ಸಾರಾಂಶ
‘ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ 5 ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ಹೈಕಮಾಂಡ್ ತೀರ್ಮಾನವೇ ಅಂತಿಮ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ, ಕೊಂಚ ಭಿನ್ನ ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ.
ಮಂಗಳೂರು : ‘ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ 5 ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ಹೈಕಮಾಂಡ್ ತೀರ್ಮಾನವೇ ಅಂತಿಮ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ, ಈ ಮೂಲಕ ಇತ್ತೀಚೆಗೆ ಮೈಸೂರಿನಲ್ಲಿ ತಾವೇ ಹೇಳಿದ್ದ ‘5 ವರ್ಷದವರೆಗೂ ನಾನೇ ಸಿಎಂ’ ಎಂದು ಹೇಳಿಕೆಗಿಂತ ಕೊಂಚ ಭಿನ್ನ ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದಾಗ ಅವರಿಗೆ, ‘ಮುಖ್ಯಮಂತ್ರಿ ಆಗಿ 5 ವರ್ಷ ನೀವೇ ಮುಂದುವರಿಯುತ್ತಿರಾ’ ಎಂಬ ಪ್ರಶ್ನೆ ಪತ್ರಕರ್ತರಿಂದ ತೂರಿ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ..’ ಎಂದು ಚುಟುಕಾಗಿ ಉತ್ತರಿಸಿದರು.
ಇದಲ್ಲದೆ, ಇನ್ನು ಮುಖ್ಯಮಂತ್ರಿ ರೇಸ್‌ನಲ್ಲಿ ಹಲವು ನಾಯಕರಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಪ್ರಜಾಪ್ರಭುತ್ವದಲ್ಲಿ ಸ್ಪರ್ಧೆಯಲ್ಲಿ ಇರುವವರನ್ನು ತಪ್ಪಿಸಲು ಆಗಲ್ಲ. ಸ್ಪರ್ಧೆಯಲ್ಲಿ ಇರಬೇಡಿ ಎಂದು ಹೇಳಲೂ ಆಗದು. ಪ್ರಜಾಪ್ರಭುತ್ವದಲ್ಲಿ ಕೇಳೋದು ಅವರ ಹಕ್ಕು. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ’ ಎಂದು ಸಿದ್ದರಾಮಯ್ಯ ಹೇಳಿದರು.
ಹೈಕಮಾಂಡ್ ನಿರ್ಧಾರದ ಮೇಲೆ ನಿಂತಿದೆ ಎಂದು ಪರೋಕ್ಷವಾಗಿ ಸುಳಿವು
ಈ ಮೂಲಕ ತಮ್ಮ ಗಾದಿಯ ಭವಿಷ್ಯವು ಎಲ್ಲವೂ ಹೈಕಮಾಂಡ್ ನಿರ್ಧಾರದ ಮೇಲೆ ನಿಂತಿದೆ ಎಂದು ಪರೋಕ್ಷವಾಗಿ ಸುಳಿವು ನೀಡಿದರು ಹಾಗೂ ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಸೂಚನೆ ಕೊಟ್ಟರು. ಸಿಎಂ ಅವರ ಈ ಹೇಳಿಕೆ ಎಂಬ ಚರ್ಚೆ ಸಾರ್ವಜನಿಕರಲ್ಲಿ ಹುಟ್ಟುವಂತೆ ಮಾಡಿದೆ.
ಸಿಎಂ ಹುದ್ದೆ 2.5 ವರ್ಷಗಳ ಮಟ್ಟಿಗೆ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮಧ್ಯೆ ಹಂಚಿಕೆ ಆಗಿದೆ ಎಂಬ ಊಹಾಪೋಹ ಕೆಲವು ತಿಂಗಳಿಂದ ಇದೆ. ಈ ಹಿಂದೆ ಈ ವಿಷಯ ಮುನ್ನೆಲೆಗೆ ಬಂದಾಗ ಸಿದ್ದರಾಮಯ್ಯ ಅವರು ‘ನಾನೇ ಉಳಿದ ಅವಧಿಗೂ ಮುಖ್ಯಮಂತ್ರಿ. ಅಧಿಕಾರ ಹಸ್ತಾಂತರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ’ ಎಂದು ಗುಡುಗಿದ್ದರು. ಆ ಮೂಲಕ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟವರಿಗೆ ಎಚ್ಚರಿಕೆ ನೀಡುವ ಮೂಲಕ ಪಕ್ಷದಲ್ಲಿ ಭುಗಿಲೆದ್ದಿದ್ದ ಸಿಎಂ ಬದಲಾವಣೆಯ ಮಾತನ್ನು ತಣ್ಣಗಾಗಿಸಿದ್ದರು.
ಸಿಎಂ ಹೇಳಿದ ಮೇಲೆ ಅದರಂತೆ ನಾವು ಕೇಳ್ತೇವೆ: ಶಿವಕುಮಾರ್
ಬೆಂಗಳೂರು : ‘ಹೈಕಮಾಂಡ್ ಒಪ್ಪಿದ್ರೆ ನಾನೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ ಮೇಲೆ ಮುಗಿಯಿತು. ಅವರು ಹೇಗೆ ಹೇಳುತ್ತಾರೋ ಅದರಂತೆ ನಾವು ಕೇಳುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಸೋಮವಾರ ದೆಹಲಿಯಿಂದ ವಾಪಸಾದ ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿ ಅವರು ಹೇಳಿದ ಮೇಲೆ ಮುಗಿಯಿತು. ಅವರು ಹೇಳಿದ ಮೇಲೆ ಇನ್ನೇನಿದೆ.
ಅವರು ಹೇಗೆ ಹೇಳುತ್ತಾರೆಯೋ ಹಾಗೆ ನಾವು ಕೇಳುತ್ತೇವೆ’ ಎಂದು ಹೇಳಿದರು.ಇನ್ನು ತಮ್ಮ ದೆಹಲಿ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿ, ‘ನಮ್ಮ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯೆ ಅಂಬಿಕಾ ಸೋನಿ ಅವರ ಮನೆಗೆ ಭೇಟಿ ನೀಡಿದ್ದೆ. ಅವರ ಪತಿ ತೀರಿಕೊಂಡಿದ್ದು, ಹೀಗಾಗಿ ಸಂತಾಪ ಸೂಚಿಸಲು ಹೋಗಿದ್ದೆ. ನಾನು ತಿಹಾರ್ ಜೈಲಿನಲ್ಲಿದ್ದಾಗ ನನ್ನನ್ನು ಭೇಟಿಯಾಗಲು ಸೋನಿಯಾಗಾಂಧಿ ಅವರೊಂದಿಗೆ ಅಂಬಿಕಾ ಸೋನಿ ಬಂದಿದ್ದರು. ನನಗೂ ಅವರು ಆತ್ಮೀಯರು. ನನ್ನನ್ನು ತಮ್ಮನಂತೆ ಕಂಡಿದ್ದರು. ಹೀಗಾಗಿ ಅವರನ್ನು ಭೇಟಿಯಾಗಲು ಹೋಗಿದ್ದೆ’ ಎಂದರು.
ಹೈಕಮಾಂಡ್ ಭೇಟಿಗೆ ದೆಹಲಿಗೆ ಹೋಗಿದ್ದೀರಿ ಎಂಬ ಚರ್ಚೆಯಾಗಿತ್ತಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿ, ‘ನಾನು ದೆಹಲಿಗೆ ಹೋಗಿದ್ದ ಕಾರಣದ ಬಗ್ಗೆ ಮಾತ್ರ ತಿಳಿಸಬಲ್ಲೆ. ಯಾವ ಕೆಲಸಕ್ಕೆ ಹೋಗಿದ್ದೆ ಎಂಬುದು ಹೇಳಿದ್ದೇನೆ. ಹೈಕಮಾಂಡ್ ಭೇಟಿ ಬಗ್ಗೆ ಮಾಧ್ಯಮ, ಸಾರ್ವಜನಿಕರು ಏನು ಬೇಕಾದರೂ ಚರ್ಚೆ ಮಾಡಿಕೊಳ್ಳಲಿ. ನನಗೆ ಅದು ಸಂಬಂಧ ಪಡದ ವಿಚಾರ’ ಎಂದು ತಿಳಿಸಿದರು.ಇದಕ್ಕೂ ಮುನ್ನ ಬೆಳಗ್ಗೆ, ‘ಡಿಕೆಶಿಗೆ ರಾಹುಲ್ ಗಾಂಧಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಭೇಟಿ ಮೊಟಕುಗೊಳಿಸಿ ಅರ್ಧಕ್ಕೇ ಬೆಂಗಳೂರಿಗೆ ಮರಳಿದರು’ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.


;Resize=(128,128))
;Resize=(128,128))
;Resize=(128,128))