
ಕನ್ನಡಪ್ರಭ ವಾರ್ತೆ, ತುಮಕೂರು
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಚರಕ ಚಾರಿಟೆಬಲ್ ಟ್ರಸ್ಟ್ ತುಮಕೂರು ವತಿಯಿಂದ ನಗರದ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪೂಜೆ, ಹೋಮ ಮಾಡಿಸುವವರು ನಾವೇ. ಹವನ ಮಾಡಿಸುವವರು ನಾವೇ. ಕಾಣಿಕೆ ಕೊಡುವುದು ನಾವೇ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವಾಸ್ತವ ಸತ್ಯವನ್ನು ಜನರಿಗೆ ಅರ್ಥ ಮಾಡಿಸಬೇಕು. ವಾಸ್ತವಿಕತೆಯಿಂದ ದೂರ ಹೋಗಬಾರದು. ವಾಸ್ತವದ ಸತ್ಯ ಸಂಗತಿಗಳನ್ನು ನಿರ್ಭೀತಿಯಿಂದ ಹೇಳಿ ಜನರಲ್ಲಿ ಅರಿವು ಮೂಡಿಸಬೇಕು. ಸತ್ಯ ಹೇಳುವುದನ್ನು ಎಲ್ಲ ಯುವಕರು ಕಲಿಯಬೇಕು. ಇತಿಹಾಸ ಅರಿಯದೆ ಇತಿಹಾಸ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿದರು.ನಮಗೆ ನಾವೇ ಕೆಳವರ್ಗ ಅಂತ ಯಾಕೆ ಹೇಳಿಕೊಳ್ಳಬೇಕು. ಈ ವಿಚಾರವನ್ನು ನಾನು ಒಪ್ಪುವುದಿಲ್ಲ. ನಾವು ಕೆಳವರ್ಗ ಮತ್ತು ಮೇಲ್ವರ್ಗ ಅಂತ ಹೇಳಿಕೊಳ್ಳುವುದರ ಬದಲು ಹಿಂದುಳಿದವರು ಮತ್ತು ಮುಂದುವರೆದವರು ಅಂತ ಹೇಳಿಕೊಳ್ಳಲಿ. ಯಾರೆಲ್ಲ ಬಡವರು ಇರುತ್ತಾರೆ. ಅಸಹಾಯಕರು ಇರುತ್ತಾರೆ. ದನಿ ಇಲ್ಲದವರು ಇರುತ್ತಾರೆ. ಶೋಷಿತ ಸಮುದಾಯ ಇರುತ್ತದೆ, ಅವರು ಯಾವತ್ತೂ ಕೂಡ ಇನ್ನೊಬ್ಬರಿಗೆ ಮೋಸ ಮಾಡುವಂತಹ, ಅನ್ಯಾಯ ಮಾಡುವಂತಹ, ಸುಳ್ಳು ಹೇಳುವಂತಹ ಕೆಲಸವನ್ನು ಮಾಡುವುದಿಲ್ಲ. ನಾವು ಬೇರೆಯವರಿಗಿಂತ ಬುದ್ದಿವಂತರಿದ್ದೇವೆ. ಹಾಗಾಗಿ ನಾವ್ಯಾಕೆ ಕೆಳವರ್ಗ ಅಂತ ಹೇಳಿಕೊಳ್ಳಬೇಕು ಇದು ಸರಿಯಾದ ಚಿಂತನೆಯಲ್ಲ. ಕೆಳವರ್ಗ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಮುಂದೆ ಇಂತಹ ಪದಗಳನ್ನು ಬಳಸಬಾರದು ಎಂದು ಕಿವಿಮಾತು ಹೇಳಿದರು.
ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ‘ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ತಲ್ಲಣಗಳು ವಿಷಯದ ಕುರಿತು ಮಾತನಾಡಿದರು. ರವಿಕುಮಾರ್ ಬಾಗಿ ಅವರು ‘ದಲಿತ ಚಳವಳಿಯ ಸವಾಲು ಮತ್ತು ಸಾಧ್ಯತೆಗಳು ಕುರಿತು ಮತ್ತು ವಿ.ಎಲ್.ನರಸಿಂಹಮೂರ್ತಿ ಅವರು, ‘ಸಮಕಾಲೀನ ಕರ್ನಾಟಕ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ ವಿಷಯದ ಕುರಿತು ಮಾತನಾಡಿದರು.
ಇದೇ ವೇಳೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿ ತುಂಬಾಡಿ ರಾಮಯ್ಯ, ಬಾಬು ಜಗಜೀವನ್ ರಾಮ್ ರಾಜ್ಯ ಪ್ರಶಸ್ತಿ ಪುರಸ್ಕೃತ ಹೋರಾಟಗಾರರಾದ ಕುಂದೂರು ತಿಮ್ಮಯ್ಯ ಮತ್ತು ಕೆ.ದೊರೈರಾಜ್ ಅವರನ್ನು ಅಭಿನಂದಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಚರಕ ಚಾರಿಟಬಲ್ ಮುಖ್ಯಸ್ಥ ಡಾ.ಬಸವರಾಜು ವಹಿಸಿ ಮಾತನಾಡಿದರು. ಎ.ರಾಮಚಂದ್ರ ಪ್ರಾಸ್ತಾವಿಕ ಮಾತನಾಡಿದರು. ಕುಂದೂರು ಮುರಳಿ ಸ್ವಾಗತಿಸಿದರು. ಅಧ್ಯಾಪಕ ಡಾ.ಶಿವಣ್ಣ ತಿಮ್ಲಾಪುರ ಕಾರ್ಯಕ್ರಮ ನಿರೂಪಿಸಿದರು. ತುಮಕೂರು ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ಸಾಮಾಜಿಕ ಹೋರಾಟಗಾರ ಶ್ರೀಪಾದ ಭಟ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಆಶಾ ಬಗ್ಗನಡು ಭಾಗವಹಿಸಿದ್ದರು.