ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಜಾಹೀರಾತುಗಳ ಆಕರ್ಷಣೆ, ಚಲನಚಿತ್ರ ನಟರ ಅನುಕರಣೆ ಸೇರಿದಂತೆ ಹಲವಾರು ಕಾರಣಗಳಿಗೆ ಶೇ. 50ರಷ್ಟು ಯುವಕರು ಮಾದಕ ವ್ಯಸನ ಅಥವಾ ಚಟಗಳಿಗೆ ಒಳಗಾಗುತ್ತಿದ್ದಾರೆ. ಯಾವುದೇ ವ್ಯಸನಕ್ಕೆ ಬಲಿಯಾಗದೇ ಉತ್ತಮ ಬದುಕು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ನರ್ಸಿಂಗ್ ವಿಭಾಗದ ಅಧಿಕಾರಿ ಸುಮಲತಾ ಸಲಹೆ ನೀಡಿದರು.ತಾಲೂಕಿನ ಪಡುವಲಹಿಪ್ಪೆ ಎಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಆಯೋಜಿಸಿದ್ದ ಮಾದಕ ವ್ಯಸನದ ಪರಿಣಾಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾದಕ ವ್ಯಸನಿಗಳು ಮನಸ್ಸಿನ ಮೇಲೆ ಹಿಡಿತ ಕಳೆದುಕೊಳ್ಳುವ ಕಾರಣದಿಂದ ಒಳಿತು ಕೆಡಗು ಬಗ್ಗೆ ಯೋಚಿಸಲಾಗದೇ ಮತ್ತು ಮಾದಕ ವ್ಯಸನದಿಂದ ಹೊರಬರಲಾಗದೇ ಚಟ ತೀರಿಸಿಕೊಳ್ಳಲು ಯಾವುದೇ ಕಾನೂನು ಬಾಹಿರ ಹಂತಕ್ಕೆ ಬೇಕಾದರು ಇಳಿದು ಬಿಡುತ್ತಾರೆ. ಆದ್ದರಿಂದ ಯಾವುದೇ ವ್ಯಸನಕ್ಕೆ ಬಲಿಯಾಗದೇ ಶೈಕ್ಷಣಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸುವತ್ತ ನಿಮ್ಮ ಚಿತ್ತವಿರಲಿ ಎಂದು ಕರೆಕೊಟ್ಟರು.
ರವೀಂದ್ರ ಮಾತನಾಡಿ, ಮಾದಕ ವಸ್ತುಗಳು ಹೇಗೆ ಸಮಾಜದ ಒಳಗೆ ನುಸುಳುತ್ತಿವೆ. ಅವು ಹೇಗೆ ಕಾಲೇಜು ವಿದ್ಯಾರ್ಥಿಗಳ ಕೈ ಸೇರುತ್ತಿವೆ ಎಂಬುದರ ಬಗ್ಗೆ ವಿವರಿಸಿ, ವ್ಯಸನಗಳಿಗೆ ದಾಸರಾಗಿ ಸಮಸ್ಯೆ ತಂದುಕೊಳ್ಳಬೇಡಿ. ವ್ಯಸನಕ್ಕೆ ಬಲಿ ಆದರೆ ವಿದ್ಯಾರ್ಥಿಗಳ ಇಡೀ ಕುಟುಂಬಗಳು ಸಮಸ್ಯೆಯನ್ನು ಎದುರಿಸುತ್ತದೆ. ಆದ್ದರಿಂದ ಕ್ಷಣಿಕ ಸುಖಕ್ಕಾಗಿ ನಿಮ್ಮ ಜೀವನವನ್ನು ಬಲಿಕೊಡಬೇಡಿ ಎಂದು ಎಚ್ಚರಿಸಿದರು.ನರ್ಸಿಂಗ್ ವಿಭಾಗದ ವಿದ್ಯಾ ಮಾತನಾಡಿ, ಮೂರ್ಛೆ ರೋಗ ಹಾಗೂ ಮಾದಕ ವ್ಯಸನಿಗಳಿಗೂ ಹೇಗೆ ಸಂಬಂಧವಿದೆ. ಯಾರೆಲ್ಲ ವ್ಯಕ್ತಿಗಳಿಗೆ ಈ ಕಾಯಿಲೆ ಬರುತ್ತದೆ ಮತ್ತು ಕಾಯಿಲೆಗೆ ತುತ್ತಾಗಿರುವ ವ್ಯಕ್ತಿಗಳ ಆರೈಕೆ ಹಾಗೂ ಪ್ರಾಥಮಿಕ ಚಿಕಿತ್ಸೆಯನ್ನು ಯಾವ ರೀತಿ ನೀಡಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.ಪ್ರಾಂಶುಪಾಲ ಕೆ.ಸಿ.ವಿಶ್ವನಾಥ, ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ಡಾ. ಸಂಜೀವ್ ಕುಮಾರ್, ಸಹಾಯಕ ಪ್ರಾಧ್ಯಾಪಕ ಅನಂತ್ ಕುಮಾರ್, ಡಾ.ಶಿವಕುಮಾರ್, ವೆಂಕಟೇಶ್, ಮಂಜುನಾಥ, ಮಹೇಶ್, ಉಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.31ಎಚ್ಎಸ್ಎನ್18 : ಹೊಳೆನರಸೀಪುರ ತಾ. ಪಡವಲಹಿಪ್ಪೆಯ ಎಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕ ವ್ಯಸನದ ಪರಿಣಾಮ ಕುರಿತು ಕಾರ್ಯಕ್ರಮದಲ್ಲಿ ನರ್ಸಿಂಗ್ ವಿಭಾಗದ ಅಧಿಕಾರಿ ಸುಮಲತಾ ಮಾತನಾಡಿದರು.