ಮಿಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಕುಮಾರ್ ದಿಢೀರ್ ಭೇಟಿ:ವೈದ್ಯಾಧಿಕಾರಿಗಳು, ಸಿಬ್ಬಂದಿಗೆ ಸ್ಥಳದಲ್ಲೇ ತರಾಟೆ

KannadaprabhaNewsNetwork |  
Published : Jan 23, 2025, 12:48 AM IST
೨೨ಕೆಎಂಎನ್‌ಡಿ-೫ಮಿಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ಕುಮಾರ ದಿಢೀರ್ ಭೇಟಿ ನೀಡಿದ ವೇಳೆ ಶೌಚಾಲಯದ ಬಾಗಿಲು ಮುರಿದಿರುವುದನ್ನು ವೀಕ್ಷಿಸಿದರು. | Kannada Prabha

ಸಾರಾಂಶ

ಜೂನ್ ಮಾಹೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು ಸಭೆ ನಡೆಸಿದಾಗ ೩ ತಿಂಗಳೊಳಗೆ ಕ್ಯಾನ್ಸರ್ ಆಸ್ಪತ್ರೆ ಕೆಲಸ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು. ಇದುವರೆಗೂ ಪೂರ್ಣಗೊಳ್ಳದಿರುವುದಕ್ಕೆ ಕಾರಣವೇನು. ಫೆಬ್ರವರಿ ಅಂತ್ಯದೊಳಗೆ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶಿಸಿದರು. ಸಿಟಿ ಸ್ಕ್ಯಾನ್, ಎಂಆರ್‌ಐ, ಅಲ್ಟ್ರಾಸೌಂಡ್, ಡಯಾಲಿಸಿಸ್, ಆ್ಯಂಬ್ಯುಲೆನ್ಸ್, ಮಿಮ್ಸ್‌ನಲ್ಲಿ ನಡೆಯುತ್ತಿರುವ ಕ್ರಿಟಿಕಲ್ ಕೇರ್ ಯುನಿಟ್, ಗ್ರಂಥಾಲಯ, ಆರೋಗ್ಯ ಧಾಮ, ಹೊರಗುತ್ತಿಗೆ ನೌಕರರಿಗೆ ಪಿಎಫ್ ಪಾವತಿ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಕುರಿತಂತೆ ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಬುಧವಾರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವಚ್ಛತೆ, ಅವ್ಯವಸ್ಥೆ, ರೋಗಿಗಳ ಆರೈಕೆಯನ್ನು ಸರಿಯಾಗಿ ಮಾಡದ ವೈದ್ಯರು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಬುಧವಾರ ಬೆಳಗ್ಗೆ ೧೦.೩೦ಗಂಟೆ ಸಮಯಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿದರು. ದಿಢೀರ್ ಭೇಟಿಯಿಂದ ಮಿಮ್ಸ್ ನಿರ್ದೇಶಕರೂ ಸೇರಿದಂತೆ ವೈದ್ಯಾಧಿಕಾರಿಗಳು ಗಾಬರಿಗೊಳಗಾದರು. ಜಿಲ್ಲಾಧಿಕಾರಿಗಳು ಮೊದಲು ನೇರವಾಗಿ ವಾರ್ಡ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಬಾಗಿಲು ಮುರಿದು ೩ ತಿಂಗಳಾದರೂ ಬದಲಿಸಿಲ್ಲ:

ಅವರು ಭೇಟಿ ನೀಡಿದ ವಾರ್ಡ್‌ಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿತ್ತು. ಕೆಲವು ಶೌಚಾಲಯಗಳ ಬಾಗಿಲು ಮುರಿದು ಮೂರು ತಿಂಗಳಾಗಿದ್ದರೂ ಬದಲಾವಣೆ ಮಾಡಿಲ್ಲದಿರುವುದು ಕಂಡುಬಂದಿತು. ಶೌಚಾಲಯಗಳ ಬಾಗಿಲು ಮುರಿದು ಮೂರು ತಿಂಗಳಾಗಿದ್ದರೂ ಯಾರ ಗಮನಕ್ಕೆ ತಂದಿದ್ದೀರಿ. ಯಾರಿಗಾದರೂ ಪತ್ರ ಬರೆದಿದ್ದರೆ ಕೊಡುವಂತೆ ಸಿಬ್ಬಂದಿಯನ್ನು ಕೇಳಿದರು. ಆಗ ಸಿಬ್ಬಂದಿ ದಾಖಲೆ ಕೊಡುವುದಕ್ಕೆ ತಡವರಿಸಿದರು.

ಸಿಬ್ಬಂದಿಯೇನೋ ನೋಡಲಿಲ್ಲ. ವೈದ್ಯಾಧಿಕಾರಿಗಳಾಗಿ ನೀವು ಏನು ಮಾಡುತ್ತಿದ್ದೀರಿ. ನಿತ್ಯ ರೌಂಡ್ಸ್ ಬರುವಾಗ ಇವೆಲ್ಲವನ್ನೂ ನೋಡಬೇಕು ತಾನೇ. ನಾನು ಬಂದು ನೋಡಿ ಬಾಗಿಲನ್ನು ಬದಲಾಯಿಸುವಂತೆ ಹೇಳಬೇಕಾ. ನೀವೆಲ್ಲಾ ಏನು ಕೆಲಸ ಮಾಡುತ್ತೀರಿ. ಆಸ್ಪತ್ರೆಯನ್ನು ಹೇಗಿಟ್ಟುಕೊಳ್ಳಬೇಕೆಂಬ ಸಾಮಾನ್ಯ ಜ್ಞಾನ ಇಲ್ಲವಲ್ರೀ ಎಂದು ವೈದ್ಯಾಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ರೋಗಿಗಳ ಬೆಡ್‌ಗಳ ಬಳಿಯೇ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಸಿಬ್ಬಂದಿ ವಿರುದ್ಧ ಕಿಡಿಕಾರಿದರು.

ಸ್ನಾನ ಗೃಹದಲ್ಲಿ ಬಕೆಟ್, ಮಗ್ ಇಲ್ಲ. ಕೈ ತೊಳೆಯುವ ಸಿಂಕ್‌ಗಳ ನಲ್ಲಿಗಳು ಮುರಿದು ಹೋಗಿವೆ. ಇವೆಲ್ಲಾ ಸಣ್ಣ ಪುಟ್ಟ ಕೆಲಸಗಳಾಗಿದ್ದು, ಕಚೇರಿ ವೆಚ್ಚದಲ್ಲೇ ಸರಿಪಡಿಸಬಹುದಾಗಿದ್ದರೂ ಏಕೆ ಸರಿಪಡಿಸಿಲ್ಲ. ಇದರಲ್ಲೇ ಆಸ್ಪತ್ರೆ ನಿರ್ವಹಣೆ ಬಗ್ಗೆ ನಿಮಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ವ್ಯಂಗವಾಗಿ ವೈದ್ಯಾಧಿಕಾರಿಗಳಿಗೆ ತಿವಿದರು.

೧೦೫ ಕ್ಲೀನಿಂಗ್ ಸಿಬ್ಬಂದಿ ಏನ್ಮಾಡ್ತಿದ್ದಾರೆ?:

ಆಸ್ಪತ್ರೆಯಲ್ಲಿ ೧೦೫ ಮಂದಿ ಕ್ಲೀನಿಂಗ್ ಸಿಬ್ಬಂದಿ ಇದ್ದಾರೆ ಎನ್ನುತ್ತೀರಿ. ಸ್ವಚ್ಛತೆ ಎಲ್ಲಿ ಕಾಪಾಡಿದ್ದಾರೆ. ಮಿಮ್ಸ್ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು ಇತರೆ ವೈದ್ಯಾಧಿಕಾರಿಗಳು ನಿತ್ಯವೂ ಹೋಗಿ ಶೌಚಾಲಯ ವ್ಯವಸ್ಥೆ, ಅಲ್ಲಿನ ಸ್ವಚ್ಛತೆ, ಆಹಾರದ ಗುಣಮಟ್ಟ, ವಾರ್ಡ್‌ಗಳಲ್ಲಿ ರೋಗಿಗಳಿಗಿರುವ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡು ಅವುಗಳಿಗೆ ಪರಿಹಾರ ಸೂಚಿಸಬೇಕು. ಸುಮ್ಮನೆ ಕಚೇರಿಯಲ್ಲೇ ಕುಳಿತರೆ ಎಲ್ಲವೂ ಸರಿಹೋಗುವುದೇ ಎಂದು ಖಾರವಾಗಿಯೇ ಪ್ರಶ್ನಿಸಿದರು.

ಆಸ್ಪತ್ರೆಯ ಉಸ್ತುವಾರಿ ಹೊಣೆ ಹೊತ್ತಿರುವವರು ಸ್ವಚ್ಛತೆ ಕಾಪಾಡುವುದು, ರೋಗಿಗಳ ಸಮಸ್ಯೆಗೆ ಸ್ಪಂದಿಸುವುದು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು, ಔಷಧಗಳು ಸಮರ್ಪಕವಾಗಿ ರೋಗಿಗಳಿಗೆ ಸಿಗುತ್ತಿವೆಯೇ, ವೈದ್ಯರ ಕಾರ್ಯನಿರ್ವಹಣೆ ಹೇಗಿದೆ ಎಂಬುದನ್ನೆಲ್ಲಾ ಆಗಾಗ ಪರಿಶೀಲಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುವ ಮೂಲಕ ರೋಗಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಸೂಚಿಸಿದರು.

ಕರ್ತವ್ಯದಲ್ಲಿಲ್ಲದ ವೈದ್ಯರ ವಿರುದ್ಧ ಕ್ರಮ ಜರುಗಿಸಿ:

ವೈದ್ಯರು ಸಮರ್ಪಕವಾಗಿ ಆಸ್ಪತ್ರೆಯಲ್ಲಿ ಇಲ್ಲದಿರುವುದು, ರೋಗಿಗಳನ್ನು ತಪಾಸಣೆ ಮಾಡದಿರುವ ಬಗ್ಗೆಯೂ ದೂರುಗಳು ಕೇಳಿಬರುತ್ತಿವೆ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಸಮಯದಲ್ಲೂ ಖಾಸಗಿ ಆಸ್ಪತ್ರೆಗಳಲ್ಲಿರುವ ಬಗ್ಗೆ ದೂರುಗಳಿವೆ. ಇದರ ಬಗ್ಗೆ ಮಿಮ್ಸ್ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು ಗಮನಹರಿಸಿ ಕರ್ತವ್ಯದ ವೇಳೆ ಹೊರಗೆ ಕಾರ್ಯನಿರ್ವಹಿಸುವ ವೈದ್ಯರ ವಿರುದ್ಧವೂ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದರು.

ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ವೀಲ್ ಚೇರ್ ಮೂಲಕ ರೋಗಿಗಳನ್ನು ಕರೆದುಕೊಂಡು ಹೋಗಲು ೨೦ ವಾರ್ಡ್ ಬಾಯ್ ಗಳಿದ್ದಾರೆ. ಕೆಲವು ಸಂದರ್ಭದಲ್ಲಿ ಹೆಚ್ಚಿನ ರೋಗಿಗಳು ಬಂದಾಗ ಒಟ್ಟಿಗೆ ಕರೆದೊಯ್ಯುವ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ರೋಗಿಗಳೊಂದಿಗೆ ಸಹನೆಯಿಂದ ವರ್ತಿಸಿ ಕೆಲಸ ನಿರ್ವಹಿಸುವಂತೆ ತಿಳಿಸಲು ಸೂಚಿಸಿದರು.

ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿ ಮುಗಿದಿಲ್ಲವೇಕೆ?:

ಜೂನ್ ಮಾಹೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು ಸಭೆ ನಡೆಸಿದಾಗ ೩ ತಿಂಗಳೊಳಗೆ ಕ್ಯಾನ್ಸರ್ ಆಸ್ಪತ್ರೆ ಕೆಲಸ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು. ಇದುವರೆಗೂ ಪೂರ್ಣಗೊಳ್ಳದಿರುವುದಕ್ಕೆ ಕಾರಣವೇನು. ಫೆಬ್ರವರಿ ಅಂತ್ಯದೊಳಗೆ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶಿಸಿದರು. ಸಿಟಿ ಸ್ಕ್ಯಾನ್, ಎಂಆರ್‌ಐ, ಅಲ್ಟ್ರಾಸೌಂಡ್, ಡಯಾಲಿಸಿಸ್, ಆ್ಯಂಬ್ಯುಲೆನ್ಸ್, ಮಿಮ್ಸ್‌ನಲ್ಲಿ ನಡೆಯುತ್ತಿರುವ ಕ್ರಿಟಿಕಲ್ ಕೇರ್ ಯುನಿಟ್, ಗ್ರಂಥಾಲಯ, ಆರೋಗ್ಯ ಧಾಮ, ಹೊರಗುತ್ತಿಗೆ ನೌಕರರಿಗೆ ಪಿಎಫ್ ಪಾವತಿ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.

ಸಿವಿಲ್ ಕಾಮಗಾರಿ ಪೂರ್ಣಗೊಂಡ ನಂತರ ಎಫ್‌ಡಿ ಅವರು ಸಿಬ್ಬಂದಿ ನೇಮಕಾತಿಗೆ ಅನುಮತಿ ನೀಡುತ್ತಾರೆ. ಬಂಕರ್ ಅಳವಡಿಸಲು ಸುಮಾರು ೩ ತಿಂಗಳು ಬೇಕಾಗುತ್ತದೆ ಎಂದು ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ಮಾಹಿತಿ ನೀಡಿದರು.

ಮಿಮ್ಸ್‌ನಲ್ಲಿ ೧೦ ಸರ್ಜನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ದಿನ ಸುಮಾರು ಸರಾಸರಿ ೩೬ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಇಲ್ಲಿ ದೊರೆಯುವ ಸೌಲಭ್ಯಕ್ಕಾಗಿ ಖಾಸಗಿ ಆಸ್ಪತ್ರೆ ಸಂಪರ್ಕಿಸಿ ಎಂದು ರೋಗಿಗಳಿಗೆ ತಿಳಿಸುತ್ತಿಲ್ಲ ಎಂದು ನರಸಿಂಹಮೂರ್ತಿ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ,ಶಿವಕುಮಾರ್, ಅರ್‌ಎಂಒ ಡಾ.ದರ್ಶನ್‌ಕುಮಾರ್, ಸಿಎಒ ಜಾನ್ಸನ್, ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಹನುಮಂತ ಪ್ರಸಾದ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!