ಕನ್ನಡಪ್ರಭ ವಾರ್ತೆ ಬೆಂಗಳೂರು
ಕೃತಕ ಬುದ್ಧಿಮತ್ತೆಯು ಮಾನವ ಬುದ್ಧಿಮತ್ತೆಗೆ ಪರ್ಯಾಯವಲ್ಲ, ಬದಲಾಗಿ ಮಾನವನ ಸೃಜನಶೀಲತೆ ಮತ್ತು ಜಾಣ್ಮೆಯನ್ನು ವರ್ಧಿಸುವ ಸಾಧನವಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದರು.ಎಬಿವಿಪಿ, ವಿಎಸ್‌ಎಸ್ ಟ್ರಸ್ಟ್, ವಿಟಿಯು ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಗರದ ಏಟ್ರಿಯಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಸೃಷ್ಟಿ ಇನ್ನೋವೇಷನ್ ಎಕ್ಸ್‌ಚೇಂಚ್’ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆಯು (ಎಐ) ಇಡೀ ಜಗತ್ತನ್ನು ಮುಂದೆ ಕೊಂಡೊಯ್ಯುತ್ತಿದೆ. ಈಗಾಗಲೇ ವ್ಯಾಪಾರ, ವ್ಯವಹಾರ, ಆರ್ಥಿಕ ಮಾರುಕಟ್ಟೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎಐ ಅಳವಡಿಕೆಯಾಗುತ್ತಿದೆ. ಹೂಡಿಕೆ, ವಿಶ್ಲೇಷಣೆಯಂತಹ ಕಾರ್ಯಗಳಲ್ಲಿ ಎಐ ಮೂಲಕ ನಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ಷೇತ್ರಗಳಿಗೆ ವಿಸ್ತರಣೆ ಆಗುತ್ತದೆ ಎಂದರು.
ಆದರೆ, ಕೃತಕ ಬುದ್ಧಿಮತ್ತೆ ಶೇ.100ರಷ್ಟು ಮನುಷ್ಯನಂತೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಅನೇಕ ಅಡೆತಡೆಗಳು ಬರುತ್ತವೆ. ಈಗ ಮಾರುಕಟ್ಟೆಯಲ್ಲಿ ಎಐ ಬಳಕೆಯಾಗುತ್ತಿದೆ. ಆದರೆ, ಇಲ್ಲಿ ಆತ್ಮಸಾಕ್ಷಿಯೂ ಒಂದು ಪ್ರಮುಖ ಅಂಶ. ಎಐನಿಂದ ಆತ್ಮಸಾಕ್ಷಿ ನಿರೀಕ್ಷಿಸಲು ಸಾಧ್ಯವೇ? ಅದೇ ರೀತಿ ಮನುಷ್ಯದಲ್ಲಿ ಒಳ್ಳೆಯದು, ಕೆಟ್ಟದ್ದು, ಉತ್ತಮ, ಅನುಭೂತಿ, ಭವಿಷ್ಯಕ್ಕೆ ಸಂಬಂಧಿಸಿದ ಆಲೋಚನೆಗಳು ಸೇರಿದಂತೆ ಮನುಷ್ಯನಲ್ಲಿ ಮಾತ್ರವೇ ಇರುವ ಮಾನವೀಯತೆಯ ಗುಣಗಳನ್ನು ಕೃತಕ ಬುದ್ಧಿಮತ್ತೆಯಿಂದ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.ಮನುಷ್ಯ ಎಐ ಅನ್ನು ತನ್ನ ಸೃಜನಶೀಲತೆ ಮತ್ತು ಜಾಣ್ಮೆ ವರ್ಧಿಸುವ ಸಾಧನವಾಗಿದೆ ಬಳಸಬೇಕೇ ಹೊರತು. ಸಂಪೂರ್ಣ ಅದರ ಮೇಲೆ ಅವಲಂಬನೆಯಾಗಬಾರದು. ಇದರಿಂದ ಮಾನವೀಯ ಗುಣಗಳು ಸಮಾಜದಿಂದ ಮರೆಯಾಗುವ ಆತಂಕವಿದೆ. ಒಮ್ಮೆ ಮಾನವೀಯ ಗುಣಗಳನ್ನು ಮನುಷ್ಯ ಕಳೆದುಕೊಂಡರೆ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂದರು.
ಎಐಸಿಟಿ ಅಧ್ಯಕ್ಷ ಸೀತಾರಾಮ್ ಮಾತನಾಡಿ, ಇದು ಸ್ಟಾರ್ಟ್ ಅಪ್‌ಗಳ ಕಾಲ. 25 ಸಾವಿರಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ಗಳೊಂದಿಗೆ ಭಾರತವು ಮುಂದಡಿ ಇಡುತ್ತಿದ್ದು ಜನರ ಜೀವನೋಪಾಯವನ್ನು ಪೋಷಿಸುವಂತಹ ಕ್ರಾಂತಿಕಾರಿ ಅನ್ವೇಷಣೆಗಳು ನಡೆಯಬೇಕು ಎಂದರು.ಕಾರ್ಯಕ್ರಮದಲ್ಲಿ ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಶ್, ಪ್ರಾಧ್ಯಾಪಕ ಪ್ರೊ.ಗಣೇಶನ್ ಕನ್ನಬಿರನ್, ಯುವಕ ಸಂಘದ ವಶವಂತ, ಸೃಷ್ಟಿ ಸಂಚಾಲಕ ನಿಶ್ಚಿತ್ ಬಂಟ್ವಾಳ, ಎಬಿವಿಪಿ ರಾಷ್ಟ್ರೀಯ ಸಂಯೋಜಕ ಕಾರ್ಯದರ್ಶಿ ಎಸ್.ಬಾಲಕೃಷ್ಣ, ದಕ್ಷಿಣ ಪ್ರಾಂತ ಅಧ್ಯಕ್ಷ ಡಾ.ಸತೀಶ್ ಉಪಸ್ಥಿತರಿದ್ದರು.