ಕನ್ನಡಪ್ರಭ ವಾರ್ತೆ ಚಿಂತಾಮಣಿ:
ಮಂಗಳವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದಾಗಿ ನಗರ ಹಾಗೂ ಕಸಬಾ ಹೋಬಳಿಯ ಕೆಲ ಗ್ರಾಮೀಣ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನತೆ ಪರದಾಡುವಂತಾಯಿತು.ನಗರದ ಎಂ.ಜಿ.ರಸ್ತೆ, ಬಾಗೇಪಲ್ಲಿ ವೃತ್ತ, ಕೋಲಾರ ವೃತ್ತ, ಸಂತೋಷಿ ಮಾತಾ ದೇವಸ್ಥಾನ, ಜೋಡಿರಸ್ತೆ, ಚೇಳೂರು ರಸ್ತೆ, ರೈಲ್ವೇ ಅಂಡರ್ ಪಾಸ್, ಚೆಮ್ಮನೂರು ಜುವೆಲ್ಲರ್ ಮುಂಭಾಗ, ಬಂಬೂಬಜಾರ್ ತಿರುವು, ಸೊಣ್ಣಶೆಟ್ಟಿಹಳ್ಳಿ ೬ನೇ ಕ್ರಾಸಿನ ನಿವೃತ್ತ ಆರ್‌ಐ ವೆಂಕಟರಾಮಿರೆಡ್ಡಿ ಮನೆಗಳ ಬಳಿ, ರಾಮಕುಂಟೆಯ ರೇಷ್ಮೆ ಗೂಡಿನ ಮಾರುಕಟ್ಟೆ ಹಾಗೂ ಬಿತ್ತನೆ ಕೊಠಡಿಯ ಕಟ್ಟಡಗಳಿಗೆ ೪-೫ ಅಡಿ ನೀರು ನಿಲುಗಡೆಗೊಂಡು, ದ್ವಿಚಕ್ರವಾಹನ, ಕಾರುಗಳು ನೀರಿನಲ್ಲಿ ಮುಳುಗಡೆಗೊಂಡಿದ್ದವು.
ರಸ್ತೆಗೆ ಹರಿದ ಕಾಲುವೆ ನೀರುಪ್ರಮುಖರಸ್ತೆಗಳ ಇಕ್ಕೆಲುಗಳಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡಲಾಗಿದೆಯಾದರೂ ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛತೆ ಮಾಡದ ಹಿನ್ನಲೆಯಲ್ಲಿ ನೀರು ರಸ್ತೆಯ ಮೇಲ್ಭಾಗದಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಮಳೆ ನೀರು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ಹಾಗೂ ಒಳಚರಂಡಿ ನೀರು ಸೇರ್ಪಡೆಗೊಂಡು ದುರ್ನಾತ ಪರಿಸ್ಥಿತಿ ಎದುರಾಗಿದೆ.
ತೋಟಗಾರಿಕೆ ಬೆಳೆಗೆ ಹಾನಿಕಸಬಾ ಹೋಬಳಿಯ ಕುರುಟಹಳ್ಳಿ, ಕಾಚಹಳ್ಳಿ ಸೇರಿದಂತೆ ಹಲವು ಗ್ರಾಮೀಣ ಭಾಗದಲ್ಲಿ ಮಳೆ ನೀರು ಹೊಲಗದ್ದೆ, ತೋಟಗಳಿಗೆ ನುಗ್ಗಿರುವ ಪರಿಣಾಮ ಬೆಳೆದು ನಿಂತಿರುವ ಬೆಳೆ ನೀರು ಪಾಲಾಗಿದೆ. ಕಾಚಹಳ್ಳಿಯ ರೈತ ದೇವರಾಜ್ ೨ ಎಕರೆ ಪ್ರದೇಶದಲ್ಲಿ ಹಾಗಲಕಾಯಿ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದೆ. ಸಾಲ ಸೋಲ ಮಾಡಿ ಬೆಳೆದ ಬೆಳೆ ಕೈಗೆಟುಕುವ ಸಂದರ್ಭದಲ್ಲಿ ನೆಲಕಚ್ಚಿರುವುದು ಆಕಾಶವೇ ಕಳಚಿಬಿದ್ದಂತಾಗಿದೆ. ಕಸಬಾ ಹೋಬಳಿಯ ವ್ಯಾಪ್ತಿಯ ಹಲವು ರೈತರು ಬೆಳೆದಿದ್ದ ಸೇವಂತಿಗೆ, ಚಂಡುಹೂವು, ಮೆಕ್ಕೆಜೋಳ, ಸಿಹಿಮೆಕ್ಕೆಜೋಳ, ರಾಗಿ ಸೇರಿದಂತೆ ಇನ್ನಿತರೆ ಬೆಳೆಗಳು ಸಂಪೂರ್ಣ ನೆಲಕಚ್ಚಿದೆ.
ಚರಂಡಿ ಸ್ವಚ್ಛತೆ ಮರೆತ ನಗರಸಭೆಮಳೆಗಾಲದಲ್ಲಿ ಸುರಿಯುವ ಮಳೆಯ ಹಿನ್ನಲೆಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಲು ಮುಂದಾಗದೆ ಜೂನ್ ಮಾಹೆಯ ಪ್ರಾರಂಭದಲ್ಲೆ ಅಂದರೆ ಮುಂಗಾರು ಮಳೆಯ ಪ್ರಾರಂಭಕ್ಕೆ ಕೆಲವು ವಾರಗಳು ಇದ್ದಂತೆ ಚರಂಡಿಗಳು, ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತ್ಯಾಜ್ಯವನ್ನು ನಗರಸಭೆ ಸಕಾಲಕ್ಕೆ ತೆರವುಗೊಳಿಸಿದರೆ ಇಂತಹ ಸಂಕಷ್ಟ ಎದುರಾಗುವುದಿಲ್ಲ, ಕಾಟಾಚಾರಕ್ಕೆ ಎಂಬAತೆ ಅರ್ಧಬರ್ಧ ಚರಂಡಿಗಳ ಸ್ವಚ್ಛತೆಗೊಳಿಸುವುದು, ಕೇವಲ ಮುಖ್ಯರಸ್ತೆಗಳಲ್ಲಿ ಮಾತ್ರ ಕಸಸಂಗ್ರಹಣೆ ಮಾಡುತ್ತಿರುವ ಕಾರಣ ಇಂತಹ ಸ್ಥಿತಿ ಉಂಟಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಬೆಳೆನಷ್ಟ ಪರಿಶೀಲನೆಗೆ ಸೂಚನೆಕಂದಾಯ, ತೋಟಗಾರಿಕೆ, ಕೃಷಿ ಇಲಾಖೆಯ ಜೊತೆಗೂಡಿ ತಾಲ್ಲೂಕಿನ್ಯಾದ್ಯಂತ ಆಗಿರುವ ಬೆಳೆನಷ್ಟದ ಕುರಿತು ಮಾಹಿತಿ ಕಲೆ ಹಾಕುವಂತೆ ಸೂಚಿಸಿರುವುದಾಗಿ ತಹಶೀಲ್ದಾರ್ ಸುದರ್ಶನ್ ಯಾದವ್ ತಿಳಿಸಿದ್ದಾರೆ. ಈಗಾಗಲೇ ಅಧಿಕಾರಿಗಳು ರೈತರ ಹೊಲಗದ್ದೆ ತೋಟಗಳಿಗೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೂರ್ಣ ಮಾಹಿತಿ ಕಲೆಹಾಕಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಹೇಳಿದರು.
ಮಳೆಗೆ ಮನೆಗಳ ಜಖಂನಗರದ ಹಳೆಪೇಟೆಯ ೧ ಮನೆ, ತಾಲೂಕಿನ ಕತ್ತರಿಗುಪ್ಪೆಯ ೨ ಮನೆಗಳು, ಬೂರಗಮಾಕಲಹಳ್ಳಿ ೧ ಮನೆಯು ಭಾಗಶ: ಕುಸಿದ್ದು ತಾಲ್ಲೂಕಿನಾದ್ಯಂತ ಹಳೆಯ ಮನೆಗಳು ಮತ್ತಷ್ಟು ಕುಸಿದಿವೆಯೆಂಬ ಮಾಹಿತಿ ಇದೆಯಾದರೂ ಅಧಿಕಾರಿಗಳಿಂದ ಸ್ಪಷ್ಟತೆ ದೊರೆಯಬೇಕಾಗಿದ್ದು ಸದ್ಯಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.