ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

KannadaprabhaNewsNetwork |  
Published : Jun 10, 2025, 05:29 AM IST
ಬೆಂಡೆಕೆರೆ ಮೂಲಕ ಹಾದು ಹೋಗಿರುವ ಎನ್‌ಹೆಚ್‌ಎಐ ಬೈಪಾಸ್ ರಸ್ತೆಗೆ ಪಡೆದಿರುವ ಭೂಮಿಗೆ ಮಾರುಕಟ್ಟೆ ದರದ ಪ್ರಕಾರ ಪರಿಹಾರ ಕೊಡದೆ ಏಕಾಏಕಿ ಅಧಿಕಾರಿಗಳು, ಪೊಲೀಸರು ಬಂದು ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು. | Kannada Prabha

ಸಾರಾಂಶ

ಹೆದ್ದಾರಿಗಾಗಿ ಫಲವತ್ತಾದ ಭೂಮಿ ಸ್ವಾಧೀನ ಪಡಿಸಿಕೊಂಡು ಹಲವು ವರ್ಷಗಳೇ ಕಳೆದಿದ್ದರೂ, ಈವರೆಗೂ ಪರಿಹಾರ ನೀಡಿಲ್ಲ. ಆದರೂ ಕೆಲವು ಕಡೆ ಕಾಮಗಾರಿ ಮುಗಿಸಲಾಗಿದೆ ಎಂದು ಆರೋಪಿಸಿದರು. ಸರಿಯಾಗಿ ಪರಿಹಾರವನ್ನೂ ಕೊಡುವುದಿಲ್ಲ ಎಂದರೆ ನಾವು ಎಲ್ಲಿಗೆ ಹೋಗಬೇಕು. ನಾವು ಯಾರಿಗೂ ಧಮ್ಕಿ ಹಾಕಲು ಬಂದಿಲ್ಲ, ಡಿಸಿ ಅವರು ಹಿಂದೆ ನೀಡಿದ ಭರವಸೆಯಂತೆ ನಡೆಯಲಿ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಬೆಂಡೆಕೆರೆ ಮೂಲಕ ಹಾದು ಹೋಗುತ್ತಿರುವ ತುಮಕೂರು-ಶಿವಮೊಗ್ಗ ಹೆದ್ದಾರಿ ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿಗೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸ್ಥಳೀಯರು ಹಾಗೂ ರೈತರು ಪ್ರತಿಭಟನೆ ನಡೆಸಿದರು.ಹೆದ್ದಾರಿಗಾಗಿ ಫಲವತ್ತಾದ ಭೂಮಿ ಸ್ವಾಧೀನ ಪಡಿಸಿಕೊಂಡು ಹಲವು ವರ್ಷಗಳೇ ಕಳೆದಿದ್ದರೂ, ಈವರೆಗೂ ಪರಿಹಾರ ನೀಡಿಲ್ಲ. ಆದರೂ ಕೆಲವು ಕಡೆ ಕಾಮಗಾರಿ ಮುಗಿಸಲಾಗಿದೆ ಎಂದು ಆರೋಪಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಸಂತೋಷ್ ಕುಮಾರ್‌ ಹಾಗೂ ಹೆದ್ದಾರಿ ಅಧಿಕಾರಿಗಳು ರೈತರ ಮನವೊಲಿಸುವ ಪ್ರಯತ್ನ ಮಾಡಿದರು. ಹಿಂದೆ ಜಿಲ್ಲಾಧಿಕಾರಿ ಅವರು ಹಾಸನದ ತಮ್ಮ ಕಚೇರಿ ಎದುರು ಏನು ಭರವಸೆ ನೀಡಿದ್ದರೋ ಅದರಂತೆ ನಡೆದುಕೊಳ್ಳಲಿ. ಇಲ್ಲಿಗೆ ಆಗಮಿಸಿ ಅವರು ಸತ್ಯ ನುಡಿದರೆ ನಾವು ಖಂಡಿತ ಒಪ್ಪಿಕೊಳ್ಳುತ್ತೇವೆ ಎಂದು ರೈತರು ತಿಳಿಸಿದರು. ನಮಗೀಗ ದುಡಿದು ತಿನ್ನಲು ಭೂಮಿಯಿಲ್ಲ, ಸರಿಯಾಗಿ ಪರಿಹಾರವನ್ನೂ ಕೊಡುವುದಿಲ್ಲ ಎಂದರೆ ನಾವು ಎಲ್ಲಿಗೆ ಹೋಗಬೇಕು. ನಾವು ಯಾರಿಗೂ ಧಮ್ಕಿ ಹಾಕಲು ಬಂದಿಲ್ಲ, ಡಿಸಿ ಅವರು ಹಿಂದೆ ನೀಡಿದ ಭರವಸೆಯಂತೆ ನಡೆಯಲಿ ಎಂದರು. ಪರಿಹಾರ ಹೆಚ್ಚು ಕೊಡಲಿ, ಕಡಿಮೆ ಕೊಡಲಿ ಎಲ್ಲರೂ ಕಾನೂನು ಪ್ರಕಾರವೇ ನಡೆಯಬೇಕು. ಕಾನೂನು ಮೀರಿದರೆ ತಪ್ಪಾಗಲಿದೆ ಎಂದು ತಹಸೀಲ್ದಾರ್ ಮನವರಿಕೆ ಮಾಡಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಮುಖಂಡ ಚಂದ್ರಶೇಖರ್, ಬೆಂಡೆಕೆರೆ ಮೂಲಕ ಹಾದು ಹೋಗಿರುವ ಎನ್‌ಎಚ್‌ಎಐ ಬೈಪಾಸ್ ರಸ್ತೆಗೆ ಪಡೆದಿರುವ ಭೂಮಿಗೆ ಮಾರುಕಟ್ಟೆ ದರದ ಪ್ರಕಾರ ಪರಿಹಾರ ಕೊಡದೆ ಏಕಾಏಕಿ ಅಧಿಕಾರಿಗಳು, ಪೊಲೀಸರು ಬಂದು ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು.ಭ್ರಷ್ಟ ಅಧಿಕಾರಿಗಳಿಂದ ವಂಚನೆ:ರಸ್ತೆ ಪಕ್ಕ ಇರುವ ದರ ಪರಿಗಣನೆ ಮಾಡದೆ, ಒಂದೂವರೆ, ಎರಡು ಕಿ.ಮೀ. ಹಿಂದಿರುವ ಭೂಮಿಗೆ ತಗುಲುವ ದರದ ಅನ್ವಯ ಪರಿಹಾರ ಕೊಡಲು ಹುನ್ನಾರ ಮಾಡುತ್ತಿದ್ದಾರೆ. ಇದೇ ನಿಖರವಾದ ದರ ಎಂದು ನಂಬಿಸಿ ಅನ್ಯಾಯ ಎಸಗುತ್ತಿದ್ದಾರೆ ಎಂದು ಕಿಡಿಕಾರಿದರು. ಈಗಿನ ದರದಲ್ಲಿ ಗುಂಟೆಗೆ ಕಡಿಮೆ ಎಂದ್ರೆ ೧೦ ಲಕ್ಷ ಕೊಡಬೇಕು, ಆದರೆ ಇವರು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ, ರೈತರ ಮೇಲೆ ಕೇಸ್ ಮಾಡಿಸಲು ಕುತಂತ್ರ ಮಾಡುತ್ತಿದ್ದಾರೆ. ಚುನಾವಣೆ ವೇಳೆ ಮತ ಹಾಕಿಸಿಕೊಂಡ ಸ್ಥಳೀಯ ಶಾಸಕರು ನ್ಯಾಯ ಕೊಡಿಸಬೇಕು ಅಲ್ವಾ ಎಂದು ಖಾರವಾಗಿ ಪ್ರಶ್ನಿಸಿದರು.

ಭೂಮಿ ನೀಡಿರುವ ೨೫೦ ರಿಂದ ೩೦೦ ಮಂದಿ ಫಲಾನುಭವಿಗಳಿದ್ದು, ಹಿಂದೆ ಕೆಲವರ ಖಾತೆಗೆ ಹಾಕಿದ್ದ ಹಣವನ್ನೂ ಕೋರ್ಟ್‌ನಲ್ಲಿದೆ ಎಂದು ಸಬೂಬು ಹೇಳಿ ವಾಪಸ್ ಪಡೆದುಕೊಂಡಿದ್ದಾರೆ. ಇನ್ನೂ ಕೆಲ ಕಡೆ ರಸ್ತೆ ಕಾಮಗಾರಿ ಮುಗಿಸಿದ್ದರೂ ಪರಿಹಾರ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದರು.

ನಮಗೆ ಈಗಿನ ಮಾರುಕಟ್ಟೆ ದರದಲ್ಲೇ ಪರಿಹಾರ ನೀಡಬೇಕು. ಅಲ್ಲಿವರೆಗೂ ಹೋರಾಟ ಮುಂದುವರಿಯಲಿದೆ. ಅಧಿಕಾರ ಬಳಸಿ ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಬಾರದು ಎಂದರು. ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ