ಮಕ್ಕಳ ಹೃದಯಾಘಾತಕ್ಕೆ ‘ಡಿಇಐಸಿ’ ಬ್ರೇಕ್..!

KannadaprabhaNewsNetwork |  
Published : Jul 20, 2025, 01:15 AM IST
೧೯ಕೆಎಂಎನ್‌ಡಿ-೧ನಾಗಮಂಗಲ ತಾಲೂಕಿನಲ್ಲಿ ನಡೆದ ಡಿಇಐಸಿ ಶಿಬಿರದಲ್ಲಿ ಹೃದ್ರೋಗ ಸಮಸ್ಯೆ ಇರುವ ಬಾಲಕಿಯನ್ನು ವೈದ್ಯ ಡಾ.ನರೇಂದ್ರಬಾಬು ಪರೀಕ್ಷಿಸಿದರು. | Kannada Prabha

ಸಾರಾಂಶ

ಇತ್ತೀಚೆಗೆ ಮಕ್ಕಳಲ್ಲೂ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಸಾವು ಸಂಭವಿಸುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಿವೆ. ಇಂತಹ ಆತಂಕಕಾರಿ ಪರಿಸ್ಥಿತಿಯಲ್ಲಿ ಹುಟ್ಟಿದ ಮಗುವಿನಿಂದ ಆರಂಭವಾಗಿ ೧೮ ವರ್ಷ ವಯಸ್ಸಿನವರೆಗಿನ ಮಕ್ಕಳಲ್ಲಿರಬಹುದಾದ ಹೃದ್ರೋಗವನ್ನು ಪತ್ತೆಹಚ್ಚಿ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸುವ ಕೆಲಸವನ್ನು ಡಿಇಐಸಿ ಸದ್ದಿಲ್ಲದೆ ನಡೆಸುತ್ತಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಇತ್ತೀಚೆಗೆ ಮಕ್ಕಳಲ್ಲೂ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಸಾವು ಸಂಭವಿಸುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಿವೆ. ಇಂತಹ ಆತಂಕಕಾರಿ ಪರಿಸ್ಥಿತಿಯಲ್ಲಿ ಹುಟ್ಟಿದ ಮಗುವಿನಿಂದ ಆರಂಭವಾಗಿ ೧೮ ವರ್ಷ ವಯಸ್ಸಿನವರೆಗಿನ ಮಕ್ಕಳಲ್ಲಿರಬಹುದಾದ ಹೃದ್ರೋಗವನ್ನು ಪತ್ತೆಹಚ್ಚಿ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸುವ ಕೆಲಸವನ್ನು ಜಿಲ್ಲಾ ಆರೋಗ್ಯ ಇಲಾಖೆಯ ಡಿಸ್ಟ್ರಿಕ್ಟ್ ಅರ್ಲಿ ಇಂಟರ್‌ವೆನ್ಷನ್ ಸೆಂಟರ್ (ಡಿಇಐಸಿ) ಸದ್ದಿಲ್ಲದೆ ನಡೆಸುತ್ತಿದೆ.

ಹಲವಾರು ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಹೃದಯ ಸಂಬಂಧಿ ಸಮಸ್ಯೆಗಳಿಂದ ನರಳುತ್ತಿರುತ್ತವೆ. ಅವುಗಳ ಬಗ್ಗೆ ಪೋಷಕರಿಗೆ ತಿಳಿದಿರುವುದಿಲ್ಲ. ಅದಕ್ಕೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷೆಗಳನ್ನೂ ಮಾಡಿಸಿರುವುದಿಲ್ಲ. ಕೆಲವೊಬ್ಬರು ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದೂ ಇದೆ. ಗಂಭೀರ ಸ್ವರೂಪದ ಸಮಸ್ಯೆಗಳಿರುವ ಮಕ್ಕಳು ಇದ್ದಕ್ಕಿದ್ದಂತೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಮಕ್ಕಳಲ್ಲಿರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಗುರುತಿಸದಿರುವುದು, ಅವರನ್ನು ಸೂಕ್ತ ಸಮಯದಲ್ಲಿ ಚಿಕಿತ್ಸೆಗೆ ದಾಖಲಿಸದಿರುವುದರಿಂದ ಹೃದಯಾಘಾತಗಳು ಸಂಭವಿಸುತ್ತವೆ.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಬಡವರು, ಕೂಲಿ ಕಾರ್ಮಿಕರು, ಕೆಲ ಮಧ್ಯಮವರ್ಗದ ಮಕ್ಕಳಲ್ಲಿರುವ ದೈಹಿಕ ನ್ಯೂನ್ಯತೆಗಳನ್ನು ಪತ್ತೆಹಚ್ಚಿ ಅವರಿಗೆ ಉತ್ತಮ ಚಿಕಿತ್ಸೆ ದೊರಕಿಸಿ ಗುಣಪಡಿಸುವಲ್ಲಿ ಡಿಇಐಸಿ ಪ್ರಮುಖ ಪಾತ್ರ ವಹಿಸುತ್ತಿದೆ. ವಾರ್ಷಿಕ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಸುಮಾರು ೭೦ ರಿಂದ ೮೦ ಮಕ್ಕಳನ್ನು ಗುರುತಿಸಿ ಅವರಿಗೆ ಅಪೋಲೋ, ಮಣಿಪಾಲ್, ಜೆಎಸ್‌ಎಸ್, ನಾರಾಯಣ ಹೃದಯಾಲಯ ಸೇರಿದಂತೆ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿ ಗುಣಪಡಿಸಲಾಗುತ್ತಿದೆ.

ಆರ್‌ಬಿಎಸ್‌ಕೆ ತಂಡದವರು ಪ್ರತಿ ಶಾಲೆ, ಅಂಗನವಾಡಿ ಸೇರಿದಂತೆ ಗ್ರಾಮಗಳಲ್ಲಿ ಸಂಚರಿಸಿ ದೈಹಿಕ ನ್ಯೂನತೆಯಿಂದ ಬಳಲುತ್ತಿರುವವರನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದ್ದು, ಹೀಗೆ ಗುರುತಿಸಲಾದ ಮಕ್ಕಳನ್ನು ಪ್ರತಿ ವಾರಕ್ಕೊಮ್ಮೆ ನಡೆಸಲಾಗುವ ಶಿಬಿರಗಳಿಗೆ ಕರೆತರುತ್ತಾರೆ. ಅಲ್ಲಿ ಜಿಲ್ಲಾ ಅರ್ಲಿ ಇಂಟರ್‌ವೆನ್ಷನ್ ಸೆಂಟರ್‌ನ ವೈದ್ಯ ಡಾ.ನರೇಂದ್ರಬಾಬು ನೇತೃತ್ವದ ತಂಡ ಮಕ್ಕಳನ್ನು ತಪಾಸಣೆಗೊಳಪಡಿಸಿ ನ್ಯೂನ್ಯತೆಗಳನ್ನು ಪತ್ತೆಹಚ್ಚಿ ಒಂದು ವಾರ ಅಥವಾ ಹದಿನೈದು ದಿನಗಳಲ್ಲಿ ಆ ಸಮಸ್ಯೆಗಳಿಗೆ ಪರಿಹಾರ ಸೂಚಿಸಿರುವ ಸಾಕಷ್ಟು ನಿದರ್ಶನಗಳಿವೆ.

ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವ ಪೋಷಕರು ಹಾಗೂ ತಂದೆ-ತಾಯಿಯನ್ನು ಕರೆಸಿ ಬುದ್ಧಿಮಾತು ಹೇಳಿ ಮಕ್ಕಳಲ್ಲಿರುವ ಹೃದ್ರೋಗ ಸೇರಿದಂತೆ ಹಲವಾರು ನ್ಯೂನ್ಯತೆಗಳಿಗೆ ಪರಿಹಾರ ಸೂಚಿಸಲಾಗುತ್ತಿದೆ. ಹುಟ್ಟಿದ ಮಕ್ಕಳಲ್ಲಿ ಅಥವಾ ೨ ವರ್ಷದಿಂದ ೫ ವರ್ಷದ ಮಕ್ಕಳಲ್ಲಿ ಹೃದಯದಲ್ಲಿ ರಂಧ್ರ ಸಣ್ಣ ಪ್ರಮಾಣದಲ್ಲಿದ್ದರೆ ಮಗು ಬೆಳೆದಂತೆಲ್ಲಾ ರಂಧ್ರ ತನ್ನಿಂತಾನೇ ಮುಚ್ಚಿಕೊಳ್ಳುತ್ತದೆ. ಒಂದೊಂದು ಮಕ್ಕಳಲ್ಲಿ ರಂಧ್ರ ಗಾತ್ರದಲ್ಲಿ ದೊಡ್ಡದಾಗಿದ್ದರೆ ಅಥವಾ ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳ ದೊಡ್ಡದಾಗಿದ್ದರೆ ಮಕ್ಕಳಲ್ಲಿ ಹೃದಯಾಘಾತವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆ ಹಿನ್ನೆಲೆಯಲ್ಲಿ ೭ ರಿಂದ ೧೭ ವರ್ಷ ವಯಸ್ಸಿನ ಬಿಪಿಎಲ್ ಕಾರ್ಡ್ ಹೊಂದಿರುವ ಮಕ್ಕಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖರನ್ನಾಗಿ ಮಾಡಿರುವ ಹೆಗ್ಗಳಿಕೆ ಡಿಇಐಸಿಯದ್ದಾಗಿದೆ.

ಚಿಕ್ಕ ವಯಸ್ಸಿನ ಮಕ್ಕಳಲ್ಲಿರಬಹುದಾದ ಹೃದ್ರೋಗ, ಕಿವಿ ಕೇಳಿಸದಿರುವುದು, ಮುಖಚಹರೆಯಲ್ಲಿ ವ್ಯತ್ಯಾಸ, ಗಂಟಲಿನಲ್ಲಿ ಸಮಸ್ಯೆ, ಅಂಗವೈಕಲ್ಯ ಸೇರಿದಂತೆ ಇನ್ನಿತರ ಹಲವಾರು ನ್ಯೂನ್ಯತೆಗಳಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ದೊರಕಿಸುವ ಕೆಲಸವನ್ನು ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಪ್ರತಿ ವಾರ ಶಿಬಿರಗಳನ್ನು ಏರ್ಪಡಿಸಿ ಮಕ್ಕಳ ಆರೋಗ್ಯ ತಪಾಸಣೆ ಮಾಡುವುದು. ನ್ಯೂನ್ಯತೆ ಕಂಡುಬಂದ ಮಕ್ಕಳನ್ನು ಗುರುತಿಸಿ ಶೀಘ್ರದಲ್ಲೇ ಚಿಕಿತ್ಸೆ ದೊರಕಿಸುವುದು. ಸಾಧನ-ಸಲಕರಣೆಗಳನ್ನು ತ್ವರಿತವಾಗಿ ದೊರಕಿಸಿಕೊಡುವ ಕಾರ್ಯದಲ್ಲಿ ನಿರತವಾಗಿದೆ. ಇದರ ಜೊತೆಗೆ ಜಿಲ್ಲಾ ಆರೋಗಾಧಿಕಾರಿ ಕಚೇರಿ ಆವರಣದಲ್ಲಿರುವ ಡಿಇಐಸಿ ಕೇಂದ್ರಕ್ಕೆ ನಿತ್ಯ ನಗರ-ಗ್ರಾಮೀಣ ಪ್ರದೇಶದ ಮಕ್ಕಳು ಆಗಮಿಸಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲಿಯೂ ನ್ಯೂನ್ಯತೆ ಕಂಡುಬಂದ ಮಕ್ಕಳಿಗೆ ಚಿಕಿತ್ಸೆ ದೊರಕಿಸಿಕೊಡಲಾಗುತ್ತಿದೆ.ಮಕ್ಕಳಲ್ಲಿ ಸಂಭವಿಸಬಹುದಾದ ಹೃದಯಾಘಾತಗಳಿಗೆ ಸೂಕ್ತ ಪರೀಕ್ಷೆ, ಸಕಾಲದಲ್ಲಿ ಚಿಕಿತ್ಸೆ ಸಿಗದಿರುವುದೇ ಕಾರಣವಾಗಿದೆ. ಹುಟ್ಟಿದ ಮಗುವಿನಿಂದ ೧೮ ವರ್ಷ ವಯಸ್ಸಿನವರೆಗಿನವರಲ್ಲಿ ಹೃದಯ ಸಂಬಂಧಿ ಸಮಸ್ಯೆಯೂ ಸೇರಿದಂತೆ ಮಕ್ಕಳಲ್ಲಿರುವ ಹಲವು ನ್ಯೂನತೆಗಳನ್ನು ಗುರುತಿಸಿ ಡಿಇಆರ್‌ಸಿ ಉಚಿತ ವೈದ್ಯಕೀಯ ಚಿಕಿತ್ಸೆ ಮೂಲಕ ಪರಿಹಾರ ದೊರಕಿಸಲಾಗುತ್ತಿದೆ. ಈ ಯೋಜನೆಯಡಿ ಚಿಕಿತ್ಸೆಗೆ ಬಿಪಿಎಲ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.

- ಡಾ.ಅಶ್ವತ್ಥ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿಆರ್‌ಬಿಎಸ್‌ಕೆ ತಂಡ ಗುರುತಿಸಿ ಕರೆತರುವ ಮಕ್ಕಳನ್ನು ಪ್ರತಿ ವಾರ ತಾಲೂಕುಗಳಲ್ಲಿ ಶಿಬಿರ ಆಯೋಜಿಸಿ ತಪಾಸಣೆ ನಡೆಸಲಾಗುತ್ತದೆ. ಹೃದ್ರೋಗ ಸಮಸ್ಯೆ, ಕಿವಿ, ಮೂಗು, ಗಂಟಲು, ಮುಖಚರ್ಯೆ ಬದಲಾವಣೆ ಸೇರಿದಂತೆ ಹಲವು ನ್ಯೂನತೆಗಳನ್ನು ಗುರುತಿಸಿ ಉಚಿತವಾಗಿ ಚಿಕಿತ್ಸೆ ದೊರಕಿಸಲಾಗುತ್ತಿದೆ. ವಾರ್ಷಿಕ ೬೦ ರಿಂದ ೭೦ ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಸಂಭವಿಸಬಹುದಾದ ಹೃದಯಾಘಾತಗಳನ್ನು ತಪ್ಪಿಸಲಾಗುತ್ತಿದೆ.

- ಡಾ.ನರೇಂದ್ರಬಾಬು, ವೈದ್ಯಾಧಿಕಾರಿ, ಡಿಇಐಸಿ

PREV

Latest Stories

ಒಂದೇ ದಿನ ಹಂಪಿಗೆ 25 ಸಾವಿರಕ್ಕೂ ಅಧಿಕ ಪ್ರವಾಸಿಗರ ಆಗಮನ
ಕಿನ್ನಿಗೋಳಿಯಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ
ರಾಬಕೋ ಅಧ್ಯಕ್ಷ ಸ್ಥಾನಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ?