ಅಡಿಬೈಲು ರಂಗನಾಥ ಸ್ವಾಮಿ ಜಾತ್ರೆಗೆ ಚಾಲನೆ

KannadaprabhaNewsNetwork |  
Published : Feb 10, 2025, 01:47 AM IST
9ಎಚ್ಎಸ್ಎನ್12 : ರಂಗನಬೆಟ್ಟದಲ್ಲಿರುವ ರಂಗನಾಥ ಸ್ವಾಮಿ ದೇವಾಲಯದಲ್ಲಿ ಕಲ್ಲಾರೆ ಹಾಗೂ ಬರತೂರು ಕುಟುಂಬದವರಿಂದ ದೊಡ್ಡಹರಿಸೇವೆ ಉತ್ಸವ ನಡೆಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಕೆಂಚಮ್ಮನ ಹೊಸಕೋಟೆ ಹೋಬಳಿಯ ಅಡಿಬೈಲು ಗ್ರಾಮದ, ಶ್ರೀ ಬಿಂದಿಗಮ್ಮ ಹಾಗೂ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರದಿಂದ ಉತ್ಸವಗಳು ಪ್ರಾರಂಭವಾಗಿವೆ. ಭಾನುವಾರ ಸಂಜೆ ಮಹಾ ಮಂಗಳಾರತಿಯ ಮೂಲಕ ಬಿಂದಿಗೆಮ್ಮ ಅಡಿಬೈಲು ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಸೋಮವಾರ ಬೆಳಗ್ಗೆ ಹೇಮಾವತಿ ನದಿಯಿಂದ ಪವಿತ್ರ ತೀರ್ಥವನ್ನು ತಂದು ಪುಣ್ಯ ಪ್ರೋಕ್ಷಣೆ ಮಾಡಿ ನಂತರ ಅಭಿಷೇಕ ಉತ್ಸವ ನಡಸಿದ ನಂತರ ಶ್ರೀ ಬಿಂದಿಗೆ ಅಡಿಬೈಲು ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಅಡಿಬೈಲು ಗ್ರಾಮದ, ಶ್ರೀ ಬಿಂದಿಗಮ್ಮ ಹಾಗೂ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರದಿಂದ ಉತ್ಸವಗಳು ಪ್ರಾರಂಭವಾಗಿವೆ.

ಶನಿವಾರ ರಂಗನಬೆಟ್ಟದಲ್ಲಿರುವ ರಂಗನಾಥ ಸ್ವಾಮಿ ದೇವಾಲಯದಲ್ಲಿ ಕಲ್ಲಾರೆ ಹಾಗೂ ಬರತೂರು ಕುಟುಂಬದವರಿಂದ ದೊಡ್ಡಹರಿಸೇವೆ ಉತ್ಸವ ನಡೆಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವ ಮೂರ್ತಿಯ ಅಡ್ಡಪಲ್ಲಕ್ಕಿಯನ್ನು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ಅಭಿಷೇಕ ಹಾಗೂ ಅರ್ಚನೆಗಳ ಮೂಲಕ ಪೂಜಾ ಕೈಂಕರ್ಯ ನಡೆಸಲಾಯಿತು. ಭಾನುವಾರ ಹಾಗೂ ಸೋಮವಾರ ರಾತ್ರಿ ಉತ್ಸವಗಳನ್ನು ನಡೆಸಲಾಗುವುದು. ಮಂಗಳವಾರ ಕಳಸ ಹೊರುವ ಪುರೋಹಿತರಿಗೆ ಹಸೆ ಹಾಕುವ ಮೂಲಕ ದೇವಾಲಯಕ್ಕೆ ಕಳಿಸಿಕೊಡಲಾಗುತ್ತದೆ. ಬುಧವಾರ ರಾತ್ರಿ ಉತ್ಸವ, ಗುರುವಾರ ಅಮ್ಮನವರಿಗೆ ಹಸೆ ಹಾಗೂ ಉತ್ಸವ ಕಾರ್ಯಕ್ರಮವಿರುತ್ತದೆ. ಶುಕ್ರವಾರ ಗಜಕೊಂಡ ಕೊಳದ ಹತ್ತಿರ ಅಮ್ಮನವರಿಗೆ ವಿಶೇಷ ಪೂಜೆ ಮಾಡಿ, ಅಲ್ಲಿಂದ ಕಳಸವನ್ನು ತಲೆಯ ಮೇಲೆ ಹೊತ್ತು ತರಲಾಗುತ್ತದೆ ನಂತರ ಗರುಡೋತ್ಸವ ನಡೆಸಲಾಗುವುದು.

ಶನಿವಾರ ಬೆಳಗ್ಗೆ ಉತ್ಸವ ಮೂರ್ತಿ ಹಾಗೂ ಅಮ್ಮನವರ ಕಳಸವನ್ನು ವಾದ್ಯ ಸಮೇತ ಬರುತೂರು ಗ್ರಾಮದ ಬಳಿ ಇರುವ ಹೇಮಾವತಿ ನದಿ ತೀರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ, ಸಂಜೆ 6 ಗಂಟೆಯ ತನಕ ಹೊಳೆ ಸಾಲಿನಲ್ಲಿ ಜಾತ್ರೆ ನಡೆಸಲಾಗುತ್ತದೆ. ನಂತರ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನಡೆದ ನಂತರ ಕಳಸ ಹೊರುವ ಪುರೋಹಿತರು ತಲೆಯ ಮೇಲೆ ಕಳಸ ಹಾಗೂ ಉತ್ಸವ ಮೂರ್ತಿಯನ್ನು ಹೊತ್ತು ಬರುತ್ತೂರು ತೋರಣ, ಪುರಭೈರವನಹಳ್ಳಿ ತೋರಣ, ಅಂಜಳಿಗೆ,ಕಲ್ಲಾರೆ, ಕಾಣಿಗೆರೆ, ಅಡಿ ಬೈಲು, ಕಣಿವೆ ಬಸವನಹಳ್ಳಿ ದೇವಾಲಯದ ಬಳಿ ಇರುವ ತೋರಣಗಳ ಮೂಲಕ ಹಾಯ್ದು ತರಲಾಗುವುದು. ನಂತರ ಕಳಸ ಹಾಗೂ ಉತ್ಸವಮೂರ್ತಿಗೆ ಮಹಾಮಂಗಳಾರತಿ ನಡೆಸಿ ದೇವಾಲಯದ ಒಳಗೆ ತರಲಾಗುವುದು. ನಂತರ ವಿಶೇಷ ಉತ್ಸವ ನಡೆಸಲಾಗುತ್ತದೆ.

ಭಾನುವಾರ ದೇವರಿಗೆ ಅಭಿಷೇಕದ ಮೂಲಕ ವಿಶೇಷ ಪೂಜೆ ಸಲ್ಲಿಸಿ ನಂತರ ಬೆಟ್ಟದ ಜಾತ್ರೆ ನಡೆಸಲಾಗುತ್ತದೆ. ಅಂದು ಬೆಳಿಗ್ಗೆ ನವಿಲುಯೋತ್ಸವ, ಆಂಜನೇಯ ಉತ್ಸವ ನಡೆಸಲಾಗುತ್ತದೆ. ಭಾನುವಾರ ಸಂಜೆ ಮಹಾ ಮಂಗಳಾರತಿಯ ಮೂಲಕ ಬಿಂದಿಗೆಮ್ಮ ಅಡಿಬೈಲು ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಸೋಮವಾರ ಬೆಳಗ್ಗೆ ಹೇಮಾವತಿ ನದಿಯಿಂದ ಪವಿತ್ರ ತೀರ್ಥವನ್ನು ತಂದು ಪುಣ್ಯ ಪ್ರೋಕ್ಷಣೆ ಮಾಡಿ ನಂತರ ಅಭಿಷೇಕ ಉತ್ಸವ ನಡಸಿದ ನಂತರ ಶ್ರೀ ಬಿಂದಿಗೆ ಅಡಿಬೈಲು ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಈ ಜಾತ್ರೆಯಲ್ಲಿ ಆರು ದಿನಗಳ ತನಕ ಕಠಿಣ ವ್ರತದಲ್ಲಿರುವ ಪುರೋಹಿತರು ಕೈನಲ್ಲಿ ಮುಟ್ಟದೆ ಬೋಳು ತಲೆಯ ಮೇಲೆ ಕಳಸ ಹಾಗೂ ಉತ್ಸವ ಮೂರ್ತಿಯನ್ನು ಸುಮಾರು ಹತ್ತು ಕಿಲೋಮೀಟರ್ ತನಕ ಪ್ರತಿ ತೋರಣಗಳಲ್ಲೂ ಹೊತ್ತು ತರುವುದು ಈ ಜಾತ್ರೆಯ ವೈಶಿಷ್ಟ್ಯವಾಗಿದೆ. ಜಾತ್ರೆಯ ಪ್ರಯುಕ್ತ ಪ್ರತಿದಿನವೂ ಅನ್ನಸಂತರ್ಪಣೆ ನಡೆಸಲಾಗುವುದು. ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾಗಬೇಕೆಂದು ಅರ್ಚಕರು ಹಾಗೂ ಆಡಳಿತ ಮಂಡಳಿಯವರು ಕೋರಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ