ಕನ್ನಡಪ್ರಭ ವಾರ್ತೆ ಚಾಮರಾಜನಗರದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀ ಮಹಿರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆ. 8, 9 ರಂದು ಎರಡು ದಿನಗಳ ಕಾಲ ನಡೆಯುವ 6ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಿ ಕೊಡುವಂತೆ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮನವಿ ಮಾಡಿದರು.ನಗರದ ಶ್ರೀವಾಲ್ಮೀಕಿ ಭವನದಲ್ಲಿ ಮಹರ್ಷಿವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಶ್ರೀವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿ, ವಾಲ್ಮೀಕಿ ಜಾತ್ರಾ ಮಹೋತ್ಸವದ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಇಡೀ ವಿಶ್ವಕ್ಕೆ ಸಂದೇಶ, ಮಾರ್ಗದರ್ಶನ ಕೊಟ್ಟ ದೇಶ ಭಾರತ. ರತ್ನಾಕರ ತನ್ನ ಬದುಕಿನಲ್ಲಿ ಪರಿವರ್ತನೆಯಾಗುವ ಮೂಲಕ ಭಗವಂತನ ನಾಮಸ್ಮರಣೆ ಮಾಡುವ ಮೂಲಕವಾಗಿ ತನ್ನ ಬದುಕನ್ನು ಸಾರ್ಥಕ ಪಡಿಸಿಕೊಂಡಿರುವ ಮಹಾನ್ ತಪಸ್ವಿ ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿ ಅಕ್ಟೋಬರ್ ತಿಂಗಳಲ್ಲಿ ಸಂಭ್ರಮ, ಸಡಗರದಿಂದ ಸರ್ಕಾರದೊಂದಿಗೆ ಸಮಾಜದವರು ಕೈಜೋಡಿಸಿ ಕಾರ್ಯಕ್ರಮ ಯಶ್ವಸಿಗೊಳಿಸಿದ ಜಿಲ್ಲೆಯ ಜನತೆಗೆ ಶ್ರೀಮಠದ ಪರವಾಗಿ ತುಂಬುಹೃದಯ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಎಸ್‌ಸಿ, ಎಸ್‌ಟಿ ಗಳನ್ನು ಪಟ್ಟಿ ಮಾಡಿ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿ ಸಂವಿಧಾನ ಬದ್ದ ಹಕ್ಕುಗಳನ್ನು ಕೊಟ್ಟಿದ್ದಾರೆ. ಆದರೆ ನಮ್ಮನ್ನು ಆಳುವ ಸರ್ಕಾರಗಳು ಚುನಾವಣೆ ಬಂದಾಗ ಮಾತ್ರ ಎಸ್‌ಸಿ, ಎಸ್‌ಟಿ ಮತಗಳನ್ನು ಪಡೆದು ಅಧಿಕಾರ ಬಂದ ಮೇಲೆ ನಮ್ಮ ಹಿತವನ್ನು ಮರೆತು ಬಿಡುತ್ತಾರೆ. ಆ ಕಾರಣಕ್ಕಾಗಿ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡುವ ಮೂಲಕವಾಗಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕಾಗಿ ಸಮಾಜದ ಜಾಗೃತಿಗಾಗಿ ಶ್ರೀಮಠದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ಆಚರಣೆ ಮಾಡಲಾಗುತ್ತದೆ ಎಂದರು.ಕೇಂದ್ರ ಸರ್ಕಾರಕ್ಕೆ ಅಭಿನಂದನೆ : ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ವಿಶ್ವ ಋಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಿರುವುದಕ್ಕೆ ಶ್ರೀಗಳು ಶ್ರೀಮಠ, ಸಮುದಾಯದ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಶ್ರೀವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗಳ ಹೋರಾಟ ಫಲವಾಗಿ ಎಸ್‌ಸಿ, ಎಸ್ಟಿ ಮೀಲಾಸತಿ ಹೆಚ್ಚಳವಾಗಿದೆ. ಶ್ರೀಗಳು ಸಮುದಾಯದ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಗೆ ಸಕಲ ರೀತಿಯಲ್ಲೂ ಜಿಲ್ಲೆಯ ನಾಯಕ ಸಮುದಾಯದಿಂದ ಸಹಕಾರ ನೀಡಲಾಗುವುದು ಎಂದರು.ಜನಾಂಗದ ಮುಖಂಡ ಪು.ಶ್ರೀನಿವಾಸನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬುವ ಕೆಲಸ ಮಾಡಬೇಕಿದೆ ಎಂದರು.
ಸಭೆಯಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಜಿಪಂ ಮಾಜಿ ಸದಸ್ಯರಾದ ಎಸ್.ಸೋಮನಾಯಕ, ರಮೇಶ್, ತಾಪಂ ಮಾಜಿ ಅಧ್ಯಕ್ಷ ಎಚ್.ವಿ.ಚಂದ್ರು, ಮುಖಂಡರಾದ ಕಪಿನಿನಾಯಕ, ಕೃಷ್ಣನಾಯಕ, ಗಿರೀಶ್, ಅಮಚವಾಡಿ ಮಹೇಂದ್ರ, ಆರ್.ಸುಂದರ್, ನಾಗೇಂದ್ರ, ಶಿವುವಿರಾಟ್ ತಾಲೂಕಿನ ನಾನಾ ಗ್ರಾಮಗಳ ಸಮುದಾಯದ ಮುಖಂಡರು ಭಾಗವಹಿಸಿದ್ದರು.