ಕನ್ನಡಪ್ರಭ ವಾರ್ತೆ ಹಾಸನ
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಂಗವಿಕಲರ ಕಲ್ಯಾಣಾಧಿಕಾರಿ ಅನುಪಮಾ ಅವರು ಮಾತನಾಡಿ, ಬಸ್ಸಿನಲ್ಲಿ ಪ್ರಯಾಣಿಸುವ 40ರಿಂದ 50 ಜನರ ಪ್ರಾಣವೂ ಒಬ್ಬ ಬಸ್ಸಿನ ಚಾಲಕ ಮತ್ತು ನಿರ್ವಾಹಕರ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಇವರು ಸಮಯ ಪ್ರಜ್ಞೆ, ಯಾವುದೇ ದುಶ್ಚಟಗಳಿಗೆ ದಾಸರಾಗದೆ ತಮ್ಮ ಕೆಲಸವನ್ನು ಜವಾಬ್ದಾರಿಯಿಂದ, ಕಾರ್ಯನಿಷ್ಠೆಯಿಂದ ನಿರ್ವಹಿಸಬೇಕೆಂದು ಸಭೆಯಲ್ಲಿ ನೆರೆದಿದ್ದ ಸಿಬ್ಬಂದಿಗೆ ಕಿವಿಮಾತು ಹೇಳಿದರು.
ಮಾದಕ ವಸ್ತುಗಳ ಮಾರಾಟವು ಮೊದಲು ಎಂಜಿನಿಯರ್ ಕಾಲೇಜುಗಳ ಸಮೀಪ ಮಾತ್ರ ಸೀಮಿತವಾಗಿತ್ತು. ಇದೀಗ ಪದವಿ ಪೂರ್ವ ಕಾಲೇಜುಗಳ ಹತ್ತಿರ ವ್ಯಾಪಿಸುತ್ತಿದೆ. ಇದು ಸಮಾಜಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ಹಾಗಾಗಿ ಕಾಲೇಜುಗಳ ಸಮೀಪ ಮಾರುವೇಷದಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ ಮಾರಾಟಗಾರರು ಕಂಡು ಬಂದಲ್ಲಿ ಬಂಧಿಸಬೇಕೆಂದು ತಿಳಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಗೀತಾಂಜಲಿ ಅವರು ಮಾತನಾಡಿ, ಅತಿಯಾದ ಮದ್ಯವ್ಯಸನದಿಂದ ನಮ್ಮ ಸಿಬ್ಬಂದಿಯ ಇಡೀ ಕುಟುಂಬವೇ ಬೀದಿಗೆ ಬೀಳುವ ಸ್ಥಿತಿ ಬರುತ್ತದೆ. ಹಾಗಾಗಿ ಪ್ರಾರಂಭದಲ್ಲೇ ಇಂತಹ ದುಶ್ಚಟಗಳಿಗೆ ನೀವುಗಳು ಬಲಿಯಾಗಬಾರದೆಂದು ಹಾಗೂ ಕೆಲಸದ ಒತ್ತಡವನ್ನು ಮರೆಮಾಚಲು ಮಾದಕ ವಸ್ತುಗಳ ದಾಸರಾಗಬಾರದೆಂಬ ಕಾಳಜಿಯಿಂದ ಅರಿವು ಮೂಡಿಸುವ ಈ ಕಾರ್ಯಕ್ರಮವನ್ನು ನಿಮಗೆ ಸದುಪಯೋಗವಾಗುವ ದೃಷ್ಟಿಯಿಂದ ಆಯೋಜಿಸಲಾಗಿದೆ. ಮಾದಕ ವಸ್ತುಗಳಿಂದ ನೀವು ಮಾಡುವ ಕೆಲಸಗಳಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗದೇ ಕೆಲಸದ ಕಾರ್ಯಕ್ಷಮತೆ ಕುಗ್ಗಿ ಅಸಮತೋಲನ ಉಂಟಾಗುತ್ತದೆ. ಇದರಿಂದ ಕೆಲಸ, ಕುಟುಂಬ, ಹಾಗೂ ಆರೋಗ್ಯವೂ ಹಾಳಾಗುತ್ತದೆ ಎಂದು ತಮ್ಮ ಸಿಬ್ಬಂದಿಗೆ ಎಚ್ಚರಿಕೆಯ ಹಿತನುಡಿಗಳನ್ನು ಹೇಳಿದರು.
ಮದ್ಯಪಾನ, ಬೀಡಿ, ಸಿಗರೇಟ್, ತಂಬಾಕು, ಗಾಂಜಾ, ಕೊಕೆನ್ ಸೇರಿದಂತೆ ಇನ್ನಿತರ ಚಟಗಳಿಗೆ ಒಮ್ಮೆ ಬಲಿಯಾದರೆ ಕೆಲವು ಕ್ಷಣಗಳಿಗೆ ಮಾತ್ರ ಅಮಲಿನ ನಶೆಯಲ್ಲಿ ತೇಲಿಸುತ್ತದೆ. ಇದು ಕ್ಷಣಿಕ ಸುಖವಾಗಿರುತ್ತದೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜೊತೆಗೆ ಕೆಲಸದ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚು ಗಮನ ಹರಿಸಲು ಬಿಡುವುದಿಲ್ಲ ಎಂದು ತಿಳಿಸಿದರು.
ಭುವನೇಶ್ವರಿ ಮದ್ಯಪಾನ ಸೇವನಿಗಳ ಸಮಗ್ರ ಪುನರ್ವಸತಿ ಕೇಂದ್ರದ ಯೋಜನಾ ನಿರ್ದೇಶಕರಾದ ಅಂಜಲಿ ಗೋವಿಂದ ರಾಜು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪ್ರಾದೇಶಿಕ ತರಬೇತಿ ಕೇಂದ್ರದ ಸಿಬ್ಬಂದಿ ವರ್ಗದವರು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು.