ಗ್ರಂಥಾಲಯ ಮೇಲ್ವಿಚಾರಕಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ

| Published : Oct 22 2025, 01:03 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ವೇತನ ನೀಡಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಸೇಡಂ ತಾಲೂಕಿನ ಮಳಖೇಡ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕಿ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಗ್ರಾಪಂ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳ ಮೇಲ್ವಿಚಾರಕರ ನೌಕರರ ಸಂಘದ ಪದಾಧಿಕಾರಿಗಳು ತಾಪಂ ಇಒ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ವೇತನ ನೀಡಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಸೇಡಂ ತಾಲೂಕಿನ ಮಳಖೇಡ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕಿ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಗ್ರಾಪಂ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳ ಮೇಲ್ವಿಚಾರಕರ ನೌಕರರ ಸಂಘದ ಪದಾಧಿಕಾರಿಗಳು ತಾಪಂ ಇಒ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷ ಕಲ್ಮೇಶ ಸತ್ತಿ ಮಾತನಾಡಿ, ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮುಳಖೇಡ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಮೇಲ್ವಿಚಾರಕಿ ಭಾಗ್ಯವತಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ವೇತನ ನೀಡದೇ ಸತಾಯಿಸುತ್ತಿದ್ದ ಹಿನ್ನೆಲೆ ಅವರು, ನಾನು ಕುಟುಂಬ ನಿರ್ವಹಣೆ ಹೇಗೆ ಮಾಡುವುದು ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಇನ್ಮುಂದೆ ಯಾವುದೇ ಗ್ರಂಥಾಲಯ ಮೇಲ್ವಿಚಾರಕರಿಗೆ ಆಗಬಾರದು ಎಂದರು.

ನಮ್ಮ ಅಥಣಿ ತಾಲೂಕಿನಲ್ಲಿಯೂ ಗ್ರಂಥಾಲಯ ಮೇಲ್ವಿಚಾರಕರ ವೇತನವನ್ನು ಕೆಲವು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇಲ್ಲಿವರೆಗೆ ನೀಡುತ್ತಿಲ್ಲ. ಮೇಲ್ವಿಚಾರಕರು ಬತಡತನ ಕುಟುಂಬದಿಂದ ಬಂದವರಾಗಿದ್ದು, ಪ್ರತಿ ತಿಂಗಳ ವೇತನ ಪಾವತಿ ಆಗದಿದ್ದರೇ ಮಕ್ಕಳ ಶಿಕ್ಷಣ, ಕುಟುಂಬದ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಜಿಪಂ ವತಿಯಿಂದ ಮೇಲ್ವಿಚಾರಕರಿಗೆ ಇಲ್ಲಿಯವರೆಗೆ ಬರಬೇಕಾದ ಮೊತ್ತ ಕೂಡಾ ಪ್ರತಿ ತಿಂಗಳು ಪಾವತಿಯಾಗುತ್ತಿಲ್ಲ. ಕೂಡಲೇ ಗ್ರಾಪಂ ಸಿಬ್ಬಂದಿ ಜೊತೆಗೆ ಪ್ರತಿ ತಿಂಗಳು ತಾಲೂಕಿನ ಎಲ್ಲ ಗ್ರಂಥಾಲಯ ಮೇಲ್ವಿಚಾರಕರಿಗೆ ವೇತನ ಪಾವತಿ ಮಾಡುವಂತೆ ಪಿಡಿಒಗಳಿಗೆ ಸೂಚನೆ ನೀಡುವ ಮೂಲಕ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಪಂಚಾಯಿತಿಯಿಂದ ಬರಬೇಕಾದ ಬಾಕಿ ಇರುವ ವ್ಯತ್ಯಾಸದ ಮೊತ್ತ ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ ಮನವಿ ಸ್ವೀಕರಿಸಿ, ತಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಹಾಗೂ ತಾಲೂಕಿನಲ್ಲಿರುವ ಪ್ರತಿ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರಿಗೆ ವೇತನ ಮತ್ತು ಪತ್ರಿಕೆಗಳ ಬಿಲ್‌ ಬಾಕಿ ಉಳಿಯದಂತೆ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಇನ್ನು ಬಾಕಿ ಉಳಿದಿರುವ ಮೇಲ್ವಿಚಾರಕರ ವೇತನವನ್ನು ಎರಡು ದಿನಗಳಲ್ಲಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಂಘದ ತಾಲೂಕು ಉಪಾಧ್ಯಕ್ಷ ಜ್ಯೋತಿಭಾ ಶಿಂಧೆ, ಪ್ರಧಾನ ಕಾರ್ಯದರ್ಶಿ ಅಶೋಕ ಕೋಳಿ, ಖಜಾಂಚಿ ಶೀತಲ ನೇಮಗೌಡ, ಸಂಚಾಲಕ ಮಲ್ಲಿಕಾರ್ಜುನ ನಾವ್ಹಿ, ಮಲ್ಲಯ್ಯ ಮಠಪತಿ, ಸಿದ್ದಲಿಂಗ ಗುಮಟಿ, ಮುತ್ತಪ್ಪ ಬಳಿಗಾರ, ರಮೇಶ ಸಿಂದಗಿ, ಎಂ.ಎಂ.ಬೇನಾಡಿ, ಆರ್.ಪಿ.ಕಾಂಬಳೆ, ಬಿ.ವೈ.ಬಡೆಯರ, ಗುರುರಾಜ ಹೊಸಪೇಠ, ಆರ್.ಕೆ.ಕಾಂಬಳೆ, ವಿರೂಪಾಕ್ಷಯ್ಯ ಕಾಡದೇವರಮಠ, ಸುರೇಶ ಅಥಣಿ, ಮಹಾಂತೇಶ ನಾಟೇಕಾರ, ತಾನಾಜೀ ಸಾಳುಂಕೆ, ಬಿ.ವೈ.ಅಸೂದೆ, ಬಿ.ಎಸ್.ಪಾಟೀಲ, ಮಹೇಶ ಶಿರಗುಪ್ಪಿ ಸೇರಿದಂತೆ ಎಲ್ಲ ಮೇಲ್ವಿಚಾರಕರು ಇದ್ದರು.