ಸಾರಾಂಶ
ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡವನ್ನು ಬೆಳೆಸಬೇಕಾದ ಮನಸ್ಸುಗಳು ಆಡಳಿತದಲ್ಲಿ ಇರಬೇಕಾದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಪ್ರತಿಪಾದಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡವನ್ನು ಬೆಳೆಸಬೇಕಾದ ಮನಸ್ಸುಗಳು ಆಡಳಿತದಲ್ಲಿ ಇರಬೇಕಾದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಪ್ರತಿಪಾದಿಸಿದರು.ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಮಂಗಳವಾರ ಏರ್ಪಡಿಸಿದ್ದ ಕನ್ನಡ ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಕಳೆದುಹೋಗುತ್ತಿದೆ. ಅದರಂತೆ ಆಡಳಿತಾತ್ಮಕವಾಗಿಯೂ ಸೊರಗುತ್ತಿದೆ. ಮಾತೃಭಾಷೆಯ ಹೆಸರಿಗೆ ಹಿಂದೆಂದೂ ಇಲ್ಲದ ಆತಂಕ ಎದುರಾಗಿದೆ. ಕನ್ನಡದ ಪರಂಪರೆ, ಕನ್ನಡದ ಸಂಸ್ಕೃತಿಗೆ ಆಪತ್ತು ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.ಜಗತ್ತಿನ ಎಲ್ಲ ಭಾಷೆಯ ಉಚ್ಚಾರಣೆಗೆ ಒಪ್ಪುವಂತ ವೈಜ್ಞಾನಿಕ ವರ್ಣಮಾಲೆಯನ್ನು ಕನ್ನಡ ಹೊಂದಿದೆ. ಹೀಗಿರುವಾಗ ಕನ್ನಡ ತಾಂತ್ರಿಕವಾಗಿ ಇನ್ನಷ್ಟು ಮುಂದುವರಿದಿರಬೇಕಿತ್ತು. ತಾಂತ್ರಿಕ ಕ್ಷೇತ್ರದಲ್ಲಿ ಬೆಳೆಯಬಹುದಾದ ಎಲ್ಲ ಶಕ್ತಿ ಕನ್ನಡಕ್ಕಿದೆ. ಅದನ್ನು ಬೆಳೆಸಬಹುದಾದ ಆಡಳಿತ ಬೇಕು. ಕನ್ನಡಿಗರಿಗೆ ಕನ್ನಡದ ಮೇಲೆ ಪ್ರೀತಿಯಿದ್ದರೆ ಸಾಲದು ಅದನ್ನು ಕಾಳಜಿಯಿಂದ ಬೆಳೆಸುವ ಕೃತು ಶಕ್ತಿಯ ಅಗತ್ಯವಿದೆ ಎಂದು ಹೇಳಿದರು.
ಹಿರಿಯ ಸಂಶೋಧಕ ಹಂ.ಪ. ನಾಗರಾಜಯ್ಯ ಮಾತನಾಡಿ, ಸಂಘಟನೆಗಳು ನೀಡುವ ಪುರಸ್ಕಾರಗಳು ಕನ್ನಡ ಕೆಲಸಗಳನ್ನು ಮಾಡುವವರನ್ನು ಪ್ರೋತ್ಸಾಹಿಸುತ್ತವೆ. ಈ ನಿಟ್ಟಿನಲ್ಲಿ ಕನ್ನಡದ ಸಾಧಕರನ್ನು ಸ್ಫೂರ್ತಿಗೊಳಿಸುವ ಕಾರ್ಯಗಳು ಮುಂದುವರಿಯಬೇಕು ಎಂದರು.ಒಕ್ಕೂಟದ ಅಧ್ಯಕ್ಷ ಎಂ. ತಿಮ್ಮಯ್ಯ ಮಾತನಾಡಿದರು.
ಈ ವೇಳೆ ಕನ್ನಡ ಸಾಧಕರಾದ ಕನ್ನಡಪರ ಹೋರಾಟಗಾರ ರಾಮಣ್ಣ ಎಚ್. ಕೋಡಿಹೊಸಳ್ಳಿ, ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ, ಉದಯಭಾನು ಕಲಾಸಂಘ ಸಂಸ್ಥಾಪಕ ಕಾರ್ಯದರ್ಶಿ ಎಂ. ನರಸಿಂಹ, ಕನ್ನಡ ಪರ ಹೋರಾಟಗಾರ ಸಿ.ಕೆ. ರಾಮೇಗೌಡ ಅವರಿಗೆ ಗೌರವ ಸಲ್ಲಿಸಲಾಯಿತು.