ಕನ್ನಡಪ್ರಭ ವಾರ್ತೆ ಹಾಸನ
ಭೈರವೈಕ್ಯ, ಯುಗಯೋಗಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ೧೨ನೇ ವರ್ಷದ ಪುಣ್ಯಾರಾಧನಾ ಕಾರ್ಯಕ್ರಮವು ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಪ್ರಾತಃಕಾಲ ೬ ಗಂಟೆಗೆ ಮಠದ ಆವರಣದಲ್ಲಿರುವ ಮಹಾಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗೋ ಪೂಜೆ ನೆರವೇರಿಸುವ ಮೂಲಕ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ೧೨ನೇ ಪುಣ್ಯಾರಾಧನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುಗಯೋಗಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪುತ್ಥಳಿಯನ್ನು ಶ್ರೀ ಮಠದ ಆವರಣದಿಂದ ಎಂ. ಜಿ ರಸ್ತೆಯ ಮೂಲಕ ಮುತ್ತಿನಪಲ್ಲಕ್ಕಿಯಲ್ಲಿ ಉತ್ಸವದ ಮೂಲಕ ಆದಿಚುಂಚನಗಿರಿ ಸಮುದಾಯ ಭವನದವರೆಗೂ ನೂರಾರು ಸದ್ಭಕ್ತರೊಡನೆ ಮೆರವಣಿಗೆಯಲ್ಲಿ ತರಲಾಯಿತು.
ಪುಣ್ಯಾರಾಧನಾ ವಿಧಿ ವಿಧಾನಗಳು ಶ್ರೀ ಶಂಭುನಾಥ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿದವು. ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪುತ್ಥಳಿ ಎದುರು ನೈವೇದ್ಯ ಇಟ್ಟು ಅಷ್ಟಾವಧಾನ ಸೇವೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಿಂತಕ ಹಾಗೂ ಖ್ಯಾತ ವಾಗ್ಮಿ ಪ್ರೊ.ಕೃಷ್ಣೇಗೌಡ ಮಾತನಾಡಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು, ಏನು ಇಲ್ಲದರ ನಡುವೆ ಬಂದು ಎಲ್ಲವನ್ನು ಇದೇ ಮಾಡಿದವರು. ಅವರು ಚುಂಚನಗಿರಿ ಪೀಠಾರೋಹಣ ಮಾಡಿದಾಗ ಅಲ್ಲಿ ಇಲ್ಲ ಎಂಬುದೇ ಹೆಚ್ಚಿತ್ತು. ಅವರ ಸಂಕಲ್ಪದಿಂದಾಗಿ ಚುಂಚನಗಿರಿ ಚಿನ್ನದ ಗಿರಿಯಾಯಿತು ಎಂದರು.
ಕೆಲವರು ಬದುಕಿದ್ದಾಗಲೂ ಇಲ್ಲದಂತಿರುತ್ತಾರೆ. ಇನ್ನೂ ಕೆಲವರು ಭೂಮಿಯ ಮೇಲೆ ಇಲ್ಲದಿದ್ದರೂ ನಮ್ಮಗಳ ನಡುವೆಯೇ ಇರುತ್ತಾರೆ. ವಿರಳ ಪುಣ್ಯಾತ್ಮರು ಇಲ್ಲದಿದ್ದಾಗಲೇ ಹೆಚ್ಚು ಇರುತ್ತಾರೆ. ಅಂಥವರಲ್ಲಿ ನಮ್ಮ ಮಹಾಗುರು ಒಬ್ಬರು ಎಂದು ಸ್ಮರಿಸಿದರು.ಅವರ ಬಹುಮುಖಿಯಾದ ಸೇವೆ, ಶಿಕ್ಷಣ, ದಾಸೋಹ, ವನ್ಯ ಸಂಪತ್ತು ಹಾಗೂ ಭೂಮಿ ರಕ್ಷಣೆ ಕಾರ್ಯವನ್ನು ಸ್ವಾಮೀಜಿ ಅವರು ಈಶ ಸೇವೆ ಎಂದು ಮಾಡಿದರು. ಅಂತಹವರನ್ನು ಕೃತಜ್ಞತೆಯಿಂದ, ಭಕ್ತಿಪೂರ್ವಕವಾಗಿ ಸ್ಮರಣೆ ಮಾಡಿ, ಗೌರವ ಸಲ್ಲಿಸಬೇಕಿರುವುದು ಮನುಕುಲದ ಕೃತಾರ್ಥತೆ ಎಂದರು.ಈ ವೇಳೆ ವಿವಿಧ ಮಠಗಳ ಮಠಾಧೀಶರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು, ಮಠದ ಸದ್ಭಕ್ತರು,ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಶ್ರೀಗಳ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ, ಶಂಭುನಾಥ ಶ್ರೀಯವರ ಆಶೀರ್ವಾದ ಪಡೆದರು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು. ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿ, ಶ್ರೀ ಶಂಕರ ಭಜನಾ ಮಂಡಳಿ, ಶ್ರೀ ಶನೈಶ್ವರಸ್ವಾಮಿ ಭಜನಾ ಮಂಡಳಿ, ಶ್ರೀ ಮಾರುತಿ ಭಜನಾ ಮಂಡಳಿ, ಶ್ರೀ ಛಾಯಾಪುತ್ರ ಭಜನಾ ಮಂಡಳಿ ಸೇರಿದಂತೆ ವಿವಿಧ ಭಜನಾ ಮಂಡಳಿಯವರು ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಚಿಕ್ಕಬಳ್ಳಾಪುರ ಮಠದ ಮಂಗಳನಾಥ ಸ್ವಾಮೀಜಿ, ಶೃಂಗೇರಿಯ ಗುಣನಾಥ ಸ್ವಾಮೀಜಿ, ಮಂಗಳೂರಿನ ಧರ್ಮಪಾಲನಾಥ ಸ್ವಾಮೀಜಿ, ದಸರೀಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ, ಕಬ್ಬಳಿಯ ಶಿವಪುತ್ರನಾಥ ಸ್ವಾಮೀಜಿ, ಕೆಸವತ್ತೂರು ಮಠದ ಬಸವರಾಜೇಂದ್ರ ಸ್ವಾಮೀಜಿ, ಶ್ರೀ ಗುರುಮೂರ್ತಿ ಸಾಯಿ ಚರಣ ಗುರೂಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ಮಹಾರಾಷ್ಟ್ರದ ರಾಮಚಂದ್ರಪ್ಪ ಮೇತ್ರಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಸಾನಿಧ್ಯ ವಹಿಸಿದ್ದರು.ಶಾಸಕ ಸ್ವರೂಪ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಸ್ ಮುದ್ದೇಗೌಡ, ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ, ನಗರಸಭೆ ಮಾಜಿ ಅಧ್ಯಕ್ಷ ಡಾ.ಅನಿಲ್ ಕುಮಾರ್,ಶ್ರೀ ಮಠದ ಹುಣ್ಣಿಮೆ ಕಾರ್ಯಕ್ರಮದ ಸಂಚಾಲಕ ಎಚ್.ಬಿ ಮದನಗೌಡ, ಶ್ರೀ ಮಠದ ವ್ಯವಸ್ಥಾಪಕ ಚಂದ್ರಶೇಖರ್,ಕಸಾಪ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ,ಉದ್ಯಮಿ ಲಕ್ಷ್ಮೇಗೌಡ ಹಾಗೂ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಹಾಜರಿದ್ದರು.