ಬ್ಯಾಂಕ್‌ಗಳಲ್ಲಿ ಸಣ್ಣ ಮೌಲ್ಯದ ನೋಟು, ನಾಣ್ಯದ ಚಿಲ್ಲರೆ ಕೊರತೆ: ವ್ಯವಹಾರಕ್ಕೆ ತೊಂದರೆ

| Published : Oct 28 2025, 01:00 AM IST

ಬ್ಯಾಂಕ್‌ಗಳಲ್ಲಿ ಸಣ್ಣ ಮೌಲ್ಯದ ನೋಟು, ನಾಣ್ಯದ ಚಿಲ್ಲರೆ ಕೊರತೆ: ವ್ಯವಹಾರಕ್ಕೆ ತೊಂದರೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಂಕ್‌ಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಚಿಲ್ಲರೆ ನಾಣ್ಯಗಳ ಹಾಗೂ ನೋಟುಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಈ ಪರಿಸ್ಥಿತಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ವ್ಯಾಪಾರ-ವ್ಯವಹಾರಗಳ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಜನರಿಗೆ ದಿನನಿತ್ಯದ ಖರೀದಿಗಳಲ್ಲಿ ತೊಂದರೆ ಉಂಟಾಗಿದೆ.

ರಾಂ ಅಜೆಕಾರು

ಕಾರ್ಕಳ: ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಚಿಲ್ಲರೆ ನಾಣ್ಯಗಳ ಹಾಗೂ ನೋಟುಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಈ ಪರಿಸ್ಥಿತಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ವ್ಯಾಪಾರ-ವ್ಯವಹಾರಗಳ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಜನರಿಗೆ ದಿನನಿತ್ಯದ ಖರೀದಿಗಳಲ್ಲಿ ತೊಂದರೆ ಉಂಟಾಗಿದೆ.ಪಿಗ್ಮಿ ಸಂಗ್ರಾಹಕರಲ್ಲಿ ಜನರ ದುಂಬಾಲು:ಪಿಗ್ಮಿ ಸಂಗ್ರಾಹಕರು ಕೆಲ ಖಾಸಗಿ ಹಾಗೂ ಸಹಕಾರಿ ಬ್ಯಾಂಕ್‌ಗಳಿಗೆ ದಿನನಿತ್ಯದ ಪಿಗ್ಮಿ ಸಂಗ್ರಹಣೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ವ್ಯಾಪಾರಿಗಳು ಚಿಲ್ಲರೆ ಹಣಕ್ಕಾಗಿ ಇವರನ್ನು ಸಂಪರ್ಕಿಸುತ್ತಿದ್ದು, ಅವರ ಬಳಿ ಜನರ ದುಂಬಾಲು ಹೆಚ್ಚಾಗಿದೆ. ಆದರೆ ಕೆಲ ಸೊಸೈಟಿಗಳು ಈಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವ್ಯವಹಾರ ನಿರ್ವಹಿಸುತ್ತಿರುವುದರಿಂದ, ಅಲ್ಲಿ ಸಹ ಚಿಲ್ಲರೆ ನಗದು ಪೂರೈಕೆ ಕಡಿಮೆಯಾಗಿದೆ.ಪರಿಣಾಮವಾಗಿ ಬಸ್‌ಗಳಲ್ಲಿ ಸಂಚರಿಸುವ ಮಕ್ಕಳು ಹಾಗೂ ಸಾಮಾನ್ಯ ಪ್ರಯಾಣಿಕರು ಚಿಲ್ಲರೆ ಸಿಗದೆ ಪರದಾಡುವ ಸ್ಥಿತಿ ಎದುರಿಸುತ್ತಿದ್ದಾರೆ.ಬ್ಯಾಂಕ್ ಕೌಂಟರ್‌ಗಳಲ್ಲಿ ಚಿಲ್ಲರೆ ಇಲ್ಲ: ಬ್ಯಾಂಕ್ ಕೌಂಟರ್‌ಗಳಲ್ಲಿ, ಎಟಿಎಂಗಳಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಚಿಲ್ಲರೆ ಸಿಗದ ಸ್ಥಿತಿ ಉಂಟಾಗಿದೆ. ಬ್ಯಾಂಕ್‌ಗಳು ದೊಡ್ಡ ಮೊತ್ತದ ನೋಟುಗಳನ್ನು ನೀಡುತ್ತಿದ್ದರೂ, ಸಣ್ಣ ನೋಟುಗಳ ಪೂರೈಕೆ ಇಲ್ಲದಿರುವುದರಿಂದ ಸಾರ್ವಜನಿಕರು ದಿನನಿತ್ಯದ ವ್ಯವಹಾರದಲ್ಲಿ ಪರದಾಡುತ್ತಿದ್ದಾರೆ. ಕೆಲವರು ನೇರವಾಗಿ ಬ್ಯಾಂಕ್ ಅಧಿಕಾರಿಗಳೇ ‘ಚಿಲ್ಲರೆ ಇಲ್ಲ’ ಎಂದು ಹೇಳುತ್ತಿರುವುದನ್ನು ಕೇಳಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ವ್ಯಾಪಾರಿಗಳ ಕೂಗು:ನಗರ ಮತ್ತು ಪಟ್ಟಣಗಳ ಅಂಗಡಿಗಳು, ಹೋಟೆಲ್‌ಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಚಿಲ್ಲರೆ ಕೊರತೆಯ ಪರಿಣಾಮ ಸ್ಪಷ್ಟವಾಗಿದೆ. ಪಾನ್ ಶಾಪ್‌, ಟೀ ಅಂಗಡಿ, ಹೋಟೆಲ್ ಮುಂತಾದ ಸಣ್ಣ ವ್ಯಾಪಾರಗಳಲ್ಲಿ ಗ್ರಾಹಕರು ₹100 ಅಥವಾ ₹500 ನೋಟು ನೀಡಿದಾಗ ಚಿಲ್ಲರೆ ನೀಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.ಕೆಲವರು ಗ್ರಾಹಕರಿಗೆ ಬಾಕಿ ಮೊತ್ತವನ್ನು ನೀಡಲು ‘ನಂತರ ಕೊಡುತ್ತೇನೆ’ ಅಥವಾ ‘ಯುಪಿಐ ಮಾಡಿ’ ಎಂದು ವಿನಂತಿಸುವ ಪರಿಸ್ಥಿತಿ ಬಂದಿದೆ.ದಿನದ ಆರಂಭದಲ್ಲೇ ಬ್ಯಾಂಕ್‌ಗೆ ಹೋಗಿ ಚಿಲ್ಲರೆ ಕೇಳಿದರೂ, 10 ಅಥವಾ 20 ನೋಟು ಸಿಗುವುದೇ ಕಷ್ಟ. ಒಂದು ದಿನದ ವ್ಯಾಪಾರ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ ಎಂದು ತರಕಾರಿ ವ್ಯಾಪಾರಿ ಸಂತೋಷ್ ಶೆಟ್ಟಿ ಹೇಳಿದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್‌ ಹೇಳುವುದೇನು?

ಬ್ಯಾಂಕ್ ಅಧಿಕಾರಿಗಳು ಈ ಸಮಸ್ಯೆಗೆ ಹಲವು ಕಾರಣಗಳನ್ನು ಸೂಚಿಸಿದ್ದಾರೆ. ಮುಖ್ಯವಾಗಿ, ಆರ್‌ಬಿಐನಿಂದ ಸಣ್ಣ ನೋಟುಗಳ ಪೂರೈಕೆ ತಾತ್ಕಾಲಿಕವಾಗಿ ಕಡಿಮೆಯಾಗಿದೆ. ಜೊತೆಗೆ, ಡಿಜಿಟಲ್ ಪಾವತಿ ವ್ಯವಸ್ಥೆಗಳ ಬಳಕೆ ಹೆಚ್ಚಾದ ಕಾರಣ, ಜನರಿಂದ ಬ್ಯಾಂಕ್‌ಗಳಿಗೆ ಚಿಲ್ಲರೆ ನೋಟುಗಳು ಮರುಪ್ರವೇಶವಾಗುತ್ತಿಲ್ಲ. ಇದೇ ಸಮಯದಲ್ಲಿ ₹20 ಮತ್ತು ₹50 ಕಾಯಿನ್‌ಗಳೂ ಇದ್ದರೂ, ಅವುಗಳನ್ನು ಸಾಗಿಸಲು ಹಾಗೂ ವಿನಿಮಯದಲ್ಲಿ ಬಳಸಲು ಸಾರ್ವಜನಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಡಿಜಿಟಲ್ ಪಾವತಿ ಪ್ರಭಾವ:

ನಗರ ಮತ್ತು ಪಟ್ಟಣಗಳಲ್ಲಿ ಯುಪಿಐ, ಗೂಗಲ್ ಪೇ, ಫೋನ್ ಪೇ ಮುಂತಾದ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳು ವ್ಯಾಪಕವಾಗಿ ಬಳಕೆಯಲ್ಲಿವೆ. ಇದರ ಪರಿಣಾಮವಾಗಿ ಕಾಗದದ ನೋಟುಗಳ ಬಳಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.1, 2, 5 ಹಾಗೂ 10 ರು.ಗಳ ನಾಣ್ಯಗಳ ಬಳಕೆ ಕೂಡ ಈಗ ಕಡಿಮೆಯಾಗಿದೆ. ಜನರು ನಾಣ್ಯಗಳನ್ನು ಬ್ಯಾಂಕ್‌ಗೆ ಮರುಜಮಾ ಮಾಡುವ ಬದಲು ಸಂಗ್ರಹಿಸಿಡುವುದರಿಂದ ಅವು ಚಲಾವಣೆಯಲ್ಲೇ ಕಾಣಿಸುತ್ತಿಲ್ಲ.ನಮ್ಮ ಹೋಟೆಲ್‌ಗೆ ದಿನಕ್ಕೆ ನೂರಕ್ಕೂ ಹೆಚ್ಚು ಗ್ರಾಹಕರು ಬರುತ್ತಾರೆ. 50 ಬಿಲ್‌ಗೆ 500 ನೋಟು ಕೊಟ್ಟರೆ ಬಾಕಿ ಕೊಡಲು ಆಗುವುದಿಲ್ಲ. ಕೆಲವೊಮ್ಮೆ ಗ್ರಾಹಕರು ಬಿಲ್ ಬಾಕಿ ಇಟ್ಟು ಹೋಗುತ್ತಾರೆ.

-ಲಕ್ಷ್ಮಣ ನಾಯಕ್, ಹೋಟೆಲ್ ಮಾಲೀಕ

----------------ಸರ್ಕಾರದ ಹಣ ವಿನಿಮಯ ಪೂರೈಕೆ ಕೇಂದ್ರಗಳಿಂದ ಚಿಲ್ಲರೆ ನಾಣ್ಯಗಳು ಸಮಯಕ್ಕೆ ಸಿಗುತ್ತಿಲ್ಲ. ನಾವು ಬೇಡಿಕೆ ಸಲ್ಲಿಸಿದರೂ ಎಲ್ಲ ಶಾಖೆಗಳಿಗೆ ಸಮ ಪ್ರಮಾಣದಲ್ಲಿ ಹಂಚಿಕೆ ಆಗುತ್ತಿಲ್ಲ. ಗ್ರಾಹಕರು ದೊಡ್ಡ ನೋಟುಗಳಲ್ಲಿ ಹಣ ಎತ್ತುತ್ತಾರೆ, ಅದನ್ನು ಪುನಃ ಚಿಲ್ಲರೆ ರೂಪದಲ್ಲಿ ವಿತರಿಸಲು ಸಾಧ್ಯವಾಗುತ್ತಿಲ್ಲ.

-ಹೆಸರು ಹೇಳಲು ಇಚ್ಛಿಸದ ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿ