ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ದೇವೇಗೌಡರು ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಗೆ ಒಂದು ಗಂಟೆಯಲ್ಲಿ ಕೈ ಹಿಡಿದು ಸಹಿ ಹಾಕಿಸುತ್ತೇನೆ ಎಂದಿದ್ದರು. ಆದರೆ ಆ ಕೆಲಸ ಇದುವರೆಗೆ ಯಾಕೆ ಆಗಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು.ಬಿಜೆಪಿಯಿಂದ ಜನರಿಗೆ ಮೋಸ:ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಯೂತ್ ಕಾಂಗ್ರೆಸ್ ಸಮಿತಿ ವತಿಯಿಂದ ಭಾನುವಾರ ನಡೆದ ಯುವ ಪರ್ವ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ , ಮೇಕೆದಾಟು ಯೋಜನೆಗೆ ಅನುಮೋದನೆ ನೀಡಬೇಕಾದರೆ ಕೇಂದ್ರದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಮಾತ್ರ ಸಾಧ್ಯ. ಅವರು ಪ್ರಧಾನಿಯಾದರೆ ಅವರ ಕೈಹಿಡಿದು ನಾನೇ ಒಂದು ಗಂಟೆಯೊಳಗೆ ಅನುಮೋದನೆ ಕೊಡಿಸುತ್ತೇನೆ ಎಂದು ರಾಜ್ಯ ಜನತೆಗೆ ಭರವಸೆ ನೀಡಿದ್ದರು. ಆದರೆ ಇಷ್ಟು ವರ್ಷವಾದರೂ ಯಾವುದೇ ಸಹಿ ಹಾಕಿಸಿಲ್ಲ, ಜೆಡಿಎಸ್‌ನವರು ಅಧಿಕಾರದ ಆಸೆಗೆ ಬಿಜೆಪಿಯವರಿಗೆ ಗುಲಾಮಗಿರಿ ಮಾಡುತ್ತಿದ್ದಾರೆ ಇದು ಹೆಚ್ಚು ದಿನ ಇರುವುದಿಲ್ಲ. ಕೇಂದ್ರ ಸರ್ಕಾರಕ್ಕೆ ಜನರ ೧ ರುಪಾಯಿ ತೆರಿಗೆ ನೀಡಿದರೆ ರಾಜ್ಯಕ್ಕೆ ಕೇವಲ ೧೩ ಪೈಸೆ ಮಾತ್ರ ಹಣ ಹಿಂತಿರುಗಿಸುತ್ತಾರೆ. ಆದರೆ ಯುಪಿ ಮತ್ತು ಬಿಹಾರಕ್ಕೆ ಹೆಚ್ಚು ಹಣ ನೀಡುತ್ತಿರುವುದು ಎಷ್ಟು ಮಟ್ಟಿಗೆ ಸರಿ, ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕೇಂದ್ರ ಸರ್ಕಾರದ ಮುಂದೆ ಪ್ರತಿಭಟನೆ ನಡೆಸಿದರೂ ಸಹ ಹಣ ನೀಡದೆ ಜನರಿಗೆ ಮೋಸ ಮಾಡುತ್ತಿರುವ ಬಿಜೆಪಿ ಬಂಡ ಸರ್ಕಾರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಸಿಎಂ ಮತ್ತು ಡಿಸಿಎಂ ಅಧಿಕಾರ ನಡೆಸಲು ಬಿಡದ ಬಿಜೆಪಿಯವರು ಇಡಿ, ಸಿಬಿಐ, ತೆರೆಗೆ ಇಲಾಖೆಯವನ್ನು ಛೂ ಬಿಟ್ಟು ಭಯಹುಟ್ಟಿಸುವ ಕೆಲಸ ಮಾಡುತ್ತಿದೆ ಆದರೆ ರಾಜ್ಯ ಬಿಜೆಪಿ ನಾಯಕರು ಜನರ ತೆರಗಿಗೆ ಹಣ ಕೊಡಿಸುವುದನ್ನು ಬಿಟ್ಟು ಜನರೊಂದಿಗೆ ಆಟ ಆಡುತ್ತಿದ್ದಾರೆ.
ಕನ್ನಡಿಗರ ಮೇಲೆ ಹಿಂದಿ ಹೇರಿಕೆ:ಕನ್ನಡಿಗರ ಭಾಷೆ ಮೇಲೆ ಹಿಂದಿ ಹೇರಿಕೆ ನಡೆಸಿ ಒಂದು ದೇಶ ಒಂದು ಚುನಾವಣೆ ಎಂದು ಜನರಿಗೆ ಹೇರಿಕೆ ಮಾಡುತ್ತಿರುವುದು ಸರಿಯಲ್ಲ, ಹೊಯ್ಸಳರ ನಾಡಿನಲ್ಲಿ ಇರುವ ಹಾಸನದ ಜನತೆ ಹಿಂದಿ ಕಲಿಯಬೇಕೆ, ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯನ್ನೇ ನಿರ್ನಾಮ ಮಾಡಲು ಹೊರಟ ಬಿಜೆಪಿ ಸರ್ಕಾರಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತಾರೆ. ಆದ್ದರಿಂದ ಯೂತ್ ಕಾಂಗ್ರೆಸ್‌ನ ಕಾರ್ಯಕರ್ತರುಗಳು ಪ್ರತಿ ಹಳ್ಳಿಹಳ್ಳಿಗೆ ತೆರಳಿ ರೈತರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಬಿಜೆಪಿ ನಡೆಸುತ್ತಿರುವ ಧೋರಣೆಯ ಬಗ್ಗೆ ತಿಳಿಸಿ. ಏಕೆಂದರೆ ನಿಮ್ಮಿಂದಲೇ ಪಕ್ಷ ಸಂಘಟನೆಯಾಗುವುದು, ಯೂತ್ ಕಾಂಗ್ರೆಸ್‌ನಲ್ಲಿ ದುಡಿದ ನನ್ನಂಥ ಎಷ್ಟೋ ಜನ ಶಾಸಕರು, ಮಂತ್ರಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಗೋಪಾಲಸ್ವಾಮಿಯವರಿಗೆ ಭವಿಷ್ಯವಿದ್ದು ಎಲ್ಲರೂ ಕೈಜೋಡಿಸಿ ಅವರಿಗೆ ಬಲತುಂಬುವ ಕೆಲಸ ಮಾಡಿ ಎಂದರು.
ಬಿಜೆಪಿ - ಜೆಡಿಎಸ್ ವಿರುದ್ಧ ಗುಡುಗು:ಬಿಜೆಪಿ ಜೊತೆ ಜೆಡಿಎಸ್‌ನವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದು ಲೋಕಸಭಾ ಸದಸ್ಯ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಇಂದಿನಿಂದಲೇ ಸಂಘಟಿತರಾಗಿ ಕೆಲಸ ಮಾಡಬೇಕು, ನಾನೂ ಕೂಡ ಯೂತ್ ಕಾಂಗ್ರೆಸ್ ಕಾರ್ಯಕರ್ತನಾಗಿ, ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನಾನು ರಾಜಕೀಯಕ್ಕೆ ಬರಲು ಯೂತ್ ಕಾಂಗ್ರೆಸ್ ಸಂಘಟನೆಯೇ ಕಾರಣ ಜಿಲ್ಲೆಯ ೭ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲಿಸುವುದೇ ನಮ್ಮ ಮುಂದಿನ ಗುರಿಯಾಗಿದ್ದು ಕಾಂಗ್ರೆಸ್ ಪಕ್ಷ ಗಟ್ಟಿಯಾಗಲು ಹೆಚ್ಚು ಯುವಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಇದರಿಂದ ಪಕ್ಷ ಸದೃಢಗೊಳ್ಳುತ್ತದೆ, ರಾಜ್ಯ ಸರ್ಕಾರ ನೀಡುತ್ತಿರುವ ಐದು ಗ್ಯಾರಂಟಿಗಳು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗೆ ವರದಾನವಾಗಲಿದ್ದು, ಹಳ್ಳಿಹಳ್ಳಿಗಳಿಗೆ ತೆರಳಿ ಜನರಿಗೆ ಸರ್ಕಾರದ ಯೋಜನೆಗಳನ್ನು ತಿಳಿಸಲು ಯೂತ್ ಕಾಂಗ್ರೆಸ್ ಮುಂದಾಗಬೇಕು ಎಂದರು.
ಅರಸೀಕೆರೆ ಶಾಸಕ ಕೆ. ಎಂ. ಶಿವಲಿಂಗೇಗೌಡ ಮಾತನಾಡಿ, ನಾನು ಮೂಲ ಕಾಂಗ್ರೆಸಿಗನು. ನಾನು ಶಾಸಕನಾಗುವ ಮೊದಲೇ ಮೂರು ವರ್ಷ ಎನ್. ಎಸ್. ಯುನಲ್ಲಿ ಕೆಲಸ ಮಾಡಿದ್ದೇನೆ. ತದನಂತರ ಜೆಡಿಎಸ್ ಪಕ್ಷಕ್ಕೆ ಹೋಗಿದ್ದು, ಆದರೆ ನಾನು ಬೇರೆ ಪಕ್ಷದಿಂದ ಬಂದವನು ಎಂದು ಹೇಳುವ ಜನರಿಗೆ ತಿಳಿಸಿದ್ದೇನೆ. ನಾನು ಮೂಲ ಕಾಂಗ್ರೆಸ್ ಪಕ್ಷದವನು, ೬೫ ಸಾವಿರ ಕೋಟಿ ಕೊಟ್ಟು ರಾಜ್ಯದ ಜನತೆಗೆ ಕೇಂದ್ರ ಸರ್ಕಾರ ಮೋಸ ಮಾಡಿದೆ ಜನರು ನೀಡುವ ತೆರಿಗೆ ಹಣಕ್ಕೆ ಸರಿಯಾದ ಹಣ ಕೇಂದ್ರದಿಂದ ಬರುತ್ತಿಲ್ಲ. ಹಣ ಕಾಸಿನ ಪರಿಸ್ಥಿತಿ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ. ಬೀದಿಗೆ ಬಂದು ಹೇಳಲು ಅದನ್ನು ಬಿಟ್ಟು ಜನರಿಗೆ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದರು.ಶಾಸಕ ರಿಜ್ವಾನ್ ಹರ್ಷದ್, ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜೇಗೌಡ, ಮಾಜಿ ಶಾಸಕ ಸಿ. ಎನ್. ಪುಟ್ಟೇಗೌಡ, ಮಾಜಿ ಎಂಎಲ್ಸಿ ಎಂ.ಎ. ಗೋಪಾಲಸ್ವಾಮಿ ಮಾತನಾಡಿದರು. ರಾಜ್ಯ ಯೂತ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಶಶಾಂಕ್ ಗೋಪಾಲಸ್ವಾಮಿ ಗಣ್ಯರನ್ನು ಸ್ವಾಗತಿಸಿ ಮಾತನಾಡಿದರು. ಇದಕ್ಕೂ ಮುನ್ನ ಪಟ್ಟಣದ ಮಖಾನ್ ಬಳಿಯಿಂದ ಬೃಹತ್ ಬೈಕ್ ರ್‍ಯಾಲಿ ನಡೆಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹೊಸ ಬಸ್ ನಿಲ್ದಾಣದ ಮಾರ್ಗವಾಗಿ ನವೋದಯ ವೃತ್ತದಿಂದ ವೇದಿಕೆ ಬಳಿಗೆ ಜಮಾವಣೆಗೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ಎಚ್. ಕೆ. ಮಹೇಶ್, ಸಿ.ವಿ.ರಾಜಪ್ಪ, ಅಣತಿಶೇಖರ್, ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ರಂಜಿತ್, ಉಸ್ತುವಾರಿಗಳಾದ ದಿವ್ಯಾಆರತಿ, ಸುನಿಲ್‌ಗೌಡ, ಕುಮಾರ್, ಅಣತಿ ಆನಂದ್, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್ ಗೌಡ, ಮುಖಂಡರಾದ ಯುವರಾಜ್, ಕಾರ್ತಿಕ್, ವೇಣುಕುಮಾರ್, ಹರೀಶ್, ದೊರೆ ಯಾದವ್ ಮತ್ತಿತರಿದ್ದರು.* ಬಾಕ್ಸ್: ಪರೋಕ್ಷವಾಗಿ ಮಂತ್ರಿ ಸ್ಥಾನಕ್ಕೆ ಕೆಎಂಶಿ ಬೇಡಿಕೆ: ನಮ್ಮದು ಐದು ವರ್ಷದ ಸುಭದ್ರ ಸರ್ಕಾರ ಸಿದ್ದರಾಮಯ್ಯನವರು ಮತ್ತು ಡಿ. ಕೆ. ಶಿವಕುಮಾರ್‌ರವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಬೇಕಾಗಿಲ್ಲ. ನಮಗೆ ಜಿಲ್ಲಾ ಮಂತ್ರಿ ಕೊಟ್ಟು ನೋಡಿ ಜಿಲ್ಲೆಯಲ್ಲಿ ಹೇಗೆ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಿ ಅಧಿಕಾರ ನಡೆಸಬೇಕೆಂದು ತೋರಿಸಿಕೊಡುತ್ತೇನೆ ಎಂದು ಸಚಿವರಿಗೆ ಹೇಳುವ ಮೂಲಕ ಅರಸೀಕೆರೆ ಶಾಸಕ ಕೆ. ಎಂ. ಶಿವಲಿಂಗೇಗೌಡ ಪರೋಕ್ಷವಾಗಿ ಸಚಿವ ಸ್ಥಾನ ಆಸೆ ಹೊರಹಾಕಿದರು.