ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ್ ಅಭಿಯಾನವನ್ನು ನಗರಸಭೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಆದಾಗ್ಯೂ ನಗರದ 31 ವಾರ್ಡ್‌ಗಳಿಂದ ಪ್ರತಿದಿನ ಸುಮಾರು 22 ಟನ್‌ಗಳಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಹಸಿ ಮತ್ತು ಒಣ ಕಸವನ್ನು ವಿಂಗಡಿಸದೆ ನೀಡುತ್ತಿರುವುದು ತ್ಯಾಜ್ಯ ನಿರ್ವಹಣೆಗೆ ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಿದರು. ಮನೆಮನೆಗಳಿಂದ ಸಂಗ್ರಹವಾಗುವ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಿ ನೀಡುವ ಪದ್ಧತಿ ರೂಢಿಯಾದಾಗ ಮಾತ್ರ ಸಮರ್ಪಕ ತ್ಯಾಜ್ಯ ನಿರ್ವಹಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರವನ್ನು ಸ್ವಚ್ಛ, ಆರೋಗ್ಯಕರ ಹಾಗೂ ಪರಿಸರ ಸ್ನೇಹಿಯಾಗಿ ರೂಪಿಸುವ ಉದ್ದೇಶದಿಂದ ನಗರಸಭೆ ಕೈಗೊಂಡಿರುವ ಸ್ವಚ್ಛತಾ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಪೌರಾಯುಕ್ತ ಎಚ್. ಟಿ. ಕೃಷ್ಣಮೂರ್ತಿ ತಿಳಿಸಿದ್ದಾರೆ. ಮನೆಮನೆಗಳಿಂದ ಸಂಗ್ರಹವಾಗುವ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಿ ನೀಡುವ ಪದ್ಧತಿ ರೂಢಿಯಾದಾಗ ಮಾತ್ರ ಸಮರ್ಪಕ ತ್ಯಾಜ್ಯ ನಿರ್ವಹಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.ನಗರದ ಪಿ.ಪಿ. ವೃತ್ತದಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಚ್ಛ ಸರ್ವೇಕ್ಷಣ–2026, ಘನತ್ಯಾಜ್ಯ ನಿರ್ವಹಣಾ ನಿಯಮಗಳು 2026, ಸಾಮಾಜಿಕ ಮಾಧ್ಯಮ ಅಭಿಯಾನ, ಐಇಸಿ ಹಾಗೂ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ್ ಅಭಿಯಾನವನ್ನು ನಗರಸಭೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಆದಾಗ್ಯೂ ನಗರದ 31 ವಾರ್ಡ್‌ಗಳಿಂದ ಪ್ರತಿದಿನ ಸುಮಾರು 22 ಟನ್‌ಗಳಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಹಸಿ ಮತ್ತು ಒಣ ಕಸವನ್ನು ವಿಂಗಡಿಸದೆ ನೀಡುತ್ತಿರುವುದು ತ್ಯಾಜ್ಯ ನಿರ್ವಹಣೆಗೆ ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಿದರು.ನಗರಸಭೆ ಅಡುಗೆಮನೆಯ ತ್ಯಾಜ್ಯ, ಮರುಬಳಕೆ ಮಾಡಬಹುದಾದ ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ಹಾಗೂ ಅಪಾಯಕಾರಿ ತ್ಯಾಜ್ಯ ಎಂಬ ನಾಲ್ಕು ವಿಭಾಗಗಳಲ್ಲಿ ಕಸವನ್ನು ವಿಂಗಡಿಸುವ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಿದೆ. ತರಕಾರಿ ಹಾಗೂ ಹಣ್ಣುಗಳ ಸಿಪ್ಪೆ, ಉಳಿದ ಆಹಾರ ಪದಾರ್ಥಗಳು, ಕಾಗದ, ಪ್ಲಾಸ್ಟಿಕ್, ಲೋಹ, ಗಾಜಿನ ವಸ್ತುಗಳು, ಬಳಸಿದ ಡೈಪರ್‌ಗಳು, ಸ್ಯಾನಿಟರಿ ನ್ಯಾಪ್ಕಿನ್‌ಗಳು, ಹಳೆಯ ಬ್ಯಾಟರಿ, ಬಣ್ಣದ ಡಬ್ಬಿಗಳು ಹಾಗೂ ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ನೀಡಿದಾಗ ಮಾತ್ರ ಅವುಗಳ ಸಮರ್ಪಕ ಸಂಸ್ಕರಣೆ ಮತ್ತು ಮರುಬಳಕೆ ಸಾಧ್ಯವಾಗುತ್ತದೆ ಎಂದು ವಿವರಿಸಿದರು.ಪರಿಸರ ಸಂರಕ್ಷಣೆಯಲ್ಲಿ ನಾಗರಿಕರ ಪಾತ್ರ ಮಹತ್ವದ್ದಾಗಿದ್ದು, ಮನೆಮನೆಗಳಿಂದಲೇ ಕಸ ವಿಂಗಡಣೆ ಪ್ರಾರಂಭವಾಗಬೇಕು. ಸಾರ್ವಜನಿಕರು ಪೌರ ಕಾರ್ಮಿಕರಿಗೆ ಸಹಕಾರ ನೀಡಿದರೆ ಮಾತ್ರ ಸ್ವಚ್ಛ ನಗರ ನಿರ್ಮಾಣದ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪರಿಸರ ಅಭಿಯಂತರ ರವಿಕುಮಾರ್ ಮಾತನಾಡಿ, ನಗರದಲ್ಲಿ ಸಂಜೆ ವೇಳೆಯಲ್ಲಿಯೂ ಕಸ ಸಂಗ್ರಹ ವಾಹನಗಳು ಸಂಚರಿಸುತ್ತಿದ್ದು, ವ್ಯಾಪಾರಸ್ಥರು ಹಾಗೂ ರಸ್ತೆ ಬದಿ ವ್ಯಾಪಾರಿಗಳು ತಮ್ಮ ಅಂಗಡಿಗಳಿಂದ ಸಂಗ್ರಹವಾಗುವ ತ್ಯಾಜ್ಯವನ್ನು ಈ ವಾಹನಗಳಿಗೆ ನೀಡಬೇಕು ಎಂದು ಸೂಚಿಸಿದರು. ನಿಯಮ ಪಾಲಿಸದ ವ್ಯಾಪಾರಸ್ಥರ ವಿರುದ್ಧ ವ್ಯಾಪಾರ ಪರವಾನಗಿ ರದ್ದುಪಡಿಸುವ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಬ್ಯಾಗ್ ಬಳಕೆಯ ಕುರಿತು ಮಾಹಿತಿ ನೀಡಲಾಯಿತು. ಮೈಸೂರಿನ ಅರಿವು ಸಾಂಸ್ಕೃತಿಕ ಸಂಘದ ಕಲಾವಿದರು ಗೀತಗಾಯನ ಹಾಗೂ ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಸಾಸುರ ವೇಷಧಾರಿ ಶಶಿಕುಮಾರ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಕರಾದ ಲಿಂಗರಾಜು ಹಾಗೂ ರೇವಣ್ಣಸಿದ್ದಪ್ಪ, ವ್ಯವಸ್ಥಾಪಕಿ ಕಲಾವತಿ, ಪೌರ ನೌಕರರು ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.