ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲಾಧಿಕಾರಿಗಳ ಕಚೇರಿ ಪ್ರವೇಶದ್ವಾರದ ಎದುರು ಬೆಳಗ್ಗೆ ಜಮಾಯಿಸಿದ ವಿವಿಧ ಸಂಘಟನೆಗಳ ಮುಖಂಡರು, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಿಷೇಧಾಜ್ಞೆ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡುವಂತೆ ಮನವಿ ಕೊಟ್ಟರೂ, ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ವಿರುದ್ಧವೂ ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.ಪ್ರವೇಶದ್ವಾರದ ಬಳಿ ಶಾಮಿಯಾನ ಹಾಕಿ ಧರಣಿ ಕೂರಲು ಧರಣಿನಿರತರು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನೆ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧಿಕಾರಿಗಳು ರಾಮನಗರಕ್ಕೆ ಜನರ ಸೇವೆ ಮಾಡಲು ಬಂದಿದ್ದಾರೋ ಅಥವಾ ಜನರಿಗೆ ತೊಂದರೆ ಕೊಡಲು ಬಂದಿದ್ದಾರೋ ಗೊತ್ತಿಲ್ಲ. ಇಂತಹ ಅಧಿಕಾರಿಯನ್ನು ರಾಜ್ಯದ ಯಾವ ಜಿಲ್ಲೆಯಲ್ಲಿಯೂ ನೋಡಿಲ್ಲ. ಬೇರೆ ಜಿಲ್ಲೆಗಳಲ್ಲಿ ನಾವು ಧರಣಿ ನಡೆಸಿದರೆ ಜಿಲ್ಲಾಧಿಕಾರಿಯೇ ಬಂದು ಮನವಿ ಸ್ವೀಕರಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಾರೆ. ಆದರೆ, ಇಲ್ಲಿನ ಜಿಲ್ಲಾಧಿಕಾರಿ ಯಶವಂತ್ ಅದಕ್ಕೆ ತದ್ವಿರುದ್ಧವಾಗಿದ್ದಾರೆ ಕಿಡಿಕಾರಿದರು.
ರೈತ ಸಂಘದ ವಿಭಾಗೀಯ ಅಧ್ಯಕ್ಷ ಕೆ. ಮಲ್ಲಯ್ಯ ಮಾತನಾಡಿ, ಕಾನೂನಿಗೆ ಗೌರವ ಕೊಟ್ಟು ನಾವು ಬೀದಿಯಲ್ಲಿ ಹೋರಾಟ ಮಾಡುತ್ತಿದ್ದೇವೆ. ಈ ನಮ್ಮ ತಾಳ್ಮೆಯ ಕಟ್ಟೆ ಒಡೆದರೆ, ಕಾನೂನು ಮುರಿದು ರೈತರ ಶಕ್ತಿ ಏನೆಂದು ತೋರಿಸುವುದು ಗೊತ್ತಿದೆ. ಮುಂದಾಗುವ ಅನಾಹುತಕ್ಕೆ ಜಿಲ್ಲಾಧಿಕಾರಿಯೇ ಹೊಣೆಯಾಗುತ್ತಾರೆ. ಅದಕ್ಕೆ ಅವಕಾಶ ಕೊಡದೆ ನಿಷೇಧಾಜ್ಞೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ನಾಳೆ ಸಭೆ: ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಲು ಮುಖಂಡರು ನಗರದ ಎಪಿಎಂಸಿ ಆವರಣದಲ್ಲಿರುವ ರೈತ ಭವನದಲ್ಲಿ ನಾಳೆ (ಫೆ.12) ಸಭೆ ಹಮ್ಮಿಕೊಂಡಿದ್ದು, ನಂತರ ಸುದ್ದಿಗೋಷ್ಠಿ ನಡೆಸಲಾಗುವುದು ಎಂದು ಮುಖಂಡರು ಮಾಧ್ಯಮದವರಿಗೆ ತಿಳಿಸಿದರು.
‘ರಾಮನಗರಕ್ಕಷ್ಟೇ ಸೀಮಿತವಾಗಿದ್ದ ಇಲ್ಲಿನ ಜಿಲ್ಲಾಧಿಕಾರಿ ವಿರುದ್ಧದ ಹೋರಾಟವನ್ನು ಇನ್ನು ಮುಂದೆ ರಾಜ್ಯಮಟ್ಟಕ್ಕೆ ವಿಸ್ತರಿಸಲಾಗುವುದು. ರೈತರ ಹೋರಾಟಕ್ಕೆ ಪ್ರಧಾನಿಯೇ ನಡುಗಿರುವಾಗ ಇನ್ನು ಈ ಜಿಲ್ಲಾಧಿಕಾರಿ ಯಾವ ಲೆಕ್ಕ? ಇವರಿಗೆ ರೈತರು ಪಾಠ ಕಲಿಸುವ ದಿನಗಳು ದೂರವಿಲ್ಲ. ರೈತ ಸಂಘ ಸೇರಿದಂತೆ ಸಂಘ– ಸಂಘಟನೆಗಳ ಜೊತೆ ಸಭೆ ನಡೆಸಿ ಸದ್ಯದಲ್ಲೇ ರಾಜ್ಯಮಟ್ಟದ ಹೋರಾಟವನ್ನು ರೂಪಿಸಲಾಗುವುದು’.