ಉಪ್ಪಿನಂಗಡಿ: ಉಪ್ಪಿನಂಗಡಿಯ ಇಂದ್ರಪ್ರಸ್ಥ ಪದವಿ ಪೂರ್ವಕಾಲೇಜಿನ ಅನಘಾ ಕೆ ೬೦೦ ರಲ್ಲಿ ೫೯೭ ಅಂಕ ಗಳಿಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ.
ಎಂಜಿನಿಯರ್ ಆಗುವ ಕನಸಿದೆ: ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ೯೫ ಶೇಕಡಾ ಕ್ಕಿಂತ ಹೆಚ್ಚು ಅಂಕ ಗಳಿಸುವ ನಿರೀಕ್ಷೆ ಇತ್ತು. ಕಾಲೇಜಿನಲ್ಲಿ ಉತ್ತಮ ರೀತಿಯಲ್ಲಿ ಪಾಠ ಪ್ರವಚನ ನಡೆಸಿ ಕಲಿಕೆಗೆ ಉತ್ತಮ ಪ್ರೋತ್ಸಾಹ ನೀಡಿದ್ದರು. ಮನೆಯಲ್ಲಿ ಹೆತ್ತವರ ಸಹಕಾರ ಅನುದಿನವೂ ನನಗೆ ಲಭಿಸಿತ್ತು. ಹೆತ್ತವರ ಹಾಗೂ ಇಂದ್ರಪ್ರಸ್ಥ ಕಾಲೇಜಿನ ಪ್ರೋತ್ಸಾಹದಿಂದಾಗಿ ನಾನಿಂದು ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಉತ್ತಮ ಫಲಿತಾಂಶ ಪಡೆಯುವಂತಾಗಿದೆ ಎಂದು ಅನಘಾ ಸಂತಸ ವ್ಯಕ್ತಪಡಿಸಿದ್ದಾರೆ.
ಶೇ ೧೦೦ ಫಲಿತಾಂಶ ದಾಖಲಿಸಿದ ಇಂದ್ರಪ್ರಸ್ಥ ಪಿಯು ಕಾಲೇಜು: ಉಪ್ಪಿನಂಗಡಿಯ ಇಂದ್ರಪ್ರಸ್ಥ ಕಾಲೇಜಿನಲ್ಲಿ ಪರೀಕ್ಷೆ ಬರೆದ ೧೦೧ ವಿದ್ಯಾರ್ಥಿಗಳಲ್ಲಿ ೬೬ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ೩೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುತ್ತಾರೆ. ತನ್ಮೂಲಕ ಶೇ ೧೦೦ ರ ನಿರಂತರ ಫಲಿತಾಂಶ ದಾಖಲಿಸಿಕೊಂಡಿದೆ. ಕಾಲೇಜಿನ ಅನಘ ಕೆ ೫೯೭ ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಪಿ ವಿ ವಿದಿಶಾ ೫೮೯ ಅಂಕ ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕೆ ಪೃಥ್ವಿ ಪ್ರಭು ೫೮೭ ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.