ಪರೀಕ್ಷೆ ಸನಿಹ; ಟಿವಿ, ಮೊಬೈಲ್ ಆಫ್ ಮಾಡಲು ಡಂಗೂರು

KannadaprabhaNewsNetwork |  
Published : Feb 23, 2026, 02:45 AM IST
19ಕೆಕೆಆರ್5:ಕುಕನೂರು ತಾಲೂಕಿನ ಅರಕೇರಿ ಗ್ರಾಮದಲ್ಲಿ ಮಕ್ಕಳ ಓದಿಗಾಗಿ ಮೋಬೈಲ್ ಹಾಗೂ ಟಿವಿ ಸ್ವೀಚ್ ಆಫ್ ಮಾಡಿ ಓದಿಸುವಂತೆ ಡಂಗೂರು ಸಾರುತ್ತಿರುವುದು. | Kannada Prabha

ಸಾರಾಂಶ

ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಉಳಿದ ತರಗತಿಗಳ ಮಕ್ಕಳ ಪರೀಕ್ಷಾ ಫಲಿತಾಂಶ ಹೆಚ್ಚಿಸಲು ಹಲವಾರು ಶೈಕ್ಷಣಿಕ ಅಭಿವೃದ್ಧಿ ಯೋಜನೆ ಜಾರಿಗೆ ತಂದಿದೆ.

ಕುಕನೂರು: ರಾತ್ರಿ ಹೊತ್ತು ಟಿವಿ, ಮೊಬೈಲ್ ಆಫ್ ಮಾಡಿ ಮಕ್ಕಳನ್ನು ಓದಲಿಕ್ಕೆ ಹಚ್ಚಬೇಕು, ಡಣ್,ಡಣ್, ಡಣ್ ಎಂದು ತಾಲೂಕಿನ ಚಂಡೂರು, ಅರಕೇರಿ ಗ್ರಾಮದಲ್ಲಿ ಮಕ್ಕಳ ಓದಿಗಾಗಿ ಶಾಲೆ, ಗ್ರಾಪಂನಿಂದ ಗ್ರಾಮೀಣ ಪ್ರದೇಶದಲ್ಲಿ ಡಂಗೂರು ಸಾರಿಸುತ್ತಿದ್ದಾರೆ.

ಪರೀಕ್ಷೆ ಸಮೀಪ ಬಂದಿರುವ ಹಿನ್ನೆಲೆ ಮಕ್ಕಳ ಆರೋಗ್ಯ, ವಿದ್ಯಾಭ್ಯಾಸ ಗಮನದಲ್ಲಿ ಇಟ್ಟುಕೊಂಡು ಶಿರೂರು ಗ್ರಾಪಂಗೆ ಒಳಪಡುವ ಚಂಡೂರು, ಅರಕೇರಿ ಗ್ರಾಮಗಳಲ್ಲಿ ಮೊಬೈಲ್ ಹಾಗೂ ಟಿವಿ ಬಂದ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಗ್ರಾಮದ ಪ್ರತಿ ಓಣಿ ಓಣಿಯಲ್ಲಿ ಡಂಗೂರು ಸಾರುತ್ತಿದ್ದಾರೆ.

ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಉಳಿದ ತರಗತಿಗಳ ಮಕ್ಕಳ ಪರೀಕ್ಷಾ ಫಲಿತಾಂಶ ಹೆಚ್ಚಿಸಲು ಹಲವಾರು ಶೈಕ್ಷಣಿಕ ಅಭಿವೃದ್ಧಿ ಯೋಜನೆ ಜಾರಿಗೆ ತಂದಿದೆ. ಇದರ ಜತೆಗೆ ಸಮುದಾಯ ಸಹಕಾರ ಸಹ ಅವಶ್ಯಕವಾಗಿದ್ದು, ಆ ನಿಟ್ಟಿನಲ್ಲಿ ಈ ಪ್ರಯತ್ನ.

ಈ ಟಿವಿ ಹಾಗೂ ಮೊಬೈಲ್‌ ಬಳಕೆಯಿಂದ ಮಕ್ಕಳು ಓದಿನತ್ತ ನಿರಾಸಕ್ತಿಗೊಳ್ಳುತ್ತಿದ್ದಾರೆ. ಕುಟುಂಬದವರು ಸಹ ಟಿವಿ ನೋಡುತ್ತಿರುತ್ತಾರೆ. ಇದು ಮಕ್ಕಳ ಅಭ್ಯಾಸದಲ್ಲಿ ಆಸಕ್ತಿ ಕಡಿಮೆ ಮಾಡಿಸುತ್ತದೆ. ಆ ನಿಟ್ಟಿನಲ್ಲಿ ದೈವವು (ಗ್ರಾಮಸ್ಥರು) ತಮ್ಮ ಮನೆಯ ಟಿವಿ ಸಂಜೆ ವೇಳೆ ಬಂದ್ ಮಾಡಿ ಶಾಲಾ ಹುಡುಗರನ್ನು ಓದಿಸಾಕ ಹಚ್ಚಬೇಕು ಎಂದು ಡಂಗೂರು ಸಾರುತ್ತಿದ್ದಾರೆ.

ಫಲಿತಾಂಶ ಸುಧಾರಣೆಗೆ ಕ್ರಮ:ತಾಲೂಕಿನ ಅರಕೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಾಲೆಯ ಶಿಕ್ಷಕರು ತಮ್ಮ ಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳ ಫಲಿತಾಂಶ ಸುಧಾರಣೆಗೆ ನಿತ್ಯ ಮಕ್ಕಳ ಮನೆಯ ಟಿವಿ, ಮೊಬೈಲ್ ಸ್ವಿಚ್ ಆಫ್ ಮಾಡಿಸಿ ಓದಿಸುವ ಅನಿವಾರ್ಯತೆ ಕಂಡುಕೊಂಡಿದ್ದಾರೆ. ಇದರಿಂದ ಪಾಲಕರ ಗಮನ ಸಹ ಮಕ್ಕಳ ಓದಿನ ಮೇಲೆ ಬರುತ್ತದೆ ಎಂದು ಶಿಕ್ಷಕರು ನಿರ್ಧರಿಸಿದ್ದಾರೆ. ಪರೀಕ್ಷೆ ಸಮಯದಲ್ಲಾದರೂ ಸಹ ಮಕ್ಕಳ ಮನಸ್ಸು ಓದಿನ ಕಡೆ, ಪರೀಕ್ಷೆ ಕಡೆ ಹೆಚ್ಚು ಗಮನ ಇರಲಿ ಎಂದು ಗ್ರಾಪಂ ಸಹಕಾರ ಮೂಲಕ ಗ್ರಾಮೀಣ ಪ್ರದೇಶದ ಪ್ರತಿ ಓಣಿಯಲ್ಲಿ ಡಂಗೂರು ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಶಾಲಾ ಮಕ್ಕಳ ಫಲಿತಾಂಶ ಹೆಚ್ಚಳ ಹಾಗೂ ಮಕ್ಕಳ ಶೈಕ್ಷಣಿಕ ಹಿತಕ್ಕಾಗಿ ಗ್ರಾಮಗಳಲ್ಲಿ ಟಿವಿ, ಮೊಬೈಲ್ ಸ್ವಿಚ್ ಆಫ್ ಮಾಡಿದರೆ ಮಕ್ಕಳು ಸಹ ಓದಿನತ್ತ ಆಸಕ್ತಿ ವಹಿಸುತ್ತಾರೆ ಹಾಗೂ ಪಾಲಕರು ಸಹ ಮಕ್ಕಳತ್ತ ಗಮನ ಹರಿಸುತ್ತಾರೆ ಎಂದು ಗ್ರಾಮಸ್ಥರೊಡನೆ ಚರ್ಚಿಸಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂ ಸಹಕಾರದಿಂದ ಟಿವಿ, ಮೊಬೈಲ್ ಸ್ವಿಚ್ ಆಫ್ ಮಾಡಿ ಮಕ್ಕಳನ್ನು ಓದಲು ಹಚ್ಚಿ ಎಂದು ಡಂಗೂರು ಸಾರಿಸಿದ್ದೇನೆ ಎಂದು ಅರಕೇರಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಬಾಶುಸಾಬ್ ಬಲ್ಲುಂಚಿ ಹಾಗು ಶಿಕ್ಷಕ ಬಸವರಾಜ ಮೇಟಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ 25 ಪುಸ್ತಕಗಳ ಲೋಕಾರ್ಪಣೆ, ಬೆರಗು ಪ್ರಶಸ್ತಿ ಪ್ರದಾನ
ಯಶಸ್ಸು ನೆತ್ತಿಗೆರಬಾರದು