ್ಚು ಪ್ರೀತಿ- ಪ್ರೇಮ ಕೇಂದ್ರಿತ ಕವನಗಳೇ ಇವೆ. ಅಕ್ಕರೆಯ ಪಾಕ, ಅಗ್ರಜ. ಬಾಲ್ಯದ ನೆನಪು ಸೇರಿದಂತೆ ಹಲವು ಸಂಬಂಧ ಕುರಿತ ಕವನಗಳು ಇವೆ. ರೈತಾಪಿ, ನನ್ನಾಸೆ, ಕಲ್ಪನೆ, ಆಕಾಂಕ್ಷೆ, ನಿಸರ್ಗ ಸೊಬಗು ಮೊದಲಾದ ಪ್ರಕೃತಿ, ಪರಿಸರ ಕುರಿತ ಕವನಗಳು ಗಮನ ಸೆಳೆಯುತ್ತವೆ. ಸೀತಾಲಕ್ಷ್ಮೀ ವರ್ಮ ಅವರ ಮುನ್ನುಡಿ, ರತ್ನಾ ಹಾಲಪ್ಪಗೌಡ, ಡಾ.ಎಂಜಿಆರ್ ಅರಸು ಅವರ ಬೆನ್ನುಡಿ ಇದೆ.

ಕನ್ನಡಪ್ರಭ ವಾರ್ತೆ ಮೈಸೂರುಬಿ.ಎಂ. ರಜನಿ ಅವರ ಭಾವನೆಗಳ ಗುಚ್ಚ- 100 ಕವನಗಳ ಸಂಕಲನವನ್ನು ವೈದ್ಯವಾರ್ತಾ ಪ್ರಕಾಶನ ಪ್ರಕಟಿಸಿದೆ.ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ರಜನಿ ಅವರು ಪ್ರವೃತ್ತಿಯಲ್ಲಿ ಕವಯತ್ರಿ. ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುವಾಗಲೇ ಕವಿತೆ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಕವನ ರಚನೆಯ ಆಸಕ್ತಿ ಬೆಳೆಸಿಕೊಂಡರು. ಮುಂದೆ ಡಾ.ರಾಜಕುಮಾರ್ ಅಕಾಡೆಮಿ ಏರ್ಪಡಿಸಿದ್ದ ಕವಿತಾ ಸ್ಪರ್ಧೆಯಲ್ಲಿ ಎರಡು ಬಾರಿ ಬಹುಮಾನ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಭಾಗಿ. ಅಲ್ಲಿ ಡಾ.ಎಂಜಿಆರ್ ಅರಸು ಹಾಗೂ ರತ್ನಾ ಹಾಲಪ್ಪಗೌಡ ಅವರಿಂದ ದೊರೆತ ಪ್ರೋತ್ಸಾಹದಿಂದ ಈವರೆಗೆ ಸುಮಾರು 200 ಕವಿತೆಗಳನ್ನು ರಚಿಸಿದ್ದಾರೆ. ಈ ಪೈಕಿ ಭಾವನೆಗಳ ಗುಚ್ಚ- 100 ಕವಿತೆಗಳ ಸಂಕಲನ ಪ್ರಕಟ.ಇಲ್ಲಿ ನನ್ನೊಲುವೆ, ಜನುಮದಿನ, ಬಾ ನಲ್ಲೆ.., ರವಿಯ ಕಾಂತಿ, ಮನಸು ಕನಸು, ಮಿನುಗುತಾರೆ, ನಲ್ಲನ ನಲ್ಲೆ ಸೇರಿದಂತೆ ಹೆಚ್ಚು ಪ್ರೀತಿ- ಪ್ರೇಮ ಕೇಂದ್ರಿತ ಕವನಗಳೇ ಇವೆ. ಅಕ್ಕರೆಯ ಪಾಕ, ಅಗ್ರಜ. ಬಾಲ್ಯದ ನೆನಪು ಸೇರಿದಂತೆ ಹಲವು ಸಂಬಂಧ ಕುರಿತ ಕವನಗಳು ಇವೆ. ರೈತಾಪಿ, ನನ್ನಾಸೆ, ಕಲ್ಪನೆ, ಆಕಾಂಕ್ಷೆ, ನಿಸರ್ಗ ಸೊಬಗು ಮೊದಲಾದ ಪ್ರಕೃತಿ, ಪರಿಸರ ಕುರಿತ ಕವನಗಳು ಗಮನ ಸೆಳೆಯುತ್ತವೆ. ಸೀತಾಲಕ್ಷ್ಮೀ ವರ್ಮ ಅವರ ಮುನ್ನುಡಿ, ರತ್ನಾ ಹಾಲಪ್ಪಗೌಡ, ಡಾ.ಎಂಜಿಆರ್ ಅರಸು ಅವರ ಬೆನ್ನುಡಿ ಇದೆ. ಆಸಕ್ತರು ಮೊ. 94484 02092 ಸಂಪರ್ಕಿಸಬಹುದು.8 ರಂದು ಬಿಡುಗಡೆ: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಡಿ.8 ರಂದು ಬೆಳಗ್ಗೆ 10.30 ಕ್ಕೆ ವಿಜಯನಗರ ಸಾಹಿತ್ಯ ಭವನದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಬಿ.ಎಂ. ರಜನಿ ಅವರ ''''ಭಾವನೆಗಳ ಗುಚ್ಚ'''' ಕವನ ಸಂಕಲನವನ್ನು ಹಿರಿಯ ಸಾಹಿತಿ ಡಾ.ಸಿಪಿಕೆ ಬಿಡುಗಡೆ ಮಾಡುವರು. ಮಾಜಿ ಸಚಿವ ಎಂ ಶಿವಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಪ್ರಾಸ್ತಾವಿಕ ಭಾಷಣ ಮಾಡುವರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಪುಸ್ತಕ ತಾಂಬೂಲ ವಿತರಿಸುವರು. ವೈದ್ಯವಾರ್ತಾ ಪ್ರಕಾಶನ ನಿರ್ದೇಶಕ ಜೆ.ಪಿ. ಅರಸ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ರತ್ನಾ ಹಾಲಪ್ಪಗೌಡ ಮುಖ್ಯ ಅತಿಥಿಯಾಗಿರುವರು. ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಗೌರವ ಕಾರ್ಯದರ್ಶಿ ಡಾ.ಎಂಜಿಆರ್ ಅರಸು ಅಧ್ಯಕ್ಷತೆ ವಹಿಸುವರು.

Share this article