ಎಕ್ಸೆಲ್‌ ಕಾಲೇಜಿನಲ್ಲಿ ‘ಅಕ್ಷರೋತ್ಸವ - 2024 ನಾಡು - ನುಡಿಯ ರಾಷ್ಟ್ರೀಯ ಸಮ್ಮೇಳನ’

KannadaprabhaNewsNetwork | Published : May 24, 2024 12:50 AM

ಸಾರಾಂಶ

ಬುಧವಾರ ಗುರುವಾಯನಕೆರೆಯ ಎಕ್ಸೆಲ್‌ ಪದವಿಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್‌ನಲ್ಲಿ ‘ಅಕ್ಷರೋತ್ಸವ - 2024 ನಾಡು - ನುಡಿಯ ರಾಷ್ಟ್ರೀಯ ಸಮ್ಮೇಳನ’ ನಡೆಯಿತು. ಖ್ಯಾತ ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಸಮ್ಮೇಳನ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸಂಸ್ಕಾರಯುತ ಶಿಕ್ಷಕರ ಕಲಿಸುವಿಕೆಯನ್ನು ತಾಳ್ಮೆಯಿಂದ ಸ್ವೀಕರಿಸುವ ಮನೋಬಾವ ಬೆಳೆಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಖ್ಯಾತ ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.ಅವರು ಬುಧವಾರ ಗುರುವಾಯನಕೆರೆಯ ಎಕ್ಸೆಲ್‌ ಪದವಿಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್‌ನಲ್ಲಿ ನಡೆದ ‘ಅಕ್ಷರೋತ್ಸವ - 2024 ನಾಡು - ನುಡಿಯ ರಾಷ್ಟ್ರೀಯ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಧ್ಯಾನ ಚಿಂತನೆ ಬೆಳೆಯಬೇಕು. ಕರಾವಳಿ ಭಾಗದ ಯಕ್ಷಗಾನ ಕಲೆ ಯಾವುದೇ ಸರ್ಕಾರದ ಹಂಗಿಲ್ಲದೆ ಕಲಾಭಿಮಾನಿಗಳ ಪ್ರೋತ್ಸಾಹದಿಂದ ಬೆಳೆಯುತ್ತಿದೆ ಎಂದರೆ ಇದರ ಮಹತ್ವ ಹೇಗಿದೆ ಎಂದು ತಿಳಿಯಬೇಕು ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಸುಬ್ಬಣ್ಣ ರೈ ‘ಅಕ್ಷರೋತ್ಸವ ಕವಿತೆಗಳು’ ಗ್ರಂಥ ಅನಾವರಣ ಗೊಳಿಸಿ ಮಾತನಾಡಿ, ಮಾತಿನಂತೆ ನಡೆಯುವ ಸಂಕಲ್ಪ ಮಾಡಿದಾಗ ಮಾತ್ರ ಯಶಸ್ಸು. ಯಶಸ್ವಿ ದಾರಿಗೆ ಅಡೆತಡೆ ಇದ್ದೆ ಇದೆ ಅದನ್ನುಮೆಟ್ಟಿ ನಿಲ್ಲುವುದೇ ಸಾದನೆ ಎಂದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಡಾ. ಶ್ರೀನಾಥ್ ಅವರು ಲೇಖಕ ಅಭಿರಾಂ ಬಿ.ಎಸ್‌. ಅವರ ‘ಅಚೀವರ್ಸ್ ಮ್ಯಾಥಮೆಟಿಕ್ಸ್’ ಪಠ್ಯಪುಸ್ತಕ ಅನಾವರಣಗೊಳಿಸಿದರು.

ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ ಲೇಖನ ಪ್ರಭಾಕರ್ ಅವರ ‘ಕಂಪ್ಯೂಟರ್ ಸೈನ್ಸ್ ಸ್ಕ್ಯಾನರ್’ ಪುಸ್ತಕ ಅನಾವರಣಗೊಳಿಸಿದರು.

ಕಾಲೇಜಿನ ಆಡಳಿತ ಮಂಡಳಿ ಅದ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಅಧ್ಯಕ್ಷತೆ ವಹಿಸಿದ್ದರು. ಕನ್ನಡಪ್ರಭ ಪುರವಣಿ ಸಂಪಾದಕ, ಸಾಹಿತಿ ಜೋಗಿ, ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಅಭಿರಾಂ ಬಿ.ಎಸ್.ಇದ್ದರು.

ಪಿಯುಸಿ ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕಾಲೇಜಿನ ವಿದ್ಯಾರ್ಥಿಗಳಾದ ಅನುಪ್ರಿಯ,ತನ್ವಿ ಭಟ್ ಇವರಿಗೆ ಒಂದು ಲಕ್ಷ ರು. ನಗದು ಮೊತ್ತದೊಂದಿಗೆ ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಗೌರವಿಸಲಾಯಿತು.

ಪ್ರಾಚಾರ್ಯ ಡಾ ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು. ಪ್ರೊ. ಅಭಿರಾಮ್ ವಂದಿಸಿದರು.

Share this article