ಪುರಸಭೆ ಮಳಿಗೆಗಳ ಹಳೆಯ ಬಾಡಿಗೆದಾರರ ತೆರವಿಗೆ ಕ್ರಮ

KannadaprabhaNewsNetwork | Published : Apr 20, 2025 1:45 AM

ಸಾರಾಂಶ

ಕೆಲವು ಮಳಿಗೆಗಳ ಸಿಂಗಲ್ ಟೆಂಡರ್ ನಡೆದಿದ್ದು ಇವುಗಳ ಮರು ಹರಾಜು ನಡೆಸಬೇಕು ಎಂದು ಸದಸ್ಯೆ ರೇಖಾ ಒತ್ತಾಯಿಸಿದರು. ಇದಕ್ಕೆ ಕೆಲವು ಸದಸ್ಯರು ಧ್ವನಿಗೊಡಿಸಿದರು. ೬ ಮಳಿಗೆಗಳು ಸಿಂಗಲ್ ಟೆಂಡರ್ ನಡೆದಿದ್ದು ಇವುಗಳ ಮರು ಹರಾಜು ನಡೆಸಲು ಜಿಲ್ಲಾಧಿಕಾರಿಗಳ ಅನುಮತಿಗಾಗಿ ಕಳುಹಿಸಿಕೊಡಲಾಗುವುದು ಎಂದು ಅಧ್ಯಕ್ಷರು ಹೇಳಿದರು. ಸದ್ಯ ೩೪ ವರ್ತಕರು ಎಲ್ಲ ಮಳಿಗೆಗಳನ್ನು ಏಕಕಾಲಕ್ಕೆ ಹರಾಜು ನಡೆಸುವಂತೆ ನ್ಯಾಯಾಲಯದ ಮೊರೆಹೋಗಿದ್ದು ನ್ಯಾಯಾಲಯ ಮುಂದಿನ ಮೂರು ತಿಂಗಳ ಒಳಗಾಗಿ ಉಳಿದಿರುವ ಮಳಿಗೆಗಳ ಟೆಂಡರ್ ನಡೆಸುವಂತೆ ಸೂಚಿಸಿದೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಟೆಂಡರ್ ಮುಗಿದಿರುವ ಪುರಸಭೆಯ ಮಳಿಗೆಗಳನ್ನು ಮುಂದಿನ ಸೋಮವಾರದೊಳಗೆ ಹೊಸ ಬಾಡಿಗೆದಾರರಿಗೆ ಮುಕ್ತಗೊಳಿಸಿಕೊಡಬೇಕು ಎಂದು ಪುರಸಭೆ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಶನಿವಾರ ಪುರಸಭೆ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಟೆಂಡರ್ ನಡೆದು ಈಗಾಗಲೇ ಹತ್ತು ದಿನಗಳು ಕಳೆದಿದ್ದು ಟೆಂಡರ್ ನಡೆದ ದಿನದಿಂದ ಹೊಸ ಬಾಡಿಗೆದಾರರಿಗೆ ಬಾಡಿಗೆ ನಿಗದಿಯಾಗುವುದರಿಂದ ಶೀಘ್ರವೇ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಮಳಿಗೆಗಳನ್ನು ಹೊಸ ಬಾಡಿಗೆದಾರರಿಗೆ ನೀಡಬೇಕು. ಈಗಿರುವ ಬಾಡಿಗೆದಾರರನ್ನು ಮುಂದಿನ ಸೋಮವಾರದೊಳಗಾಗಿ ತೆರವುಗೊಳಿಸಬೇಕು ಎಂದರು.

ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸದಸ್ಯ ಪ್ರಜ್ವಲ್, ಪುರಸಭೆ ನಿಗದಿಪಡಿಸಿದ ಬಾಡಿಗೆ ದರಕ್ಕಿಂತ ಶೇ. ೧೦ರಷ್ಟು ಅಧಿಕ ಬಾಡಿಗೆಗೆ ಪಡೆಯಲಾಗಿದೆ. ಇದರಿಂದ ಟೆಂಡರ್‌ದಾರರು ನಷ್ಟ ಹೊಂದುವುದಲ್ಲದೆ ಮಳಿಗೆಗಳು ಖಾಲಿ ಉಳಿಯಲಿವೆ ಎಂಬ ಆತಂಕ ಹೊರಹಾಕಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಪೈಪೋಟಿಯಲ್ಲಿ ಟೆಂಡರ್ ಪಡೆದರೆ ನಾವು ಹೊಣೆಗಾರರಲ್ಲ. ಮುಂದಿನ ಆರು ತಿಂಗಳ ಬಾಡಿಗೆಯನ್ನು ಮೊದಲೇ ಪಡೆದು ನಂತರ ಮಳಿಗೆಗಳನ್ನು ಬಾಡಿಗೆದಾರರಿಗೆ ಹಸ್ತಾಂತರಿಸಲಾಗುವುದು. ಒಂದು ವೇಳೆ ಬಾಡಿಗೆ ಕಟ್ಟಲು ವಿಫಲರಾದರೆ ತಕ್ಷಣವೇ ಮಳಿಗೆಗಳ ಮರು ಹರಾಜು ಮಾಡಲಾಗುವುದು ಎಂದರು.

ಮರು ಹರಾಜಿಗೆ ಒತ್ತಾಯ:

ಕೆಲವು ಮಳಿಗೆಗಳ ಸಿಂಗಲ್ ಟೆಂಡರ್ ನಡೆದಿದ್ದು ಇವುಗಳ ಮರು ಹರಾಜು ನಡೆಸಬೇಕು ಎಂದು ಸದಸ್ಯೆ ರೇಖಾ ಒತ್ತಾಯಿಸಿದರು. ಇದಕ್ಕೆ ಕೆಲವು ಸದಸ್ಯರು ಧ್ವನಿಗೊಡಿಸಿದರು. ೬ ಮಳಿಗೆಗಳು ಸಿಂಗಲ್ ಟೆಂಡರ್ ನಡೆದಿದ್ದು ಇವುಗಳ ಮರು ಹರಾಜು ನಡೆಸಲು ಜಿಲ್ಲಾಧಿಕಾರಿಗಳ ಅನುಮತಿಗಾಗಿ ಕಳುಹಿಸಿಕೊಡಲಾಗುವುದು ಎಂದು ಅಧ್ಯಕ್ಷರು ಹೇಳಿದರು. ಸದ್ಯ ೩೪ ವರ್ತಕರು ಎಲ್ಲ ಮಳಿಗೆಗಳನ್ನು ಏಕಕಾಲಕ್ಕೆ ಹರಾಜು ನಡೆಸುವಂತೆ ನ್ಯಾಯಾಲಯದ ಮೊರೆಹೋಗಿದ್ದು ನ್ಯಾಯಾಲಯ ಮುಂದಿನ ಮೂರು ತಿಂಗಳ ಒಳಗಾಗಿ ಉಳಿದಿರುವ ಮಳಿಗೆಗಳ ಟೆಂಡರ್ ನಡೆಸುವಂತೆ ಸೂಚಿಸಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಹೇಮಾವತಿ ವಾಣಿಜ್ಯ ಸಂಕೀರ್ಣ ಹಾಗೂ ಹಳೇ ಬಸ್ ನಿಲ್ದಾಣದ ನಿರ್ಮಾಣ ಹಂತದಲ್ಲಿರುವ ಸಂಕೀರ್ಣದ ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಟೆಂಡರ್ ನಡೆಸಲಾಗುವುದು ಎಂದರು.

ಕಳೆದ ೯ ವರ್ಷಗಳ ಹಿಂದೆ ಟೆಂಡರ್ ನಡೆದಿರುವ ಅಜಾದ್ ರಸ್ತೆಯ ಮಟನ್ ಮಾರ್ಕೆಟ್ ಮಳಿಗೆಗಳಿಗೆ ಇದುವರೆಗೆ ಕರಾರನ್ನೇ ಮಾಡಲಾಗಿಲ್ಲ. ಮುಂದಿನ ಸಭೆಯೊಳಗೆ ಈ ಮಳಿಗೆಗಳ ಆಗ್ರೀಮೆಂಟ್ ಮಾಡದಿದ್ದರೆ ಸಭೆ ಬಹಿಷ್ಕರಿಸುವುದಾಗಿ ಸದಸ್ಯ ಮುಖೇಶ್‌ಶೆಟ್ಟಿ ಎಚ್ಚರಿಕೆ ನೀಡಿದರು. ರಾಜ್ಯ ಹಣಕಾಸು ನಿಧಿ ೧೨೪ ಲಕ್ಷ ರು. ಬಳಕೆಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸದೆ ಅಧಿಕಾರಿಗಳೇ ಯೋಜನಾ ಪಟ್ಟಿ ಸಿದ್ಧಪಡಿಸಿರುವ ಬಗ್ಗೆ ಸದಸ್ಯ ಇಸ್ರಾರ್‌ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳೇ ಎಲ್ಲವನ್ನು ಮಾಡುವುದಾದರೆ ನಾವಿರುವುದು ಏಕೆ ಎಂದು ಅಸಮಾಧಾನ ಹೊರಹಾಕಿದರು.

ಸಭೆ ಅಜೆಂಡಾ ಕಾಫಿಯನ್ನು ಸದಸ್ಯರಿಗೆ ಹಂಚದ ಅಧಿಕಾರಿಗಳ ವಿರುದ್ಧ ಅಧ್ಯಕ್ಷೆ ರೋಷಾವೇಶ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಎಲ್ಲವನ್ನು ನಾವೇ ಹೇಳಿ ಮಾಡಿಸಬೇಕಾದ ಸ್ಥಿತಿ ಸೃಷ್ಟಿಯಾಗಿದೆ. ತಿಳಿದು ಮಾಡುವುದನ್ನು ಕಲಿಯುವುದೇ ಇಲ್ಲವಾ ಎಂದು ಎಂಜಿನಿಯರ್ ಸುಜಾತ್ ಅವರಿಗೆ ಪ್ರಶ್ನಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಝರೀನಾ, ಮುಖ್ಯಾಧಿಕಾರಿ ಮಹೇಶ್ವರಪ್ಪ, ಸದಸ್ಯರಾದ ಅಣ್ಣಪ್ಪ, ಅನ್ನಪೂರ್ಣ, ವನಜಾಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this article