ಮುಡಾ ಕೇಸ್‌ ದಿಕ್ಕು ತಪ್ಪಿಸಲು ‘ಜನಗಣತಿ ವರದಿ’ ಪ್ರಸ್ತಾಪ: ಕೆ.ಎಸ್‌.ಈಶ್ವರಪ್ಪ ಸಂಶಯ

KannadaprabhaNewsNetwork |  
Published : Oct 01, 2024, 01:18 AM IST
ಗೋಷ್ಠಿಯಲ್ಲಿ ಪ್ರಮುಖರಾದ ಇ. ವಿಶ್ವಾಸ್, ಸತ್ಯಣ್ಣ, ಶಂಕರ್ ನಾಯ್ಕ್, ರಾಜು, ವಾಗೀಶ್, ಕುಬೇಂದ್ರಪ್ಪ, ಶಿವ ಕುಮಾರ್, ನಾಗರಾಜ್, ಮಂಜುನಾಥ್ ಮತ್ತಿತರರು ಇದ್ದರು.ಶಿವಮೊಗ್ಗದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್‌. ಈಶ್ವರಪ್ಪ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಮುಂಬರುವ ಸಚಿವ ಸಂಪುಟದಲ್ಲಿ ಜಾತಿಗಣತಿ ವರದಿ ಮಂಡನೆ ಮಾಡಿ ಪಾಸ್ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಕೇವಲ ಬೂಟಾಟಿಕೆ ಆಗಬಾರದು ಎಂದು ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುಡಾ ಪ್ರಕರಣದ ದಿಕ್ಕು ತಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜನಗಣತಿ ವರದಿ ಪ್ರಸ್ತಾಪ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಟೀಕಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಂಬರುವ ಸಚಿವ ಸಂಪುಟದಲ್ಲಿ ಜಾತಿಗಣತಿ ವರದಿ ಮಂಡನೆ ಮಾಡಿ ಪಾಸ್ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಕೇವಲ ಬೂಟಾಟಿಕೆ ಆಗಬಾರದು. ನಾನು ವಿಪಕ್ಷ ನಾಯಕನಾಗಿದ್ದಾಗ ವಿಧಾನಮಂಡಲದಲ್ಲಿ ಪ್ರಸ್ತಾಪ ಮಾಡಿದ್ದೆ. ಆಗಲೂ ಸಿದ್ದರಾಮಯ್ಯ ವರದಿ ಜಾರಿಗೆ ತರುವುದಾಗಿ ಹೇಳಿದ್ದರು. ಬಳಿಕ ಸಹಿ ಇಲ್ಲದ ವರದಿ ಸಲ್ಲಿಕೆ ಆಗಿತ್ತು ಎಂದು ಹೇಳಿದರು.

ಹಿಂದುಳಿದ ವರ್ಗಗಳ ಏಳಿಗೆಗೆ ಶೇಕಡವಾರು ಮೀಸಲಾತಿ ಒದಗಿಸಲು ಈ ವರದಿಯನ್ನು ಜಾರಿಗೊಳಿಸುವ ಬಗ್ಗೆ ಆಗ್ರಹ ಹೆಚ್ಚಿದೆ. ಆದರೆ, ಸಿದ್ದರಾಮಯ್ಯ ತಮ್ಮದೇ ಪಕ್ಷದ ಸಚಿವರು, ಶಾಸಕರು ಆಕ್ಷೇಪಿಸುತ್ತಾರಲ್ಲದೆ, ಎಲ್ಲರೂ ಸೇರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಹುದು ಎನ್ನುವ ಭಯದಿಂದ ಈ ವರದಿಯನ್ನು ಸಚಿವ ಸಂಪುಟದ ಮುಂದಿಡಲಿಲ್ಲ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ಎಚ್.ಕಾಂತರಾಜ ನೇತೃತ್ವದಲ್ಲಿ ಈ ಸಮೀಕ್ಷೆಯನ್ನು ನಡೆಸ ಲಾಗಿತ್ತು. ಸಮೀಕ್ಷೆಗೆ 158 ಕೋಟಿ ರು. ವೆಚ್ಚವಾಗಿತ್ತು. ಆ ಸಮಿತಿ 30 ರಿಂದ 40 ಲಕ್ಷ ಮನೆಗಳ ಸಮೀಕ್ಷೆ ಮಾಡಬೇಕಿದ್ದು, ಕೇವಲ ಆರು ಲಕ್ಷ ಮನೆಗಳ ಸಮೀಕ್ಷೆ ಮಾತ್ರ ಆಗಿತ್ತು. ಇದನ್ನು ಈ ಹಿಂದೆ ವರದಿ ಸಲ್ಲಿಸಿದ್ದ ಎಚ್.ಕಾಂತರಾಜ ಅವರು ಹೇಳಿದ್ದರು. ಆದರೆ, ಆ ವರದಿಯಲ್ಲಿ ಕಾರ್ಯದರ್ಶಿ ಸಹಿಯೂ ಕೂಡ ಇರಲಿಲ್ಲ. ಒಟ್ಟಾರೆಯಾಗಿ ಕಾಂತರಾಜ ಆಯೋಗ ವರದಿ ಜಾರಿಗೆ 5 ವರ್ಷದಿಂದ ವಿಳಂಬ ನೀತಿ ಅನುಸರಿಸುತ್ತಲೇ ಬರಲಾಗುತ್ತಿದೆ ಎಂದರು.

ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ಸಮಿತಿ ವರದಿ ಸಲ್ಲಿಸಿ 7 ತಿಂಗಳಾಗಿವೆ. ಜಾತಿ ಜನಗಣತಿ ವರದಿ ಜಾರಿಗೆ ಮುನ್ನ ಚರ್ಚೆ ನಡೆಸಿ ಅಂಗೀಕಾರ ಮಾಡಲಿ. ಮೀಸಲಾತಿ ಸೌಲಭ್ಯ ನೀಡಲು ಸರ್ಕಾರದ ಬಳಿ ಅಂಕಿ ಅಂಶಗಳ ಪ್ರಕಾರ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಸಿದ್ದರಾಮಯ್ಯ ನಾಟಕೀಯ ಹೇಳಿಕೆ ನೀಡದೆ ಜಾತಿ ಜನಗಣತಿ ವರದಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಪ.ಜಾತಿ/ವರ್ಗಗಳ ಶಾಪ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 357 ಕೋಟಿ ರು. ನುಂಗಿ ನೀರು ಕುಡಿದಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ 1073 ಯೋಜನೆಗಳಿಗೆ ಕಳೆದ ತಿಂಗಳು ತಡೆಯಾಜ್ಞೆ ನೀಡಿ ಇದೀಗ ಅನುದಾನ ರದ್ದು ಮಾಡಿದ್ದಾರೆ. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಚಾಂಪಿಯನ್ ಎನ್ನುತ್ತಾರೆ. ಹಿಂದುಳಿದ ವರ್ಗಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಿದೆ ಎಂದು ಹೇಳಿದರು.

ವಾಲ್ಮೀಕಿ ಹಣಗರದಲ್ಲಿ ಒಬ್ಬ ಮಂತ್ರಿ ಜೈಲಿಗೆ ಹೋಗಿದ್ದಾರೆ. ಇನ್ನುಳಿದವರು ಜೈಲಿಗೆ ಹೋಗುವ ಸಿದ್ಧತೆ ನಡೆಸಿದ್ದಾರೆ.

ದಾವಣೆಗೆರೆ ಸೇರಿದಂತೆ ವಿವಿಧ ಕಡೆಗಳಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ವೇಳೆ ನಡೆದ ಗಲಾಟೆಯಲ್ಲಿ ಹಿಂದೂಗಳ ಮೇಲೆ ಕೇಸ್ ದಾಖಲಿಸಿದ್ದಾರೆ. ಗಣಪತಿ ವಿಸರ್ಜನೆ ವೇಳೆ ಭಾರತ್ ಮಾತಕೀ ಜೈ ಅಂದವರ ಮೇಲೆ ಕೇಸ್ ಹಾಕಿ ಎ-1 ಅನ್ನುತ್ತೀರಿ. ಆದರೇ ಪೆಟ್ರೋಲ್ ಬಾಂಬ್ ಹಿಡಿದು ಬಂದವರಿಗೆ ಎ- 31 ಮಾಡುತ್ತೀರಿ ಎಂದು ಕಿಡಿಕಾರಿದರು.

ನಾಯಿ ಬೊಗಳಿದರೆ, ಆನೆಗೆ ಏನೂ ಆಗಲ್ಲ:

ಬೇರೆ ಧರ್ಮಗಳ ಬಗ್ಗೆ ಮಾತನಾಡುವ ತಾಕತ್ತು ಭಗವಾನ್‌ಗೆ ಇಲ್ಲ. ನಾಯಿಗಳು ಬೊಗಳುತ್ತಿರುತ್ತವೆ. ಆನೆ ರಾಜ ಗಾಂಭೀರ್ಯರಿಂದ ಹೋಗುತ್ತದೆ. ಹಾಗೆಂದು ಭಗವಾನ್ ರನ್ನು ನಾಯಿಗೆ ಹೋಲಿಸುತ್ತಿಲ್ಲ. ಹಿಂದೂ ಧರ್ಮಕ್ಕೆ ಯಾವನು ಏನೂ ಮಾಡಲು ಆಗಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇನ್ನು, ಚುನಾವಣಾ ಬಾಂಡ್ ಬಿಜೆಪಿ ನಾಯಕರು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ. ದಾಖಲೆ ಕೊಡಲಿ, ದಾಖಲೆ ಕೊಟ್ಟರೆ ಮಾತ್ರ ಕೇಸ್ ನಿಲ್ಲುತ್ತದೆ ಇಲ್ಲದಿದ್ದರೆ ಬಿದ್ದು ಹೋಗುತ್ತೆ ಎಂದು ಪ್ರತಿಕ್ರಿಯಿಸಿದರು. ಮೋದಿ ಕೆಳಗಿಳಿಸಿ ಪಾಕಿಸ್ತಾನಕ್ಕೆ ಅನುಕೂಲ ಮಾಡಿಕೊಡಬೇಕಾ?

ಸಾಯೋದ್ರೊಳಗೆ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ ವಿಶ್ವ ನಾಯಕ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಿ ಪಾಕಿಸ್ತಾನಕ್ಕೆ ಅನುಕೂಲ ಮಾಡಿಕೊಡಬೇಕಾ? ಎಂದು ಪ್ರಶ್ನಿಸಿದರು.ಮಲ್ಲಿಕಾರ್ಜುನ ಖರ್ಗೆ ಬಾಯಲ್ಲಿ ಇಂತಹ ಮಾತುಗಳು ಬರಬಾರದು. ಮಲ್ಲಿಕಾರ್ಜುನ ಖರ್ಗೆ ಅವರು ಹಲವು ವರ್ಷಗಳ ಕಾಲ ಬಾಳಲಿ ಹಾಗೆ ನರೇಂದ್ರ ಮೋದಿ ಕೂಡ ಹಲವು ವರ್ಷಗಳ ಕಾಲ ಆಡಳಿತ ನಡೆಸಲಿ ಎಂದರು.ಬಿಜೆಪಿ ಒಳಾಂಗಣ ಶುದ್ಧಗೊಳ್ಳಬೇಕು

ಬಿಜೆಪಿ ಪಕ್ಷ ಹಾಳಾಗುತ್ತಿರುವುದನ್ನು ನೋಡಲಾಗದೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಹೊಂದಾಣಿಕೆ ರಾಜಕಾರಣದ ಬಗ್ಗೆ ನನ್ನ ಅಕ್ಷೇಪ ಇದೆ. ನಾನು ಇಲ್ಲ ಎಂದರೆ ಬಿಜೆಪಿ ಉದ್ಧಾರ ಆಗಲ್ಲ ಎಂದೇನೂ ಅಲ್ಲ. ನಾನು ಬಿಜೆಪಿ ಪಕ್ಷದ ಋಣ ತೀರಿಸಲು ಶುದ್ಧೀಕರಣ ಆಗಲು ಸ್ಪರ್ಧೆ ಮಾಡಿದ್ದೆ. ಈ ಬಗ್ಗೆ ಚರ್ಚೆಯಾಗಲಿ ಎಂದರಲ್ಲದೆ,

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಳೆದ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ವಿಜಯೇಂದ್ರ ಗೆದ್ದದ್ದು ಹೇಗೆ ಎಂದು ಸ್ಪಷ್ಟವಾಗಿ ವಿವರಿಸಿದ್ದಾರೆ. ನನ್ನ ಭಿಕ್ಷೆಯಿಂದ ವಿಜಯೇಂದ್ರ ಗೆದ್ದಿದ್ದಾರೆ ಎಂದು ಹೇಳಿದ್ದಾರೆ. ಇಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆ. ಇಲ್ಲದೇ ಹೋಗಿದ್ದರೆ, ವಿಜಯೇಂದ್ರ ಈ ಹೇಳಿಕೆಗೆ ಪ್ರತಿಕ್ರಿಯಿಸುತ್ತಿದ್ದರು. ಹೀಗಾಗಿಯೇ ಬಿಜೆಪಿಯ ಒಳಾಂಗಣ ಶುದ್ಧಗೊಳ್ಳಬೇಕು, ಕುಟುಂಬ ರಾಜಕಾರಣ ಕೊನೆಗೊಳ್ಳಬೇಕು ಎನ್ನುವುದು ನನ್ನ ಒತ್ತಾಯ ಎಂದರು.ವಿಜಯೇಂದ್ರ ಮತ್ತು ಯಡಿಯೂರಪ್ಪ ದೆಹಲಿಗೆ ಹೋಗಿ ಕೇಂದ್ರ ನಾಯಕರ ತಲೆ ತಿಂದು ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷನನ್ನಾಗಿ ಮಾಡಿದರು. ಹಿಂದುತ್ವದ ಬಗ್ಗೆ ಮಾತನಾಡಿದ ಸಿ.ಟಿ.ರವಿ, ಅನಂತ್ ಕುಮಾರ್ ಹೆಗಡೆ ಏನು ಮಾಡಿದ್ದರು? ಎಂದು ಹೇಳಿದ ಅವರು ಒಂದು ಕುಟುಂಬಕ್ಕೆ ಒಂದು ಸ್ಥಾನ ಎಂಬುದು ಬಿಜೆಪಿ ನೀತಿ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ