ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಅಚ್ಚರಿ ಏನಲ್ಲ : ಜೆಡಿಎಸ್ ವಕ್ತಾರ ರಘು ಹೊಂಗೆರೆ

KannadaprabhaNewsNetwork | Updated : Nov 25 2024, 12:00 PM IST

ಸಾರಾಂಶ

ಯಾವುದೇ ಉಪ ಚುನಾವಣೆಗಳಲ್ಲಿ ಆಡಳಿತದಲ್ಲಿರುವ ಪಕ್ಷ ಗೆಲ್ಲುವುದು ಸಹಜ. ಅದರಂತೆ ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಅಚ್ಚರಿ ಏನಲ್ಲ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಹೇಳಿದ್ದಾರೆ.

 ಹಾಸನ : ಯಾವುದೇ ಉಪ ಚುನಾವಣೆಗಳಲ್ಲಿ ಆಡಳಿತದಲ್ಲಿರುವ ಪಕ್ಷ ಗೆಲ್ಲುವುದು ಸಹಜ. ಅದರಂತೆ ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಅಚ್ಚರಿ ಏನಲ್ಲ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ 10 ವಿಧಾನಸಭಾ ಕ್ಷೇತ್ರಗಳಲ್ಲಿ 8ರಲ್ಲಿ ಗೆದ್ದಿದೆ. ಬಿಹಾರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ 4ರಲ್ಲಿ 4ನ್ನೂ ಗೆದ್ದಿದೆ. ಅಸ್ಸಾಂನಲ್ಲಿ ಅಧಿಕಾರದಲ್ಲಿರುವ ಬಿಜೆಪಿ 5 ಸ್ಥಾನಗಳಲ್ಲಿ ಐದರಲ್ಲೂ ಗೆಲುವು ಸಾಧಿಸಿದೆ. ಹಾಗೆಯೇ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತ್ರಣಮೂಲ ಕಾಂಗ್ರೆಸ್ 6ಕ್ಕೆ 6ರಲ್ಲೂ ವಿಜಯಭೇರಿ ಬಾರಿಸಿದೆ. ಹಾಗೆಯೇ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ 3ಕ್ಕೆ 3 ಸ್ಥಾನ ಗೆಲ್ಲುವುದರಲ್ಲಿ ದೊಡ್ಡ ಅಚ್ಚರಿ ಏನಲ್ಲ, ಇದು ದೊಡ್ಡ ಸಾಧನೆ ಎಂದು ಬೀಗುವುದು ಬೇಡ ಎಂದಿದ್ದಾರೆ. 

ಹಾಗಿದ್ದರೆ ಉತ್ತರ ಭಾರತದ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಾಧನೆ ಏಕೆ ಇಷ್ಟೊಂದು ಕಳಾಹೀನವಾಗಿದೆ ಎಂದು ಪ್ರಶ್ನೆ ಮಾಡಿದರೆ, ದೇಶದಲ್ಲಿ ನಡೆದ ಲೋಕಸಭೆ, ವಿಧಾನಸಭೆಗೆ ಒಟ್ಟು 424ಕ್ಕೂ ಹೆಚ್ಚು ಸ್ಥಾನಗಳಿಗೆ ಲೋಕಸಭಾ ಉಪ ಚುನಾವಣೆ ಮತ್ತು ವಿಧಾನಸಭಾ ಸಾರ್ವತ್ರಿಕ ಹಾಗೂ ಉಪ ಚುನಾವಣೆ ನಡೆದಿದ್ದು, ಇವುಗಳಲ್ಲಿ ಕೇವಲ 44 ಸೀಟ್‌ಗಳನ್ನು ಕಾಂಗ್ರೆಸ್ ಪಕ್ಷ ಪಡೆದಿವೆ. ಇಡೀ ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಇಷ್ಟೊಂದು ಹೀನಾಯ ಆಗಿರುವಾಗ ರಾಜ್ಯದಲ್ಲಿ ಏನೋ ಬ್ರಹ್ಮಾಂಡ ಬದಲು ಮಾಡಿದ್ದೇವೆ ಎಂದು ಟಾಂ ಟಾಂ ಹೊಡೆಯುವುದು ಬೇಡ ಎಂದಿದ್ದಾರೆ.

ಸರ್ಕಾರ ಇರುವ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಹಾಕಿದರೆ ಕ್ಷೇತ್ರದ ಅಭಿವೃದ್ಧಿಯಾಗಲಿದೆ ಎಂದು ಮತದಾರರು ಬಯಸೋದು ಸಹಜ. ಹಾಗಂದುಕೊಂಡೇ ಮೂರೂ ಕ್ಷೇತ್ರಗಳ ಜನರು ಮತ ಹಾಕಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಈಗಾಗಲೇ ಒಂದೂವರೆ ವರ್ಷ ಕಳೆದಿದ್ದರೂ, ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಸಾಕಷ್ಟು ಹಗರಣಗಳಲ್ಲಿ ಮುಳುಗಿರುವ ಈ ಸರ್ಕಾರ, ಉಪ ಚುನಾವಣೆ ಫಲಿತಾಂಶ ನಮ್ಮ ಸರ್ಕಾರಕ್ಕೆ ಸಿಕ್ಕಿರುವ ಜನಾಭಿಪ್ರಾಯ ಎಂದು ಹೇಳುವುದು ನಾಚಿಕೆಗೇಡು ಎಂದು ಟೀಕಿಸಿದ್ದಾರೆ.

ಸರ್ಕಾರದ ಯೋಗ್ಯತೆಗೆ ಮಳೆಹಾನಿಗೆ ಪರಿಹಾರ ನೀಡಲು ಆಗಿಲ್ಲ. ಮಾತಿನಲ್ಲೇ ಅಭಿವೃದ್ಧಿ ಮಾಡುತ್ತಿರುವ ಇವರು, ಹಾಸನ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಒಂದೇ ಒಂದು ನೂತನ ಕಾಮಗಾರಿಗೆ ಚಾಲನೆ ನೀಡಿಲ್ಲ. ಆದರೂ ಸ್ವರ್ಗವನ್ನೇ ಭೂ ಲೋಕಕ್ಕೆ ಇಳಿಸಿದ್ದೇವೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವುದು ಹಾಸ್ಯಾಸ್ಪದ ಎಂದಿದ್ದಾರೆ. ಆರಂಭದಿಂದ ಈವರೆಗೂ ಕೇವಲ ಗ್ಯಾರಂಟಿ ಜಪದಲ್ಲಿ ಅಭಿವೃದ್ಧಿ ಮರೆತಿರುವ ಕಾಂಗ್ರೆಸ್ ಸರ್ಕಾರ ಇನ್ನಾದರೂ ನಾಡಿಗೆ ಅಭಿವೃದ್ಧಿಗೆ ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.

Share this article