ಪ್ರಿಯಾಂಕ್‌ರಿಂದ ಅಸ್ಸಾಮಿ ಜನತೆಗೆ ಅವಮಾನ : ಸಿಎಂ ಶರ್ಮ

| N/A | Published : Oct 28 2025, 05:10 AM IST

Assam CM Himanta Biswa Sarma

ಸಾರಾಂಶ

 ‘ಅಸ್ಸಾಂನಲ್ಲಿ ಯಾವ ಪ್ರತಿಭೆಯಿದೆ ಎಂದು ಸೆಮಿಕಂಡಕ್ಟರ್‌ ಕಂಪನಿಗಳು ಅಲ್ಲಿ ಹೂಡಿಕೆ ಮಾಡುತ್ತಿವೆ?’ ಎಂದು ವ್ಯಂಗ್ಯವಾಡಿದ್ದ ಕರ್ನಾಟಕದ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆಗೆ ತಿರುಗೇಟು ನೀಡಿರುವ ಸಿಎಂ ಹಿಮಂತ್‌ ಬಿಸ್ವ ಶರ್ಮ 

 ಗುವಾಹಟಿ: ‘ಅಸ್ಸಾಂನಲ್ಲಿ ಯಾವ ಪ್ರತಿಭೆಯಿದೆ ಎಂದು ಸೆಮಿಕಂಡಕ್ಟರ್‌ ಕಂಪನಿಗಳು ಅಲ್ಲಿ ಹೂಡಿಕೆ ಮಾಡುತ್ತಿವೆ?’ ಎಂದು ವ್ಯಂಗ್ಯವಾಡಿದ್ದ ಕರ್ನಾಟಕದ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆಗೆ ತಿರುಗೇಟು ನೀಡಿರುವ ಸಿಎಂ ಹಿಮಂತ್‌ ಬಿಸ್ವ ಶರ್ಮ, ‘ಅವರೊಬ್ಬ ಶತಮೂರ್ಖ. ಅವರ ಹೇಳಿಕೆ ಅಸ್ಸಾಂನ ಯುವಜನತೆಗೆ ಮಾಡಿದ ಅವಮಾನವಾಗಿದ್ದು, ಪ್ರಿಯಾಂಕ್‌ ವಿರುದ್ಧ ಕೇಸ್‌ ದಾಖಲಿಸುವ ಕುರಿತು ಚಿಂತನೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

‘ಅಸ್ಸಾಂನಲ್ಲಿ ಸ್ಪರ್ಧಾತ್ಮಕ ಯುವಜನತೆ ಇಲ್ಲ ಎಂದು ಪ್ರಿಯಾಂಕ್‌ ಹೇಳಿಕೆ ನೀಡಿದ್ದಾರೆ. ಇದು ಅಸ್ಸಾಂನ ಯುವಕರು ಹಾಗೂ ಶಿಕ್ಷಿತರಿಗೆ ಮಾಡಿದ ಅವಮಾನವಾಗಿದೆ. ಕಾಂಗ್ರೆಸ್‌ ಪಕ್ಷ ಪ್ರಿಯಾಂಕ್‌ ಖರ್ಗೆ ಹೇಳಿಕೆಯನ್ನು ಈವರೆಗೂ ಖಂಡಿಸಿಲ್ಲ’ ಎಂದು ಬಿಸ್ವ ವಾಗ್ದಾಳಿ ನಡೆಸಿದ್ದಾರೆ.

ಅಸ್ಸಾಮಿಗರಿಂದ ಬೆಂಗಳೂರು ಐಟಿಗೆ ಬಲ:

ಇನ್ನು ಪ್ರಿಯಾಂಕ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಸಚಿವ ಬಿಮಲ್‌ ಬೋರಾ, ‘ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಬಹುಪಾಲು ಜನ ಅಸ್ಸಾಮಿನವರಿದ್ದಾರೆ. ಅವರು ನಿಮ್ಮ ಆರ್ಥಿಕತೆಗೆ ಬಲ ತುಂಬುತ್ತಿದ್ದಾರೆ. ಯುವಕರು ಅಸ್ಸಾಂ ತೊರೆಯುತ್ತಿದ್ದಾರೆಂದರೆ ಅದಕ್ಕೆ ಕಾರಣ, ನಿಮ್ಮ (ಕಾಂಗ್ರೆಸ್‌) ಅವಧಿಯ ಭಷ್ಟಾಚಾರ ಹಾಗೂ ದುರಾಡಳಿತ’ ಎಂದು ತಿವಿದಿದ್ದಾರೆ. ಜತೆಗೆ, ‘ನಿಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳದ ಹೊರತು ಇಂಥ ಹತಾಶ ನುಡಿಗಳಿಂದ ಫಲವಿಲ್ಲ’ ಎಂದು ಸೂಚಿಸಿದ್ದಾರೆ.

ಬಿಜೆಪಿ ಕೂಡ ಕಿಡಿ:

‘5 ದಶಕಗಳ ಖರ್ಗೆ ಸಾಮ್ರಾಜ್ಯದ ಕಠಿಣ ಪರಿಶ್ರಮದ ಫಲವಾಗಿ ಅವರ ಸ್ವಂತ ಜಿಲ್ಲೆಯಾದ ಕಲಬುರಗಿಯು ದಕ್ಷಿಣ ಭಾರತದಲ್ಲೇ ಬಡ ಜಿಲ್ಲೆ ಎಂಬ ಪಟ್ಟಕ್ಕೆ ಪಾತ್ರವಾಗಿದೆ. ರಾಷ್ಟ್ರೀಯ ಸರಾಸರಿಗಿಂತ ಅಲ್ಲಿನ ಜನರ ತಲಾ ಆದಾಯ ತೀವ್ರ ಕಡಿಮೆ ಇದೆ. ತಮ್ಮದೇ ಮನೆಯನ್ನು ಮೇಲೆತ್ತಲಾಗದವರು ಆಡಳಿತ ಮತ್ತು ಅಭಿವೃದ್ಧಿ ವಿಚಾರದಲ್ಲಿ ಬೇರೆಯವರಿಗೆ ಪಾಠ ಮಾಡುತ್ತಿದ್ದಾರೆಂದು’ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದೆ. ಜತೆಗೆ, ‘ಗುಜರಾತ್‌, ಅಸ್ಸಾಂನಂಥ ರಾಜ್ಯಗಳಿಗೆ ಅಭಿವೃದ್ಧಿಯ ಪಾಠ ಮಾಡುವ ಮೊದಲು ತಮ್ಮ ಮನೆಯ ಹಿತ್ತಲನ್ನು ಸರಿಮಾಡಿಕೊಳ್ಳಬೇಕಿದೆ’ ಎಂದು ತಿರುಗೇಟು ನೀಡಿದೆ.

ಇದು ಯುವಕರಿಗೆ ಮಾಡಿದ ಅವಮಾನ, ಈ ಬಗ್ಗೆ ಕೇಸು: ಹಿಮಂತ

ಅಸ್ಸಾಮಿಗರಿಂದಲೇ ಬೆಂಗಳೂರಿನ ಐಟಿ ಕ್ಷೇತ್ರ ಬೆಳವಣಿಗೆ: ಸಚಿವ

ಹತಾಶ ಹೇಳಿಕೆ ಕೊಡುವ ಬದಲು ಸಮಸ್ಯೆ ಸರಿಪಡಿಸಿ: ತಿರುಗೇಟು

Read more Articles on